ಹುಬ್ಬಳ್ಳಿ: ಕೋವಿಡ್ ಹಿನ್ನೆಲೆಯಲ್ಲಿ ಜು.13ರಿಂದ 31ರವರೆಗೆ ವ್ಯಾಪಾರ ವಹಿವಾಟನ್ನು ಬೆಳಗ್ಗೆ 9:00ರಿಂದ ಸಂಜೆ 5:00 ಗಂಟೆವರೆಗೆ ಮಾತ್ರ ನಡೆಸಬೇಕೆಂದು ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ನಿರ್ಧರಿಸಿದೆ ಎಂದು ಕೆಸಿಸಿಐನ ಮಾಜಿ ಅಧ್ಯಕ್ಷ ಶಂಕರಣ್ಣ ಮುನವಳ್ಳಿ ತಿಳಿಸಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಧಾರವಾಡ ಜಿಲ್ಲೆಯಲ್ಲಿ ಕೋವಿಡ್ ವೈರಸ್ ಹೆಚ್ಚುತ್ತಲಿದೆ. ಕಾರಣ ವರ್ತಕರು ಸರಕಾರದ ನಿರ್ದೇಶನಗಳನ್ನು ಪಾಲಿಸಬೇಕು. ತಮ್ಮ ಅಂಗಡಿಗಳಲ್ಲಿ ಮುಂಜಾಗ್ರತಾ ಕ್ರಮ ಅನುಸರಿಸಬೇಕು. ಮಾಸ್ಕ್, ಸ್ಯಾನಿಟೈಸರ್ ಬಳಸಬೇಕು, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಸ್ವಚ್ಛತೆ ಕಾಪಾಡಬೇಕು. ಅಂಗಡಿಗೆ ಆಗಮಿಸುವ ಗ್ರಾಹಕರಿಗೆ ಈ ಕುರಿತು ಸರಿಯಾಗಿ ಮಾಹಿತಿ ಕೊಡಬೇಕು. ಸ್ವಯಂ ಪ್ರೇರಿತರಾಗಿ ಸಂಜೆ 5:00 ಗಂಟೆ ನಂತರ ಅಂಗಡಿಗಳನ್ನು ಮುಚ್ಚುವ ಮೂಲಕ ಕೋವಿಡ್ ವೈರಸ್ ನಿಯಂತ್ರಣಕ್ಕೆ ಕೈಜೋಡಿಸಬೇಕೆಂದು ವಿವಿಧ ಕ್ಷೇತ್ರಗಳ ವ್ಯಾಪಾರಸ್ಥರೊಂದಿಗೆ ಸಭೆ ನಡೆಸಿ ತೀರ್ಮಾನ ಕೈಗೊಳ್ಳಲಾಗಿದೆ ಎಂದರು.
ಕಿಮ್ಸ್‌ನ ತಜ್ಞ ವೈದ್ಯರಾದ ಡಾ| ಶೈಲೇಂದ್ರ ಕುಮಾರ ಅವರನ್ನು ಕರೆಯಿಸಿ, ಸಭೆಯಲ್ಲಿ ಪಾಲ್ಗೊಂಡಿದ್ದ ವ್ಯಾಪಾರಸ್ಥರ ಸಂಘಗಳ ಪದಾಧಿಕಾರಿಗಳಿಗೆ ಅಂಗಡಿಗಳಲ್ಲಿ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳು ಹಾಗೂ ವ್ಯಾಪಾರಸ್ಥರು ಮತ್ತು ಗ್ರಾಹಕರು, ಕಾರ್ಮಿಕರು ತಮ್ಮ ಆರೋಗ್ಯ ಹೇಗೆ ಕಾಪಾಡಿಕೊಳ್ಳಬೇಕೆಂಬ ಕುರಿತು ಹಾಗೂ ಜ್ವರ, ನೆಗಡಿ, ಕೆಮ್ಮು ಬಂದರೆ ನಿರ್ಲಕ್ಷ್ಯ ತೋರಬೇಡಿ. ವೈದ್ಯರನ್ನು ತಕ್ಷಣ ಸಂಪರ್ಕಿಸಿ ಅವರ ಸಲಹೆ ಪಡೆಯಬೇಕು. ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಬೇಕು. ಆಹಾರ ಪದ್ಧತಿ ಬದಲಾಯಿಸಿಕೊಳ್ಳಬೇಕು. ಸ್ವತ್ಛತೆ ಕಾಪಾಡಿಕೊಳ್ಳಬೇಕು. ದೇವಸ್ಥಾನ, ಮಂದಿರ, ಮಸೀದಿ, ಚರ್ಚ್‌ಗಳಿಗೆ ಹೋಗಬೇಡಿ. ಅನವಶ್ಯಕವಾಗಿ ಮನೆ ಬಿಟ್ಟು ಎಲ್ಲಿ ಹೋಗಬೇಡಿ. ಹಣ್ಣು-ಹಂಪಲ, ಜವಾರಿ ಪದಾರ್ಥ ಹಾಗೂ ಬಿಸಿನೀರು ಸೇವಿಸಿ ಎಂದು ತಿಳಿವಳಿಕೆ ಕೊಡಲಾಗಿದೆ. ಈ ಕುರಿತು ಕರಪತ್ರಗಳನ್ನು ಸಿದ್ಧಪಡಿಸಿ ಜಿಲ್ಲೆಯ ಸುತ್ತಲಿನ ಹಳ್ಳಿ ಹಳ್ಳಿಗೂ ಹಂಚಿಕೆ ಮಾಡಿ ಜಾಗೃತಿ ಮೂಡಿಸಲಾಗುವುದು. ಸಂಜೆ 5:00ರ ನಂತರ ಜನರು ತಮ್ಮ ಗ್ರಾಮ, ಮನೆಗಳಿಗೆ ತೆರಳಲು ಬಸ್ ವ್ಯವಸ್ಥೆ ಮಾಡುವಂತೆ ವಾಕ ರಸ್ತೆ ಸಾರಿಗೆ ಸಂಸ್ಥೆಯ ಅಧಿಕಾರಿಗಳಿಗೂ ಮನವಿ ಮಾಡಲಾಗಿದೆ. ಸಂಜೆ ನಂತರ ತಮ್ಮ ವ್ಯಾಪಾರ-ವಹಿವಾಟು ಬಂದ್ ಮಾಡಲು ವ್ಯಾಪಾರಸ್ಥರು ಸಮ್ಮತಿ ವ್ಯಕ್ತಪಡಿಸಿದ್ದಾರೆ ಎಂದರು.
ಕೆಸಿಸಿಐನ ಅಧ್ಯಕ್ಷ ಮಹೇಂದ್ರ ಲದ್ದಡ, ವಿನಯ ಜವಳಿ, ಸಿದ್ದೇಶ್ವರ ಕಮ್ಮಾರ, ಅಶೋಕ ಗಡಾದ ಮೊದಲಾದವರಿದ್ದರು.