ಎಳ್ಳಾರೆ ಗ್ರಾಮದ ಸುತ್ತಮುತ್ತಲಿನ ಮುನಿಯಾಲು, ಕಡ್ತಲ, ದೊಂಡೇರಂಗಡಿ ಗ್ರಾಮಗಳಿಗೆ ಸೂಕ್ತ ಸಾರಿಗೆ ಸಂಪರ್ಕ ಇದ್ದರೂ, ಸುಮಾರು 2,500ರಷ್ಟು ಜನಸಂಖ್ಯೆ ಹೊಂದಿರುವ ಎಳ್ಳಾರೆ ಗ್ರಾಮ ಅಭಿವೃದ್ಧಿಯಿಂದ ಹಿನ್ನಡೆ ಕಂಡಿದೆ.
Advertisement
ಸುತ್ತು ಬಳಸಿ ಸಂಪರ್ಕ ಎಳ್ಳಾರೆಯಿಂದ ಮುನಿಯಾಲು, ಕಡ್ತಲ, ಕುಕ್ಕುಜೆ, ಪೆರ್ಡೂರು, ಶಿವಪುರ, ಪಡುಕುಡೂರು ಗ್ರಾಮಗಳನ್ನು ಸಂಪರ್ಕಿಸಲು ರಸ್ತೆ, ಸೇತುವೆ ನಿರ್ಮಾಣವಾಗಿದ್ದರೂ ಇಲ್ಲಿಗೆ ಬಸ್ ಬಂದಿಲ್ಲ ಆದ್ದರಿಂದ ಇಲ್ಲಿನ ನಿವಾಸಿಗಳು ಸುತ್ತಲಿನ ಗ್ರಾಮಗಳಿಗೆ ಸುತ್ತು ಬಳಸಿ ಸಂಚಾರ ಮಾಡುವಂತಾಗಿದೆ. ಮುನಿಯಾಲಿಗೆ 6 ಕಿ.ಮೀ., ಕಡ್ತಲಕ್ಕೆ 5 ಕಿ.ಮೀ., ದೊಂಡೇರಂಗಡಿಗೆ 3 ಕಿ.ಮೀ., ಪೆರ್ಡೂರಿಗೆ 12 ಕಿ.ಮೀ.ಯಷ್ಟು ದೂರವಿದ್ದು ಈ ಗ್ರಾಮಗಳನ್ನು ಎಳ್ಳಾರೆ ಗ್ರಾಮಸ್ಥರು ಸಂಪರ್ಕಿಸಬೇಕಾದರೆ ನಡೆದುಕೊಂಡು ಹೋಗುವುದು ಅನಿವಾರ್ಯವಾಗಿದೆ.
ಗ್ರಾಮದಲ್ಲಿ ಕೇವಲ ಪ್ರಾಥಮಿಕ ಶಿಕ್ಷಣದ ವ್ಯವಸ್ಥೆ ಮಾತ್ರ ಇದ್ದು ಪ್ರೌಢ ಶಿಕ್ಷಣ, ಪದವಿ ಪೂರ್ವ ಶಿಕ್ಷಣ ಸೇರಿದಂತೆ ಉನ್ನತ ಶಿಕ್ಷಣಕ್ಕೆ ದೂರದ ಊರುಗಳಾದ ಮುನಿಯಾಲು, ದೊಂಡೇರಂಗಡಿ, ಪೆರ್ಡೂರಿಗೆ ತೆರಳಬೇಕಾಗಿದ್ದು ವಿದ್ಯಾರ್ಥಿಗಳು ನಡೆದುಕೊಂಡೇ ಹೋಗಬೇಕು. ಇಲ್ಲ ವಾದಲ್ಲಿ ಶಿಕ್ಷಣವನ್ನು ಮೊಟಕುಗೊಳಿಸಬೇಕಾಗಿದೆ. ವಿದ್ಯಾರ್ಥಿಗಳು, ನೌಕರರು, ವೃದ್ಧರು ಸೇರಿದಂತೆ ಸಾರ್ವ ಜನಿಕರು ನಿತ್ಯ ಪ್ರಯಾಣಕ್ಕಾಗಿ ದುಬಾರಿ ಹಣ ತೆತ್ತು ಖಾಸಗಿ ವಾಹನ ಅವಲಂಬಿಸಬೇಕಾಗಿದೆ. ಜತೆಗೆ ಇಲ್ಲಿನ ಪ್ರಸಿದ್ಧ ಶ್ರೀ ಲಕ್ಷ್ಮೀಜನಾರ್ದನ ದೇವಸ್ಥಾನಕ್ಕೂ ಬರುವ ಭಕ್ತರು ಖಾಸಗಿ ವಾಹನಗಳನ್ನೇ ಆಶ್ರಯಿಸುವಂತಾಗಿದೆ.
ಸರಕಾರಿ ಬಸ್‌ಗೆ ಮನವಿ
ದಶಕಗಳ ಹಿಂದೆ ಇಲ್ಲಿ ಖಾಸಗಿ ಬಸ್ಸೊಂದು ಓಡಾಟ ನಡೆಸುತ್ತಿತ್ತು. ಆದರೆ ನಂತರದ ದಿನಗಳಲ್ಲಿ ಬಸ್ ಓಡಾಟ ಸ್ಥಗಿತಗೊಂಡಿತ್ತು. ಈ ಭಾಗಕ್ಕೆ ಸರಕಾರಿ ಬಸ್ ಹಾಕಬೇಕು ಎಂಬುವುದು ಸ್ಥಳೀಯರ ಆಶಯ. ಈ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಇಲಾಖಾ ಅಧಿಕಾರಿಗಳಿಗೆ ಗ್ರಾಮದ ನಾಗರಿಕರು ಹಲವು ಬಾರಿ ಮನವಿ ಮಾಡಿದ್ದರೂ ಪ್ರಯೋಜನವಿಲ್ಲದಂತಾಗಿದೆ ಎಂಬುವುದು ಸ್ಥಳೀಯರ ಅಳಲು. ಬಸ್ ಸಂಚಾರದಿಂದ ಅಭಿವೃದ್ಧಿ
ಎಳ್ಳಾರೆ ಗ್ರಾಮಕ್ಕೆ ಬಸ್ ಸಂಚಾರ ಸೌಲಭ್ಯ ಪ್ರಾರಂಭವಾದರೆ ಎಳ್ಳಾರೆ ಗ್ರಾಮದ ಅಭಿವೃದ್ಧಿಯ ಜತೆಗೆ ಭೈರಂಪಳ್ಳಿ ಪಂಚಾಯತ್ ವ್ಯಾಪ್ತಿಯ ಕುಂಟಲ್‌ಕಟ್ಟೆ, ಕಡ್ತಲ ಪಂಚಾಯತ್ ವ್ಯಾಪ್ತಿಯ ದೇವಸ್ಥಾನಬೆಟ್ಟು, ಚೆನ್ನಿಬೆಟ್ಟು, ವರಂಗ ಪಂಚಾಯತ್ ವ್ಯಾಪ್ತಿಯ ಚಟ್ಕಲ್‌ಪಾದೆ ಪ್ರದೇಶಗಳ ಸುಮಾರು 12,000 ಜನತೆಗೆ ಅನುಕೂಲವಾಗುತ್ತದೆ ಹಾಗೂ ಈ ಭಾಗದ ಸಮಗ್ರ ಅಭಿವೃದ್ಧಿಗೆ ಪೂರಕವಾಗಲಿದೆ.
Related Articles
ಉಡುಪಿ, ಕೊಳಲಗಿರಿ, ಪೆರ್ಡೂರು, ಕುಂಟಲ್‌ಕಟ್ಟೆ, ಎಳ್ಳಾರೆ ಮಾರ್ಗವಾಗಿ ಪಡುಕುಡೂರು, ಮುನಿಯಾಲು, ಮುಟ್ಲುಪಾಡಿ ಸಂಪರ್ಕ ಕಲ್ಪಿಸುವಂತೆ ರಾಜ್ಯ ಸರಕಾರಿ ಸಾರಿಗೆ ಬಸ್ ಒದಗಿಸುವಂತೆ ಸಾರಿಗೆ ನಿಗಮಕ್ಕೆ ಈಗಾಗಲೇ ಹಲವು ಬಾರಿ ಮನವಿ ಮಾಡಿದ್ದೇನೆ. ಅಲ್ಲದೇ ಜಿಲ್ಲಾ ಪಂಚಾಯತ್ ಸಭೆಯಲ್ಲಿಯೂ ಪ್ರಸ್ತಾವನೆ ಮಾಡಿದ್ದು ಎಳ್ಳಾರೆ ಭಾಗಕ್ಕೆ ಬಸ್ ವ್ಯವಸ್ಥೆಗೆ ಸತತ ಪ್ರಯತ್ನ ನಡೆಸಲಾಗುವುದು.
– ಜ್ಯೋತಿ ಹರೀಶ್, ಜಿ.ಪಂ. ಸದಸ್ಯರ
Advertisement