ಶಹಾಬಾದ: ನಗರದ ಬಾಲಕರ ವಸತಿ ನಿಲಯದ ಗೇಟ್ ಎದುರು ಚರಂಡಿಗಾಗಿ ತೋಡಿದ ತಗ್ಗು ಗುಂಡಿ ಹಾಗೂ ಮುಂಭಾಗದ ರಸ್ತೆಯಲ್ಲಿ ತೋಡಿದ ಚರಂಡಿಯನ್ನು ಹಾಗೆ ಬಿಡಲಾಗಿದ್ದು, ಅಪಾಯಕ್ಕೆ ಆಹ್ವಾನ ನೀಡಿದಂತಾಗಿದೆ.
ಈಗಾಗಲೇ ಚರಂಡಿ ನಿರ್ಮಾಣಕ್ಕಾಗಿ ತಗ್ಗು ತೋಡಿ ಅನೇಕ ವರ್ಷಗಳಾಗುತ್ತ ಬಂದಿದ್ದರೂ ಚರಂಡಿಯೂ ನಿರ್ಮಾಣ ಮಾಡಿಲ್ಲ. ಅಲ್ಲದೇ ತಗ್ಗು ಗುಂಡಿಯನ್ನು ಮುಚ್ಚಿಲ್ಲ. ಇದರಿಂದ ನಿತ್ಯ ವಸತಿ ನಿಲಯದ ವಿದ್ಯಾರ್ಥಿಗಳು ಹೊರಗೆ ಅಥವಾ ಒಳಗೆ ಬರಬೇಕಾದರೆ ಜೀವ ಕೈಯಲ್ಲಿ ಹಿಡಿದುಕೊಂಡು ಸಾಗಬೇಕಾಗಿದೆ.
ರಸ್ತೆ ಮೇಲೆ ತೆರಳುವ ವಾಹನ ಸವಾರರೊಂದಿಗೆ, ಹಾಸ್ಟೆಲ್ ವಿದ್ಯಾರ್ಥಿಗಳು ಬೀಳುವ ಸಾಧ್ಯತೆ ಇರುವುದರಿಂದ ಇದನ್ನು ಬೇಗನೆ ಮುಚ್ಚಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಈ ಬಗ್ಗೆ ಅನೇಕ ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದರೂ ಕ್ಯಾರೇ ಎನ್ನುತ್ತಿಲ್ಲ ಎಂಬುದು ವಿದ್ಯಾರ್ಥಿಗಳ ಅಂಬೋಣವಾಗಿದೆ. ಅಲ್ಲದೇ ಹಾಸ್ಟೆಲ್ ಮುಂಭಾಗದ ರಸ್ತೆಯಲ್ಲಿನ ಕಾಮಗಾರಿಯನ್ನು ಮಾಡದೇ ಇರುವುದರಿಂದ ಅದರಲ್ಲಿ ಕೊಳಚೆ ನೀರು ಸಂಗ್ರಹವಾಗಿ ಗಬ್ಬು ವಾಸನೆ ಹರಡುತ್ತಿದೆ.
ನಗರದ ಮುಖ್ಯ ರಸ್ತೆಯಲ್ಲಿ ಇಷ್ಟೊಂದು ಗಲೀಜು ವಾತಾವರಣ ಸೃಷ್ಟಿಯಾದರೂ ಯಾರು ಗಮನಹರಿಸುತ್ತಿಲ್ಲ ಎಂಬುದೇ ಖೇದದ ಸಂಗತಿಯಾಗಿದೆ. ಅಲ್ಲದೇ ದನಕರುಗಳು, ಮಕ್ಕಳು ಅದರಲ್ಲಿ ಬಿದ್ದ ಉದಾಹರಣೆಗಳು ಸಾಕಷ್ಟಿವೆ. ಆದರೂ ಗುತ್ತಿಗೆದಾರನ ವಿರುದ್ಧ ಕ್ರಮ ಕೈಗೊಳ್ಳಲು ಅಧಿಕಾರಿಗಳು ಮುಂದಾಗುತ್ತಿಲ್ಲ.
ಎರಡು ಹಾಸ್ಟೆಲ್, ಹನುಮಾನ ಮಂದಿರ, ಮುಖ್ಯ ರಸ್ತೆಯೂ ಇದಾಗಿರುವುದರಿಂದ ಜನರು ಇದೇ ರಸ್ತೆಯಿಂದ ಸಂಚರಿಸುತ್ತಿರುತ್ತಾರೆ. ಇಲ್ಲಿನ ಅವ್ಯವಸ್ಥೆ ನೋಡಿ ಜನರು ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ಶಾಪ ಹಾಕುತ್ತಿದ್ದಾರೆ. ಕೂಡಲೇ ಗುಂಡಿ ಮುಚ್ಚಿ ಸುಲಭ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು. ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಚರಂಡಿ ಗುಂಡಿಯನ್ನು ಮುಚ್ಚಬೇಕೆಂದು ಹಾಸ್ಟೆಲ್ ವಾರ್ಡನ್ ರವಿ ಮುತ್ತಗಾ ಅಧಿಕಾರಿಗಳಲ್ಲಿ ಮನವಿ ಮಾಡಿದ್ದಾರೆ.