Advertisement
ನಗರದಲ್ಲಿ ಸೋಮವಾರ ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಂಗಳೂರು ಕೇಂದ್ರ ಮಾರುಕಟ್ಟೆ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಎಂ. ಮುಸ್ತಾಫ ಕುಂಞಿ, “ಕೋವಿಡ್-19 ಹಿನ್ನೆಲೆಯಲ್ಲಿ ಸಾಮಾಜಿಕ ಅಂತರ ಕಾಪಾಡುವುದು ಸೆಂಟ್ರಲ್ ಮಾರ್ಕೆಟ್‌ನಲ್ಲಿ ಅಸಾಧ್ಯವೆಂಬ ಕಾರಣಕ್ಕೆ ಪಾಲಿಕೆಯು ಸಗಟು ವ್ಯಾಪಾರಸ್ಥರನ್ನು ಎ. 8ರಂದು ಎಪಿಎಂಸಿ ಯಾರ್ಡ್‌ಗೆ ಸ್ಥಳಾಂತರಿಸಿತ್ತು. ಇದೀಗ ಲಾಕ್‌ಡೌನ್ ಮುಕ್ತಾಯಗೊಳ್ಳುತ್ತಿದೆ. ಹಾಗಾಗಿ ಜೂ. 9ರಿಂದ ಕೇಂದ್ರ ಮಾರುಕಟ್ಟೆಯಲ್ಲಿ ವ್ಯಾಪಾರ ನಡೆಸಲು ನಾವೆಲ್ಲ ಸಿದ್ಧರಾಗಿದ್ದೇವೆ. ಇದಕ್ಕೆ ಜಿಲ್ಲಾಡಳಿತ, ಮಹಾನಗರ ಪಾಲಿಕೆ ಅವಕಾಶ ನೀಡಬೇಕು. ಜತೆಗೆ ಪೊಲೀಸ್ ಭದ್ರತೆ ಕೂಡ ಒದಗಿಸಬೇಕು ಎಂದು ಹೇಳಿದರು.
ಸಗಟು ವ್ಯಾಪಾರಸ್ಥರು ಮಾರುಕಟ್ಟೆಯ ಒಳಭಾಗ ದಲ್ಲಿ ವ್ಯಾಪಾರ ನಡೆಸುವುದಿಲ್ಲ. ಮಾರುಕಟ್ಟೆಯ ಹೊರಭಾಗದಲ್ಲಿ ವ್ಯಾಪಾರ ಮಾಡುತ್ತಾರೆ. ಹಾಗಾಗಿ ಸಾಮಾಜಿಕ ಅಂತರ ಪಾಲನೆಗೆ ಸಮಸ್ಯೆಯಾಗದು. ವ್ಯಾಪಾರಸ್ಥರು ತೀವ್ರ ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಅಲ್ಲದೆ ನಗರದ ಆರ್ಥಿಕತೆಯ ಮೇಲೆಯೂ ಹೊಡೆತ ಬೀಳುತ್ತಿದೆ. ಹಾಗಾಗಿ ಜಿಲ್ಲಾಡಳಿತ ಸಹಕರಿಸಬೇಕು ಎಂದವರು ಮನವಿ ಮಾಡಿದರು.
Related Articles
Advertisement
ಹೈಕೋರ್ಟ್ ತಡೆಯಾಜ್ಞೆಸಂಘದ ಕಾನೂನು ಸಲಹೆಗಾರ ಮನ್‌ಮೋಹನ್ ಜೋಯಿಸ್ ಮಾತನಾಡಿ, ವ್ಯಾಪಾರಿಗಳ ಸ್ಥಳಾಂತರ ಹಾಗೂ ಸೆಂಟ್ರಲ್ ಮಾರ್ಕೆಟ್ ಅನ್ನು ಕೆಡವಿ ಹೊಸ ಕಟ್ಟಡ ಕಟ್ಟುವುದಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಹಾಗಾಗಿ ವ್ಯಾಪಾರಸ್ಥರಿಗೆ ಮಹಾನಗರ ಪಾಲಿಕೆ ಅಡ್ಡಿಪಡಿಸಲು ಅವಕಾಶವಿಲ್ಲ. ಅಲ್ಲದೆ ಸೆಂಟ್ರಲ್ ಮಾರ್ಕೆಟ್ ಸಬ್ ಯಾರ್ಡ್ ಆಗಿದೆ. ಹಾಗಾಗಿ ಅದರ ಮೇಲೆ ಪಾಲಿಕೆಗೆ ಅಧಿಕಾರವಿಲ್ಲ. ಸರಕಾರದಿಂದ ಪೂರ್ವಾನುಮತಿ ಪಡೆದರೆ ಮಾತ್ರ ಅಧಿಕಾರ ಬರುತ್ತದೆ ಎಂದು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಕೇಂದ್ರ ಮಾರುಕಟ್ಟೆ ವ್ಯಾಪಾರಸ್ಥರ ಸಂಘದ ಕಾರ್ಯದರ್ಶಿ ಜನಾರ್ದನ ಸಾಲ್ಯಾನ್, ಉಪಾಧ್ಯಕ್ಷ ಎ.ಜೆ. ಶೇಖರ್, ನ್ಯೂ ಸೆಂಟ್ರಲ್ ಮಾರ್ಕೆಟ್ ವ್ಯಾಪಾರಸ್ಥರ ಸಂಘದ ಕಾರ್ಯದರ್ಶಿ ಗಣೇಶ್ ಉಪಸ್ಥಿತರಿದ್ದರು. ಸೆಂಟ್ರಲ್ ಮಾರ್ಕೆಟ್‌ಗೆ ಬೀಗ
ಕೋವಿಡ್-19 ಹಿನ್ನೆಲೆಯಲ್ಲಿ ಸಾಮಾಜಿಕ ಅಂತರ ಕಾಪಾಡಲು ಹಾಗೂ ಮಾರುಕಟ್ಟೆಯ ಹೊಸ ಕಟ್ಟಡ ನಿರ್ಮಿಸುವ ಉದ್ದೇಶದಿಂದ ಸಗಟು ವ್ಯಾಪಾರಸ್ಥರನ್ನು ಬೈಕಂಪಾಡಿಯ ಎಪಿಎಂಸಿ ಯಾರ್ಡ್‌ಗೆ ಸ್ಥಳಾಂತರಿಸಲಾಗಿತ್ತು. ಹೊಸ ಕಟ್ಟಡ ನಿರ್ಮಾಣವಾಗುವವರೆಗೆ ಚಿಲ್ಲರೆ ವ್ಯಾಪಾರಸ್ಥರಿಗಾಗಿ ನೆಹರೂ ಮೈದಾನದ ಬಳಿ ತಾತ್ಕಾಲಿಕ ಮಾರುಕಟ್ಟೆ ನಿರ್ಮಾಣ ಆರಂಭಿಸಲಾಗಿತ್ತು. ಇದರ ನಿರ್ಮಾಣಕ್ಕೆ ಕೆಲವು ತಿಂಗಳುಗಳು ಬೇಕಾಗುವುದರಿಂದ ಅಲ್ಲಿಯವರೆಗೆ ತಾತ್ಕಾಲಿಕವಾಗಿ ವ್ಯಾಪಾರ ನಡೆಸಲು ಪುರಭವನ, ಲೇಡಿಗೋಶನ್ ಎದುರು ತಾತ್ಕಾಲಿಕ ಶೆಡ್‌ಗಳನ್ನು ನಿರ್ಮಿಸಿಕೊಡಲಾಗಿತ್ತು. ಆದರೆ ತಮಗೆ ಮಾಡಿಕೊಟ್ಟ ಶೆಡ್ ಅಸಮರ್ಪಕವಾಗಿದೆ. ಅದರಲ್ಲಿ ವ್ಯಾಪಾರ ಮಾಡಲು ಬೇಕಾದ ಮೂಲ ಸೌಕರ್ಯಗಳೇ ಇಲ್ಲ ಎಂದು ಚಿಲ್ಲರೆ ವ್ಯಾಪಾರಸ್ಥರು ವ್ಯಾಪಾರ ಮಾಡಲು ನಿರಾಕರಿಸಿದ್ದಾರೆ. ಹಾಗಾಗಿ ಶೆಡ್‌ಗಳು ಪಾಳುಬಿದ್ದಿವೆ. ಸೆಂಟ್ರಲ್ ಮಾರ್ಕೆಟ್‌ಗೆ ಸದ್ಯ ಬೀಗ ಹಾಕಲಾಗಿದೆ. ಪೊಲೀಸರನ್ನು ನಿಯೋಜಿಸಲಾಗಿದೆ. ವ್ಯಾಪಾರಕ್ಕೆ ಅವಕಾಶವಿಲ್ಲ
ಸೆಂಟ್ರಲ್ ಮಾರ್ಕೆಟ್ ಕಟ್ಟಡದ ಬಾಳಿಕೆ ಮುಗಿದಿರುವ ಬಗ್ಗೆ, ಅದನ್ನು ಕೆಡವು ಹೊಸ ಕಟ್ಟಡ ನಿರ್ಮಿಸುವ ಬಗ್ಗೆ ಈಗಾಗಲೇ ಲೋಕೋಪಯೋಗಿ ಇಲಾಖೆ ಹಾಗೂ ಎನ್‌ಐಟಿಕೆ ವರದಿ ನೀಡಿವೆ. ಅದರಂತೆ ಹೊಸ ಕಟ್ಟಡ ನಿರ್ಮಿಸಿ ವ್ಯಾಪಾರಸ್ಥರಿಗೆ ಅವಕಾಶ ಮಾಡಿಕೊಡಲಾಗುವುದು. ಅದುವರೆಗೆ ತಾತ್ಕಾಲಿಕವಾಗಿ ಸೂಕ್ತ ವ್ಯವಸ್ಥೆ ಕಲ್ಪಿಸಿಕೊಡಲಾಗಿದೆ. ಪ್ರಸ್ತುತ ಕೊರೊನಾ ನಿಯಂತ್ರಣಕ್ಕೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಅನಿವಾರ್ಯ. ಸೆಂಟ್ರಲ್ ಮಾರ್ಕೆಟ್‌ನಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಷ್ಟಸಾಧ್ಯ. ಹಾಗಾಗಿ ವ್ಯಾಪಾರಕ್ಕೆ ಅವಕಾಶ ನೀಡುವುದಿಲ್ಲ. ಜೂ.9ರಂದು ಸೆಂಟ್ರಲ್ ಮಾರ್ಕೆಟ್‌ಗೆ ವ್ಯಾಪಾರಕ್ಕೆ ತೆರಳುವ ಬಗ್ಗೆ ಮಾಹಿತಿ ಬಂದಿರುವ ಹಿನ್ನೆಲೆಯಲ್ಲಿ ಸೂಕ್ತ ಬಂದೋಬಸ್ತ್ಗೆ ಪೊಲೀಸರಿಗೆ ತಿಳಿಸಲಾಗಿದೆ.
-ಸಂತೋಷ್ ಕುಮಾರ್
ಉಪ ಆಯುಕ್ತ, ಮನಪಾ