Advertisement

ಕುಕ್ಕೆ: ಪ್ರಮುಖ ಸಂಪರ್ಕ ಕಡಿತ, ವ್ಯಾಪಾರಸ್ಥರಲ್ಲಿ ಆತಂಕ

01:20 AM Aug 23, 2018 | Team Udayavani |

ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಸಂಪರ್ಕಿಸುವ ಬಹುತೇಕ ರಸ್ತೆಗಳು ಕಡಿತಗೊಂಡ ಪರಿಣಾಮ ನಗರ ಪ್ರವಾಸಿಗರ ಕೊರತೆ ಎದುರಿಸುತ್ತಿದೆ. ಇದರ ಬಿಸಿ ಇಲ್ಲಿನ ವ್ಯಾಪಾರಿಗಳು ಹಾಗೂ ಹೊಟೇಲ್‌ ಉದ್ಯಮಿಗಳಿಗೆ ತಟ್ಟಿದೆ. ನಾಗಾರಾಧನೆಗೆ ಹೆಸರಾದ ಪಟ್ಟಣ ಪ್ರವಾಸಿಗರಿಲ್ಲದೆ ಬಿಕೋ ಎನ್ನುತ್ತಿದೆ. ಹಲವು ಅಂಗಡಿಗಳು ವ್ಯಾಪಾರವಿಲ್ಲದೆ ಬಂದ್‌ ಆಗಿವೆ. ಬಾಡಿಗೆ ಭರಿಸಲೂ ಹಣವಿಲ್ಲದೆ ಪರದಾಡುತ್ತಿದ್ದಾರೆ. ದೇಗುಲ ಹಾಗೂ ವಸತಿ ಗೃಹಗಳು ಖಾಲಿಯಾಗಿದ್ದು, ನಷ್ಟದ ಭೀತಿ ಎದುರಿಸುತ್ತಿವೆ. ಕ್ಷೇತ್ರವನ್ನು ಸಂಪರ್ಕಿಸುವ ಪ್ರಮುಖ ರಸ್ತೆಗಳು ಸದ್ಯಕ್ಕೆ ಸಂಚಾರಕ್ಕೆ ಮುಕ್ತ ವಾಗುವ ಲಕ್ಷಣ ಗೋಚರಿಸುತ್ತಿಲ್ಲ, ಇದು ವ್ಯಾಪಾರಿಗಳ ಆತಂಕವನ್ನು ಹೆಚ್ಚಿಸಿದೆ.

Advertisement

ಕಡಮಕಲ್ಲು – ಗಾಳಿಬೀಡು ರಸ್ತೆ ತೆರೆದುಕೊಳ್ಳಲಿ
ರಸ್ತೆ, ಸೇತುವೆಗಳು ಸಂಚಾರಕ್ಕೆ ಮುಕ್ತವಾಗಲು ಇನ್ನೂ ತುಂಬ ಸಮಯ ಹಿಡಿಯಬಹುದು. ಹೀಗಾಗಿ, ಸುಬ್ರಹ್ಮಣ್ಯವನ್ನು ಮಡಿಕೇರಿ ಭಾಗದಿಂದ ಸಂಪರ್ಕಿಸುವ ಅತಿ ಹತ್ತಿರದ ದಾರಿ ಮಡಿಕೇರಿ-ಗಾಳಿಬೀಡು-ಕಡಮಕಲ್ಲು-ಸುಬ್ರಹ್ಮಣ್ಯ ರಸ್ತೆಯನ್ನು ತುರ್ತಾಗಿ ಅಭಿವೃದ್ಧಿಗೊಳಿಸಿದಲ್ಲಿ ಇತರೆ ರಸ್ತೆಗಳ ಮೇಲಿನ ಒತ್ತಡವನ್ನು ತುಸು ಮಟ್ಟಿಗಾದರೂ ತಗ್ಗಿಸಬಹುದು ಎಂಬ ಅಭಿಪ್ರಾಯ ಈ ಭಾಗದವರಿಂದ ವ್ಯಕ್ತವಾಗುತ್ತಿದೆ.

ಸಾಧಾರಣ ಮಳೆ
ಸುಬ್ರಹ್ಮಣ್ಯ ಆಸುಪಾಸಿನ ಪ್ರದೇಶಗಳಲ್ಲಿ ಬುಧವಾರವೂ ಸಾಧಾರಣ ಮಳೆಯಾಗಿದೆ. ಮಂಗಳವಾರ ರಾತ್ರಿಯಿಂದ ಬೆಳಗ್ಗೆ ತನಕ ನಿರಂತರ ಜಿಟಿಜಿಟಿ ಮಳೆಯಾಗಿತ್ತು. ಬುಧವಾರ ಬೆಳಗ್ಗೆ ಕೆಲ ಹೊತ್ತು ಭಾರೀ ಮಳೆ ಸುರಿಯಿತು. ಹಲವು ದಿನಗಳ ಬಳಿಕ ಇದೇ ಮೊದಲ ಬಾರಿಗೆ ತುಸು ಹೊತ್ತು ಬಿಸಿಲಿನ ದರ್ಶನವಾಯಿತು. ಮಧ್ಯಾಹ್ನದ ತನಕ ಮಳೆ-ಬಿಸಿಲಿನಾಟ ಕಂಡು ಬಂತು. ಸಂಜೆ ವೇಳೆಗೆ ಮಳೆ ಮತ್ತೆ ಬಿರುಸು ಪಡೆದುಕೊಂಡಿದೆ. ಬುಧವಾರ ಈ ಭಾಗದಲ್ಲಿ ಭೂಕುಸಿತ  ಸಂಭವಿಸಿಲ್ಲ.

ಹೊಳೆ ಬದಿ ತ್ಯಾಜ್ಯದ ರಾಶಿ
ಇತ್ತೀಚೆಗೆ ಈ ಭಾಗದಲ್ಲಿ ಭಾರೀ ಪ್ರಮಾಣದ ಮಳೆಯಯಾಗಿದೆ. ಕುಮಾರಧಾರಾ ನದಿ ಸಹಿತ ಆಸುಪಾಸಿನ ಎಲ್ಲ ನದಿ, ಹಳ್ಳ, ಕೊಳ್ಳಗಳಲ್ಲಿ ನೆರೆ ಹರಿದು ಬಂದಿತ್ತು. ವ್ಯಾಪಕ ಮಳೆ ಹಾಗೂ ಭೂಕುಸಿತ ಘಟನೆಗಳು ಸಂಭವಿಸಿ ಅಪಾರ ಪ್ರಮಾಣದ ಮರ, ಮಣ್ಣು, ತ್ಯಾಜ್ಯಗಳು ನೆರೆಯೊಂದಿಗೆ ಹರಿದು ಬಂದಿವೆ. ಇವೆಲ್ಲವೂ ಕ್ಷೇತ್ರದ ಪರಿಸರದಲ್ಲಿ ನದಿಯ ಬದಿಯಲ್ಲಿ ಸಂಗ್ರಹಗೊಂಡು ತ್ಯಾಜ್ಯಮಯವಾಗಿದೆ. ಅವುಗಳನ್ನು ತುರ್ತಾಗಿ ತೆರವುಗೊಳಿಸದಿದ್ದರೆ ಸಾಂಕ್ರಾಮಿಕ ರೋಗ ಹರಡುವ ಭೀತಿ ಆವರಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next