ಬೆಂಗಳೂರು: ರಾಜ್ಯದ ಹಲವೆಡೆ ಧಾರಾಕಾರ ಮಳೆಯಾಗುತ್ತಿದ್ದು, ರಸ್ತೆ ಸಂಚಾರ ಅಸ್ತವ್ಯಸ್ತವಾಗಿದೆ. ಕೆಲವೆಡೆ ರಸ್ತೆಗಳ ಮೇಲೆ ಭೂಕುಸಿತ ಉಂಟಾಗಿ, ಮರಗಳು ಉರುಳಿದ ಪರಿಣಾಮ ಆ ಮಾರ್ಗಗಳಲ್ಲಿನ ವಾಹನ ಸಂಚಾರವನ್ನು ಸಂಪೂರ್ಣ ಬಂದ್ ಮಾಡಲಾಗಿದೆ. ಇದರಿಂದಾಗಿ ಪ್ರಯಾಣಿಕರು ಪರದಾಡುವಂತಾಗಿದೆ.
ಉಡುಪಿ-ಬೆಂಗಳೂರಿನ ನಾಲ್ಕೂ ಮಾರ್ಗ ಬಂದ್: ಉಡುಪಿ – ಶಿವಮೊಗ್ಗ, ಬೆಂಗಳೂರು, ಮೈಸೂರು ಭಾಗಗಳಿಗೆ ಹೋಗುವ 40 ಬಸ್‌ಗಳು ಉಡುಪಿಯ ಕೆಸ್ಸಾರ್ಟಿಸಿ ಡಿಪೋದಲ್ಲಿ ನಿಲುಗಡೆಯಾಗಿವೆ. ಉಡುಪಿಯಿಂದ ಬೆಂಗಳೂರಿಗೆ ತೆರಳುವ ನಾಲ್ಕೂ ಮಾರ್ಗಗಳು ಬಂದ್ ಆಗಿದ್ದು, ಸದ್ಯಕ್ಕೆ ಕೊಲ್ಲೂರು – ಹೊಸನಗರ, ಶಿವಮೊಗ್ಗ ಮಾರ್ಗವಾಗಿ ಬೆಂಗಳೂರಿಗೆ ತಲುಪುವಂತಹ ಒಂದೇ ಆಯ್ಕೆಯಿದೆ. ಉಳಿದಂತೆ ಯಲ್ಲಾಪುರ, ಚಾರ್ಮಾಡಿ, ಮೈಸೂರು, ವಿಜಯಪುರ, ಜಮಖಂಡಿ, ಹುಬ್ಬಳ್ಳಿ, ಧಾರವಾಡ ಮಾರ್ಗಗಳು ಸಂಪೂರ್ಣ ಬಂದ್ ಆಗಿವೆ.
ಕೊಡಗಿಗೆ ಸಂಚಾರ ಅಸ್ತವ್ಯಸ್ತ: ಮಡಿಕೇರಿ – ಕುಶಾಲನಗರ-ಹಾಸನ ರಾಜ್ಯ ಹೆದ್ದಾರಿ ಜಲಾವೃತ. ಹಾಸನ ಕಡೆಗೆ ತೆರಳುವ ಮತ್ತು ಹಾಸನದ ಕಡೆಯಿಂದ ಕೊಡಗಿಗೆ ಆಗಮಿಸುವವರು ಸಕಲೇಶಪುರ-ಶನಿವಾರಸಂತೆ-ಸೋಮವಾರಪೇಟೆ-ಸುಂಟಿಕೊಪ್ಪ ಮಾರ್ಗವಾಗಿ ಬಳಸು ದಾರಿಯಲ್ಲಿ ಸಂಚರಿಸಬೇಕಿದೆ. ತುರ್ತು ಕಾರ್ಯ ನಿಮಿತ್ತ ತೆರಳುವವರನ್ನು ಕುಶಾಲನಗರದಿಂದ ಕೊಪ್ಪದವರೆಗೆ ಬೋಟ್‌ಗಳಲ್ಲಿ ಒಯ್ದು, ಅಲ್ಲಿಂದ ವಾಹನಗಳಲ್ಲಿ ಕಳುಹಿಸಲಾಗುತ್ತಿದೆ. ಮಡಿಕೇರಿಯಿಂದ ಮೈಸೂರು-ಬೆಂಗಳೂರು ಕಡೆಗೆ ತೆರಳುವವರನ್ನು ಮಡಿಕೇರಿಯ ಸುದರ್ಶನ ವೃತ್ತದ ಬಳಿ ತಡೆದು ನಿಲ್ಲಿಸಲಾಗುತ್ತಿದೆ. ಇತ್ತ ಗುಡ್ಡೆಹೊಸೂರು ಬಳಿ ಬ್ಯಾರಿಕೇಡ್‌ಗಳನ್ನು ನಿರ್ಮಿಸಿ ವಾಹನಗಳನ್ನು ತಡೆದು ಹಾರಂಗಿ ಮಾರ್ಗವಾಗಿ ಕಳುಹಿಸಲಾಗುತ್ತಿದೆ.
ಕರ್ನಾಟಕ-ಕೇರಳ ಸಂಚಾರ ಬಂದ್: ಗುಂಡ್ಲುಪೇಟೆ – ಕೇರಳದ ವೈನಾಡಿನಲ್ಲಿ ಧಾರಾಕಾರ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಸುಲ್ತಾನ್ ಬತ್ತೇರಿ ರಸ್ತೆಯಲ್ಲಿ ಭಾರೀ ಪ್ರಮಾಣದಲ್ಲಿ ನೀರು ಹರಿಯುತ್ತಿದೆ. ನೀರಿನ ಹರಿವು ಹೆಚ್ಚಿದ ಪರಿಣಾಮ ಎಲ್ಲಾ ವಾಹನಗಳನ್ನೂ ಕರ್ನಾಟಕ ಗಡಿ ಪ್ರದೇಶವಾದ ಮದ್ದೂರು ಚೆಕ್ ಪೋಸ್ಟ್ ಸಮೀಪ ತಡೆ ಹಿಡಿಯಲಾಗಿದೆ. ಇದರಿಂದಾಗಿ ಕರ್ನಾಟಕ ಮತ್ತು ಕೇರಳ ಸಂಪರ್ಕ ತಾತ್ಕಾಲಿಕವಾಗಿ ಬಂದ್ ಆಗಿದೆ. ಕೇರಳ ಗಡಿ ಭಾಗದಲ್ಲಿ ಹರಿಯುವ ಕಬಿನಿ ನೀರಿನ ರಭಸ ಹೆಚ್ಚಾದ ಹಿನ್ನೆಲೆಯಲ್ಲಿ ವಾಹನ ಸಂಚಾರವನ್ನು ಸಂಪೂರ್ಣವಾಗಿ ರದ್ದು ಮಾಡಲಾಗಿದೆ. ಇದರಿಂದಾಗಿ ನಿಂತಿರುವ ವಾಹನಗಳ ಮೇಲೆಯೇ ನೀರು ಹರಿಯುತ್ತಿದ್ದು, ಕಾರು, ಲಾರಿ ಸೇರಿದಂತೆ ಹಲವು ವಾಹನಗಳು ನೀರಿನಲ್ಲಿ ಮುಳುಗಡೆಯಾಗಿವೆ. ಅಪಾಯದಲ್ಲಿ ಸಿಲುಕಿದ್ದವರನ್ನು ಪೊಲೀಸ್ ಸಿಬ್ಬಂದಿ ಬೋಟ್‌ನ ಮೂಲಕ ರಕ್ಷಿಸಿದರು.
ಮಹಾರಾಷ್ಟ್ರ ಸಂಪರ್ಕ ಕಡಿತ
* ಬೆಳಗಾವಿ-ಮಹಾರಾಷ್ಟ್ರದ ಕೊಲ್ಹಾಪುರ, ಮೀರಜ್, ಸಾಂಗ್ಲಿ, ಪುಣೆ, ರತ್ನಗಿರಿ, ಇಚಲಕರಂಜಿ ಪಟ್ಟಣಗಳಿಗೆ ತೆರಳುತ್ತಿದ್ದ ಬಸ್‌ಗಳ ಸಂಚಾರ ರದ್ದು.
* ನಿಪ್ಪಾಣಿ-ಕೊಲ್ಲಾಪುರ ರಾಷ್ಟ್ರೀಯ ಹೆದ್ದಾರಿ-4, ಬೆಳಗಾವಿ-ಪಣಜಿ, ಕಾಗವಾಡ್-ಮೀರಜ್ ರಸ್ತೆ ಸಂಪರ್ಕ ಬಂದ್.
* ಧರ್ಮಸ್ಥಳಕ್ಕೆ ತೆರಳುವ ಬಸ್‌ಗಳ ಸಂಚಾರವೂ ರದ್ದು.
* ಮಲಪ್ರಭಾ ಪ್ರವಾಹ, ಹುಬ್ಬಳ್ಳಿ -ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿ 218 ರಲ್ಲಿ ಸಂಚಾರ ಸಂಪೂರ್ಣ ಸ್ಥಗಿತ.
* ಹುಬ್ಬಳ್ಳಿ-ಅಂಕೋಲಾ, ಯಲ್ಲಾಪುರ- ಮುಂಡಗೋಡ ರಸ್ತೆ ಸಂಚಾರ ಬಂದ್.