Advertisement

Karnataka: ವಿದ್ಯುತ್‌ ದರದಂತೆ ವರ್ಷವೂ ಬಸ್‌ ಯಾನ ದರ ಹೆಚ್ಚಳ?

12:56 AM Jan 07, 2025 | Team Udayavani |

ಬೆಂಗಳೂರು: ಸರಕಾರವೇ ಹೇಳಿಕೊಂಡಂತೆ ದಶಕದ ಅನಂತರ ಮಾಡಲಾದ ಬಸ್‌ ಪ್ರಯಾಣ ದರ ಏರಿಕೆ ಇನ್ನು ಮುಂದೆ ಹೆಚ್ಚು-ಕಡಿಮೆ ಪ್ರತೀ ವರ್ಷ ನಡೆಯಲಿದೆ. ಆ ಮೂಲಕ ಪ್ರಯಾಣಿಕರ ಮೇಲೆ ನಿಯಮಿತವಾಗಿ “ಬರೆ’ ಬೀಳುವುದು ಗ್ಯಾರಂಟಿ!
ಹೌದು, ಕೆಇಆರ್‌ಸಿ (ಕರ್ನಾಟಕ ವಿದ್ಯುತ್ಛಕ್ತಿ ನಿಯಂತ್ರಣ ಆಯೋಗ) ಮಾದರಿಯಲ್ಲೇ ಬಸ್‌ ಪ್ರಯಾಣ ದರ ಪರಿಷ್ಕರಣೆಗೆ ಸಂಬಂಧಿಸಿ ಪ್ರತ್ಯೇಕ ಆಯೋಗ ರಚಿಸುವ ಸಲುವಾಗಿ ಸಾರಿಗೆ ನಿಗಮಗಳು ಸರಕಾರಕ್ಕೆ ಸಲ್ಲಿಸಿದ್ದ ಪ್ರಸ್ತಾವನೆಗೆ ಆರ್ಥಿಕ ಇಲಾಖೆ ಅಸ್ತು ಎಂದಿದ್ದು, ಮುಂದಿನ ದಿನಗಳಲ್ಲಿ ಈ ಸಂಬಂಧದ ಅಂಗೀಕಾರಕ್ಕಾಗಿ ಪ್ರಸ್ತಾವನೆ ಅಧಿವೇಶನದಲ್ಲಿ ಮಂಡನೆ ಆಗಲಿದೆ.
ಈ ಹಿಂದೆಯೇ ಸಾರಿಗೆ ಇಲಾಖೆ ಮೂಲಕ ಆರ್ಥಿಕ ಇಲಾಖೆಗೆ ಈ ಬಗೆಗಿನ ಪ್ರಸ್ತಾವನೆ ಸಲ್ಲಿಕೆಯಾಗಿತ್ತು.

Advertisement

ಇದಕ್ಕೆ ಅನುಮೋದನೆ ನೀಡಿದ್ದು, ಮುಂದಿನ ಹಂತಗಳಲ್ಲಿ ರಾಜ್ಯ ರಸ್ತೆ ಸಾರಿಗೆ ನಿಗಮಗಳ ನಿಯಮಗಳಿಗೆ ತಿದ್ದುಪಡಿ ತರಲಾಗುತ್ತದೆ. ಈ ಪ್ರಕ್ರಿಯೆ ಮುಗಿದ ಅನಂತರ ಸಚಿವ ಸಂಪುಟದಲ್ಲಿ ಅಂಗೀಕಾರ ಪಡೆದು, ಅಧಿವೇಶನದಲ್ಲಿ ಮಂಡಿಸಲಾಗುತ್ತದೆ. ಅಲ್ಲಿ ಚರ್ಚೆಯೊಂದಿಗೆ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಸಾರಿಗೆ ಇಲಾಖೆ ಮೂಲಗಳು “ಉದಯವಾಣಿ’ಗೆ ತಿಳಿಸಿವೆ.

ಬಸ್‌ಗಳ ಪ್ರಯಾಣ ದರ ಪರಿ ಷ್ಕರಣೆ ಸೇರಿ ಸಾರಿಗೆ ನಿಗಮಗಳಿಗೆ ಸಂಬಂಧಿಸಿದ ಸಮಸ್ಯೆಗಳ ಇತ್ಯರ್ಥಕ್ಕಾಗಿ ಈಗ ಆಯೋಗ ರಚಿಸಲಾಗುತ್ತಿದೆ. ಅಲ್ಲಿ ಸಾರಿಗೆ ನಿಗಮಗಳು ದರ ಪರಿಷ್ಕರಣೆ ಕುರಿತು ಪ್ರಸ್ತಾವನೆಗಳನ್ನು ಸಲ್ಲಿಸಲಿದ್ದು, ಅಭಿಪ್ರಾಯಗಳನ್ನು ಕ್ರೋಡೀಕರಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುತ್ತದೆ.

ಈಗಿರುವ ವ್ಯವಸ್ಥೆಯಲ್ಲಿ ದರ ಪರಿಷ್ಕರಣೆ ಬಗ್ಗೆ ಸರಕಾರವೇ ನಿರ್ಧಾರ ಕೈಗೊಳ್ಳುತ್ತಿದೆ. ಒಮ್ಮೆ ಆಯೋಗ ಅಸ್ತಿತ್ವಕ್ಕೆ ಬಂದರೆ, ಅದು ಸ್ವಾಯತ್ತ ಸಂಸ್ಥೆ ಆಗಿರಲಿದೆ. ಇದರಿಂದ ಪ್ರಯಾಣ ದರ ಪರಿಷ್ಕರಣೆ ಕುರಿತು ಇರುವ ಗೊಂದಲಗಳನ್ನು ನಿವಾರಿಸುವುದು, ಸರಕಾರದ ಹಸ್ತಕ್ಷೇಪ, ರಾಜಕೀಯ ಉದ್ದೇಶಿತ ನಿರ್ಧಾರಗಳಿಗೆ ಅವಕಾಶ ಇರುವುದಿಲ್ಲ. ಮತ್ತೂಂದೆಡೆ ನಿಗಮಗಳ ಸ್ಥಿತಿಗತಿ, ಜನರ ಅಭಿಪ್ರಾಯಗಳನ್ನೂ ಪರಿಗಣಿಸುವುದರಿಂದ ಪಾರದರ್ಶಕತೆಗೆ ಆದ್ಯತೆ ಸಿಗಲಿದೆ. ಇದರೊಂದಿಗೆ ಇಡೀ ಪ್ರಕ್ರಿಯೆ ಸರಳೀಕೃತವಾಗಲಿದೆ ಎಂಬ ವಾದ ಸಾರಿಗೆ ನಿಗಮಗಳದ್ದಾಗಿದೆ.

ಆದರೆ ಕೆಇಆರ್‌ಸಿ ಅಸ್ತಿತ್ವಕ್ಕೆ ಬಂದಾಗಿನಿಂದ ಪ್ರತೀ ವರ್ಷ ದರ ಪರಿಷ್ಕರಣೆ ಆಗುತ್ತಿದ್ದು, ಒಂದೂವರೆ ದಶಕದಲ್ಲಂತೂ ವಿದ್ಯುತ್‌ ದರ ಇಳಿಕೆಯಾದ ಉದಾಹರಣೆಗಳೇ ಇಲ್ಲ ಎನ್ನುವುದು ಕೂಡ ಸತ್ಯ. ಇದರ ಮುಂದುವರಿದ ಭಾಗವಾಗಿ ಕೇಂದ್ರ ಸರಕಾರವು ಪ್ರತೀ ತಿಂಗಳು “ಇಂಧನ ಖರೀದಿ ಹೊಂದಾಣಿಕೆ ಶುಲ್ಕ’ಕ್ಕೂ ಎಸ್ಕಾಂಗಳಿಗೆ ಅವಕಾಶ ಮಾಡಿಕೊಟ್ಟಿದೆ. ಅದೇ ಮಾದರಿ ಅನಂತರದ ದಿನಗಳಲ್ಲಿ ನಿಗಮಗಳಲ್ಲೂ ಅಳವಡಿಕೆಯಾದರೆ ಅಚ್ಚರಿ ಇಲ್ಲ ಎಂಬ ವಾದವೂ ಇದೆ.

Advertisement

ಕೋವಿಡ್‌ ಬಳಿಕ ನೇಪಥ್ಯಕ್ಕೆ
ಈ ಹಿಂದೆ ಡೀಸೆಲ್‌ ದರ ಪರಿಷ್ಕರಣೆ ಆದಾಗ ಬಸ್‌ ಪ್ರಯಾಣ ದರ ಕೂಡ ಪರಿಷ್ಕರಣೆ ಆಗಬೇಕು ಎಂಬ ಆದೇಶ ಇತ್ತು. ಆದರೆ ಕೋವಿಡ್‌-19 ಅನಂತರ ಇದು ನೇಪಥ್ಯಕ್ಕೆ ಸರಿಯಿತು. ಯಾಕೆಂದರೆ ವೇತನ ಮತ್ತಿತರ ಉದ್ದೇಶಗಳಿಗೆ ಸರಕಾರದ ಅನುದಾನ ಅವಲಂಬಿಸಬೇಕಾಯಿತು. ಆಗ ಯಾವುದೇ ನಿರ್ಣಯಗಳು ಆಗಬೇಕಾದರೆ, ತನ್ನ ಅನುಮತಿ ಪಡೆಯುವಂತೆ ಸರಕಾರ ಸೂಚನೆ ನೀಡಿತು. ಆದೇಶ ಇದ್ದರೂ ಅದಕ್ಕೆ ಮೊದಲು ಕೂಡ ದರ ಪರಿಷ್ಕರಣೆ ಸಂದರ್ಭದಲ್ಲಿ ಸರಕಾರದ ಅನುಮತಿ ಪಡೆಯಲಾಗುತ್ತಿತ್ತು.

ಕೆಇಆರ್‌ಸಿ ಮಾದರಿಯಲ್ಲಿ ಸಾರಿಗೆ ನಿಗಮಗಳಿಗೆ ಸಂಬಂಧಿಸಿ ನಿಯಂತ್ರಣ ಆಯೋಗ ರಚಿಸುವ ಪ್ರಸ್ತಾವನೆ ಇನ್ನೂ ಸರಕಾರದ ಪರಿಶೀಲನೆಯ ಹಂತದಲ್ಲಿದೆ. ಅದಕ್ಕೆ ನಿಯಮಗಳ ತಿದ್ದುಪಡಿಯಾಗಿ ಅಧಿವೇಶನದಲ್ಲಿ ಮಂಡನೆ ಆಗಬೇಕು. ಇದೆಲ್ಲವೂ ಮುಂಬರುವ ದಿನಗಳಲ್ಲಿ ಆಗಲಿದೆ.
-ರಾಮಲಿಂಗಾರೆಡ್ಡಿ , ಸಾರಿಗೆ ಸಚಿವ

-ವಿಜಯ ಕುಮಾರ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next