Advertisement

ಲೇಡಿಗೋಶನ್‌ ಎದುರಿನ ಶೆಡ್‌ಗಳಲ್ಲಿ ಬೀದಿಬದಿಯವರಿಂದ ವ್ಯಾಪಾರ

11:37 PM Jun 20, 2020 | Sriram |

ಮಹಾನಗರ: ಸೆಂಟ್ರಲ್‌ ಮಾರ್ಕೆಟ್‌ ಕಟ್ಟಡದೊಳಗೆ ವ್ಯಾಪಾರ ನಡೆಸುತ್ತಿದ್ದ ಚಿಲ್ಲರೆ ವ್ಯಾಪಾ ರಸ್ಥರಿಗಾಗಿ ನಿರ್ಮಿಸಿ ಕೊಡಲಾದ ತಾತ್ಕಾಲಿಕ ಮಳಿಗೆಗಳ ಪೈಕಿ ಲೇಡಿಗೋಶನ್‌ ಎದುರಿನ ಮಳಿಗೆ ಯಲ್ಲಿ ಬೀದಿಬದಿ ವ್ಯಾಪಾರಸ್ಥರು ವ್ಯಾಪಾರ ಆರಂಭಿಸಿದ್ದಾರೆ.

Advertisement

ಸೆಂಟ್ರಲ್‌ ಮಾರ್ಕೆಟ್‌ ಒಳಗಿನ ಚಿಲ್ಲರೆ ಮತ್ತು ಹೋಲ್‌ಸೇಲ್‌ ವ್ಯಾಪಾರಸ್ಥರನ್ನು ಅಲ್ಲಿಂದ ತೆರವುಗೊಳಿಸಿದ ಅನಂತರ ಚಿಲ್ಲರೆ ವ್ಯಾಪಾರಸ್ಥರಿಗೆ ತಾತ್ಕಾಲಿಕ ಶೆಡ್‌ಗಳನ್ನು ನಿರ್ಮಿಸಿಕೊಡಲಾಗಿತ್ತು. ಹೋಲ್‌ಸೇಲ್‌ ವ್ಯಾಪಾರಸ್ಥರಿಗೆ ಬೈಕಂಪಾಡಿ ಎಪಿಎಂಸಿ ಯಾರ್ಡ್‌ನಲ್ಲಿ ವ್ಯಾಪಾರಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಎ. 8ರಿಂದ ಹೋಲ್‌ಸೇಲ್‌ ವ್ಯಾಪಾರಸ್ಥರ ಪೈಕಿ ಕೆಲವರು ಎಪಿಎಂಸಿ ಯಾರ್ಡ್‌ನಲ್ಲಿ ವ್ಯಾಪಾರ ನಡೆಸುತ್ತಿದ್ದಾರೆ. ಆದರೆ ಚಿಲ್ಲರೆ ವ್ಯಾಪಾರಸ್ಥರು ತಾತ್ಕಾಲಿಕ ಶೆಡ್‌ಗಳಿಗೆ ತೆರಳಲು ನಿರಾಕರಿಸಿದ್ದಾರೆ. ಅತ್ತ ಸೆಂಟ್ರಲ್‌ ಮಾರ್ಕೆಟ್‌ನಲ್ಲಿಯೂ ಅವಕಾಶವಿಲ್ಲದೆ ಇತ್ತ ತಾತ್ಕಾಲಿಕ ಶೆಡ್‌ಗಳಲ್ಲಿಯೂ ವ್ಯಾಪಾರ ಮಾಡಲು ಸಾಧ್ಯವಾಗದೆ ಅಸಹಾಯಕರಾಗಿದ್ದಾರೆ.

50 ಶೆಡ್‌ಗಳು ಭರ್ತಿ
ಚಿಲ್ಲರೆ ವ್ಯಾಪಾರಸ್ಥರಿಗಾಗಿ ಪುರಭವನ, ಲೇಡಿಗೋಶನ್‌ ಎದುರು, ಬೀದಿಬದಿ ವ್ಯಾಪಾರಸ್ಥರ ಯಾರ್ಡ್‌ ಮತ್ತು ಅದರ ಪಕ್ಕದಲ್ಲಿ ಒಟ್ಟು 200ಕ್ಕೂ ಅಧಿಕ ತಾತ್ಕಾಲಿಕ ಮಳಿಗೆಗಳನ್ನು ಮಹಾನಗರ ಪಾಲಿಕೆ ಕಟ್ಟಿಸಿಕೊಟ್ಟಿತ್ತು. ಇದೀಗ ಲೇಡಿಗೋಶನ್‌ ಎದುರಿನ ಶೆಡ್‌ಗಳಲ್ಲಿ ಬೀದಿಬದಿ ವ್ಯಾಪಾರಸ್ಥರು ವ್ಯಾಪಾರ ಆರಂಭಿಸಿದ್ದಾರೆ. ಇಲ್ಲಿನ ಸುಮಾರು 50 ಶೆಡ್‌ಗಳಲ್ಲಿ ಪಾಲಿಕೆಯಿಂದ ಗುರುತಿನ ಚೀಟಿ ಪಡೆದಿರುವ ಬೀದಿಬದಿ ವ್ಯಾಪಾರಸ್ಥರು ತರಕಾರಿ, ಹಣ್ಣು ಹಂಪಲು, ಇತರೆ ಗೃಹೋಪಯೋಗಿ ಸಾಮಗ್ರಿಗಳ ವ್ಯಾಪಾರ ನಡೆಸುತ್ತಿದ್ದಾರೆ.

ನಮ್ಮನ್ನು ಬೀದಿಪಾಲು ಮಾಡದಿರಿ
“ನಾವು ಲೇಡಿಗೋಶನ್‌ ಎದುರಿನ ರಸ್ತೆ ಬದಿಯಲ್ಲಿ ಹತ್ತಾರು ವರ್ಷಗಳಿಂದ ವ್ಯಾಪಾರ ಮಾಡಿಕೊಂಡು ಬಂದಿದ್ದೇವೆ. ನಮಗೆ ಮಹಾನಗರ ಪಾಲಿಕೆ ಗುರುತಿನ ಚೀಟಿ ಕೂಡ ನೀಡಿದೆ. ಎಪ್ರಿಲ್‌ನಲ್ಲಿ ಸೆಂಟ್ರಲ್‌ ಮಾರ್ಕೆಟ್‌ನಿಂದ ಚಿಲ್ಲರೆ ವ್ಯಾಪಾರಸ್ಥರನ್ನು ಎಬ್ಬಿಸಿದ ಅನಂತರ ಅವರಿಗೆ ತಾತ್ಕಾಲಿಕ ಶೆಡ್‌ ನಿರ್ಮಿಸಿಕೊಡಲಾಯಿತು. ನಾವು ವ್ಯಾಪಾರ ಮಾಡುತ್ತಿದ್ದ ಲೇಡಿಗೋಶನ್‌ ಎದುರಿನ ಸ್ಥಳದಲ್ಲಿಯೂ ಶೆಡ್‌ಗಳನ್ನು ನಿರ್ಮಿಸಿಕೊಡಲಾಗಿದೆ. ನಾವು ಆಗಲೇ ನಮಗೂ ವ್ಯವಸ್ಥೆ ಮಾಡಿ ಕೊಡುವಂತೆ ಪಾಲಿಕೆಗೆ ಮನವಿ ಮಾಡಿದ್ದೆವು. ಈಗ ನಮ್ಮ ಜಾಗದಲ್ಲೇ ಶೆಡ್‌ ಇರುವುದರಿಂದ ಇಲ್ಲಿಯೇ ವ್ಯಾಪಾರ ಮಾಡುತ್ತಿದ್ದೇವೆ’ ಎನ್ನುತ್ತಾರೆ ಇಲ್ಲಿನ ಬೀದಿಬದಿ ವ್ಯಾಪಾರಸ್ಥರು.

 ನಮಗೂ ಸೂಕ್ತ ವ್ಯವಸ್ಥೆ ಬೇಕು
ಸರಕಾರದಿಂದ ನೇಮಿಸಲ್ಪಟ್ಟ ಬೀದಿ ಬದಿ ವ್ಯಾಪಾರಸ್ಥರ ಸಮಿತಿ ಇದೆ. ಅದರ ಗಮನಕ್ಕೂ ತಾರದೆ ನಾವು ವ್ಯಾಪಾರ ಮಾಡುತ್ತಿದ್ದ ಸ್ಥಳದಲ್ಲಿ ಶೆಡ್‌ಗಳನ್ನು ಹಾಕಲಾಗಿದೆ. ಕೊರೊನಾ ಹಿನ್ನೆಲೆಯಲ್ಲಿ ಎರಡು ತಿಂಗಳು ಮನೆಯಲ್ಲೇ ಇದ್ದೆವು. ಈಗ ನಾವು ಈ ಹಿಂದಿನಿಂದ ವ್ಯಾಪಾರ ಮಾಡುತ್ತಿದ್ದ ಸ್ಥಳದಲ್ಲೇ ವ್ಯಾಪಾರ ಮಾಡುತ್ತಿದ್ದೇವೆ. ನಮಗೆ ಬೇರೆ ಕಡೆ ಸೂಕ್ತ ವ್ಯವಸ್ಥೆ ಆಗದೆ ಇಲ್ಲಿಂದ ಹೋಗುವುದಿಲ್ಲ
-ಸಂತೋಷ್‌ ಆರ್‌.ಎಸ್‌., ಉಪಾಧ್ಯಕ್ಷರು, ಬೀದಿಬದಿ ವ್ಯಾಪಾರಸ್ಥರ ಸಂಘ, ಲೇಡಿಗೋಶನ್‌ ಘಟಕ

Advertisement

ತಾತ್ಕಾಲಿಕ ಶೆಡ್‌ನ‌ಲ್ಲಿ ವ್ಯಾಪಾರ ಅಸಾಧ್ಯ
ಸೆಂಟ್ರಲ್‌ ಮಾರ್ಕೆಟ್‌ನ ಒಳಗೆ ಸ್ಟಾಲ್‌ಗ‌ಳಲ್ಲಿ ಹಾಗೂ ಸ್ಟಾಲ್‌ನಿಂದ ಹೊರಗೆ ಒಟ್ಟು 345 ಮಂದಿ ಚಿಲ್ಲರೆ ವ್ಯಾಪಾರ ಮಾಡುತ್ತಿದ್ದೆವು. ನಮಗೆ ಸರಿಯಾದ ವ್ಯವಸ್ಥೆ ಮಾಡಿಕೊಡದೆ ಏಕಾಏಕಿ ಅಲ್ಲಿಂದ ತೆರವು ಮಾಡಿದ್ದಾರೆ. ನಮಗೆ ನಿರ್ಮಿಸಿಕೊಟ್ಟಿರುವ ತಾತ್ಕಾಲಿಕ ಶೆಡ್‌ನ‌ಲ್ಲಿ ವಿದ್ಯುತ್‌ ಸಂಪರ್ಕ, ಸಾಮಗ್ರಿಗಳಿಗೆ ಭದ್ರತೆ ಮೊದಲಾದ ಯಾವ ಅಗತ್ಯ ಸೌಲಭ್ಯವೂ ಇಲ್ಲ. ಹಾಗಾಗಿ ಆ ಶೆಡ್‌ಗಳಲ್ಲಿ ವ್ಯಾಪಾರ ಮಾಡದಿರಲು ನಿರ್ಧರಿಸಿದ್ದೇವೆ. ಉರ್ವ ಮಾರ್ಕೆಟ್‌ನ ಕಟ್ಟಡದಲ್ಲಿ ಅವಕಾಶ ನೀಡುವ ಭರವಸೆ ನೀಡಿದ್ದಾರೆ. ಆದರೆ ಅಲ್ಲಿಯೂ ಅವ್ಯವಸ್ಥೆ ಇದೆ. ಬೇರೆ ಸೂಕ್ತ ಸ್ಥಳಾವಕಾಶ ಮಾಡಿಕೊಡಬೇಕು.
-ಜನಾರ್ದನ್‌, ಕಾರ್ಯದರ್ಶಿ ,
ಸೆಂಟ್ರಲ್‌ ಮಾರ್ಕೆಟ್‌ ವ್ಯಾಪಾರಸ್ಥರ ಸಂಘ

 ಬೀದಿಬದಿ ವ್ಯಾಪಾರಸ್ಥರಿಗೂ ಸೂಕ್ತ ವ್ಯವಸ್ಥೆ
ಸೆಂಟ್ರಲ್‌ ಮಾರ್ಕೆಟ್‌ನ ಚಿಲ್ಲರೆ ವ್ಯಾಪಾರಸ್ಥರಿಗೆಂದು ಲೇಡಿಗೋಶ‌ನ್‌ ಎದುರಿನ ಸ್ಥಳವೂ ಸೇರಿದಂತೆ ಹಲವೆಡೆ ತಾತ್ಕಾಲಿಕ ಮಳಿಗೆ ಕಟ್ಟಿಸಿಕೊಟ್ಟಿದ್ದೇವೆ. ಆದರೆ ಅವರು ಇದುವರೆಗೂ ಮಳಿಗೆಗಳಿಗೆ ಬಂದಿಲ್ಲ. ಲೇಡಿಗೋಶನ್‌ ಎದುರಿನ ಮಳಿಗೆಯಲ್ಲಿ ಅಲ್ಲಿನ ಬೀದಿ ಬದಿ ವ್ಯಾಪಾರಿಗಳು ವ್ಯಾಪಾರ ಮಾಡುತ್ತಿದ್ದಾರೆ. ಚಿಲ್ಲರೆ ವ್ಯಾಪಾರಸ್ಥರು ಈ ಮಳಿಗೆಗಳಿಗೆ ಬಂದರೆ ಬೀದಿಬದಿ ವ್ಯಾಪಾರಸ್ಥರಿಗೆ ಬೇರೆ ಸೂಕ್ತ ವ್ಯವಸ್ಥೆ ಮಾಡಿಕೊಡುತ್ತೇವೆ.
-ಸಂತೋಷ್‌ ಕುಮಾರ್‌, ಉಪ ಆಯುಕ್ತರು, ಮನಪಾ

Advertisement

Udayavani is now on Telegram. Click here to join our channel and stay updated with the latest news.

Next