ಪುತ್ತೂರು: ತನ್ನ 8 ವರ್ಷದ ಪುತ್ರಿ ಜತೆ ಮಾಲಾಧಾರಿಯಾಗಿ ಶಬರಿಮಲೆಗೆ ತೆರಳಿದ್ದ ನಗರದ ಯುವ ಉದ್ಯಮಿಯೋರ್ವರು ಗುರುವಾರ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ನರಿಮೊಗರು ಗ್ರಾಮದ ವೀರಮಂಗಲ ಗುತ್ತು ನಿವಾಸಿ, ಪುತ್ತೂರಿನ ತೆಂಕಿಲದಲ್ಲಿ ಶ್ರೀ ಮಹಾಲಿಂಗೇಶ್ವರ ಎಂಟರ್‌ಪ್ರೈಸಸ್ ಸಂಸ್ಥೆಯನ್ನು ನಡೆಸುತ್ತಿದ್ದ ಜನಾರ್ದನ ಗೌಡ (36) ಮೃತಪಟ್ಟವರು.
ಅವರು ಪುತ್ರಿ, ಭಾವ ಹಾಗೂ ಇನ್ನಿಬ್ಬರ ಜತೆ ಮೇ 15ರಂದು ಪೂರ್ವಾಹ್ನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಇರುಮುಡಿ ಕಟ್ಟಿ ಮಧ್ಯಾಹ್ನ ರೈಲಿನ ಮೂಲಕ ಮಂಗಳೂರಿನಿಂದ ಶಬರಿಮಲೆ ಯಾತ್ರೆ ತೆರಳಿದ್ದರು. ಮೇ 16ರಂದು ಮುಂಜಾನೆ ಪಂಪಾ ನದಿಯಲ್ಲಿ ಸ್ಥಾನ ಮುಗಿಸಿ ಸನ್ನಿಧಾನ ಯಾತ್ರೆ ಮುಂದುವರೆಸಿದ್ದು, ಶಬರಿಪೀಠ ತಲುಪುತ್ತಿದ್ದಂತೆ ಅವರಿಗೆ ಎದೆನೋವು ಕಾಣಿಸಿಕೊಂಡಿದೆ. ಕೂಡಲೇ ಜತೆಗಿದ್ದವರು ಹಾಗೂ ಬೇರೆ ತಂಡದಲ್ಲಿ ತೆರಳಿದ್ದ ಪುತ್ತೂರಿನ ಯಾತ್ರಿಕರ ಸಹಾಯದಿಂದ ಪಂಪಾ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಅಲ್ಲಿ ಅವರು ಹೃದಯಾಘಾತದಿಂದ ಕೊನೆ ಯುಸಿರೆಳೆದಿರುವ ಕುರಿತು ವೈದ್ಯರು ದೃಢೀಕರಿಸಿದರು. ಅಲ್ಲಿಂದ ಕೊಟ್ಟಾಯಂ ಆಸ್ಪತ್ರೆಗೆ ಕೊಂಡೊಯ್ದು ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಮೇ 17ರಂದು ಮಧ್ಯಾಹ್ನ ಮೃತದೇಹ ಊರಿಗೆ ತಲುಪಲಿದೆ ಎಂದು ಜತೆಗಿದ್ದವರು ಮಾಹಿತಿ ನೀಡಿದ್ದಾರೆ.
ಜನಾರ್ದನ ಗೌಡರು ಪುತ್ತೂರು ಜೇಸಿಐ ಜತೆ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸಿದ್ದರು. ಸಮಾಜಮುಖೀ ಚಟುವಟಿಕೆಗಳಲ್ಲಿ ಗುರುತಿಸಿಕೊಂಡಿದ್ದರು. ಮೃತರು ಪತ್ನಿ, ಪುತ್ರಿ ಹಾಗೂ ಪುತ್ರನನ್ನು ಅಗಲಿದ್ದಾರೆ.