ಕೊಲೊಂಬೊ: ಕಳೆದ ವಾರ ಕೊಲೊಂಬೊ ಸಮುದ್ರದಲ್ಲಿ ಸಿಂಗಾಪುರ್ ಮೂಲದ ಹಡಗಿಗೆ ಬೆಂಕಿ ಹೊತ್ತುಕೊಂಡಿದ್ದು, ಹಗಡಿನಲ್ಲಿದ್ದ ನೈಡ್ರೋಜನ್ ಡೈಆಕ್ಸೈಡ್ ಹೊರಸೂಸುವಿಕೆಯ ಪರಿಣಾಮವಾಗಿ ಆ್ಯಸಿಡ್ (ಆಮ್ಲ) ಮಳೆಯಾಗುವ ಸಾಧ್ಯತೆ ಇದ್ದಿರುವುದಾಗಿ ಶ್ರೀಲಂಕಾದ ಉತ್ನತ ಪರಿಸರ ಸಂಸ್ಥೆ ಎಚ್ಚರಿಕೆ ನೀಡಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಚರಂಡಿಯಲ್ಲಿ ಬಿದ್ದು ಮಗು ಸಾವು : ಗ್ರಾಮ ಪಂಚಾಯತ್ ವಿರುದ್ಧ ಗ್ರಾಮಸ್ಥರ ಆಕ್ರೋಶ
ಸಿಂಗಾಪುರ್ ಮೂಲದ ಸರಕು ಹಡಗು ಎಂವಿ-ಎಕ್ಸ್ ಪ್ರೆಸ್ ಪರ್ಲ್ ಗುಜರಾತ್ ನ ಹಜೀರಾದಿಂದ ಕೊಲಂಬೊ ಬಂದರಿಗೆ ಸೌಂದರ್ಯವರ್ಧಕಗಳ ರಾಸಾಯನಿಕ ಮತ್ತು ಕಚ್ಛಾ ವಸ್ತುಗಳನ್ನು ಸಾಗಿಸುತ್ತಿತ್ತು. ಆದರೆ ಕೊಲಂಬೋದ ಕರಾವಳಿಯಿಂದ 9.5 ನಾಟಿಕಲ್ ಮೈಲುಗಳಷ್ಟು ದೂರದಲ್ಲಿ ಹಡಗಿಗೆ ಬೆಂಕಿ ಹೊತ್ತುಕೊಂಡಿತ್ತು. ಇದರಿಂದಾಗಿ ಮೇ 20ರಂದು ಹಡಗು ಕೊಲಂಬೊ ಬಂದರಿನ ಹೊರಗೆ ಲಂಗರು ಹಾಕಿರುವುದಾಗಿ ವರದಿ ವಿವರಿಸಿದೆ.
ಎಂವಿ ಎಕ್ಸ್ ಪ್ರೆಸ್ ಪರ್ಲ್ ಹಡಗಿನಲ್ಲಿ 325 ಮೆಟ್ರಿಕ್ ಟನ್ ಗಳಷ್ಟು ಇಂಧನ ಇದ್ದು, ಜೊತೆಗೆ 25 ಟನ್ ಗಳಷ್ಟು ಅಪಾಯಕಾರಿ ನೈಟ್ರಿಕ್ ಆ್ಯಸಿಡ್ ಗಳ ರಾಸಾಯನಿಕ ವಸ್ತುಗಳು ಇದ್ದಿರುವುದಾಗಿ ವರದಿ ತಿಳಿಸಿದೆ. ಎಂವಿ ಎಕ್ಸ್ ಪ್ರೆಸ್ ಪರ್ಲ್ ಹಡಗಿನಿಂದ ಅಪಾರ ಪ್ರಮಾಣದಲ್ಲಿ ನೈಟ್ರೋಜನ್ ಡೈಆಕ್ಸೈಡ್ ಹೊರಸೂಸುವುದನ್ನು ನಾವು ಗಮನಿಸಿದ್ದೇವೆ. ಮಳೆಗಾಲದಲ್ಲಿ ನೈಟ್ರೋಜನ್ ಡೈಆಕ್ಸೈಡ್ ಅನಿಲ ಹೊರಸೂಸುವ ಮೂಲಕ ಸ್ವಲ್ಪ ಆಮ್ಲ ಮಳೆಯಾಗಬಹುದು ಎಂದು ಸಮುದ್ರ ಪರಿಸರ ಸಂರಕ್ಷಣಾ ಪ್ರಾಧಿಕಾರದ ಅಧ್ಯಕ್ಷ ದರ್ಶನಿ ಲಹಂದಾಪುರ್ ತಿಳಿಸಿರುವುದಾಗಿ ವೆಬ್ ಸೈಟ್ ವರದಿಯೊಂದು ವಿವರಿಸಿದೆ.
ಮುಖ್ಯವಾಗಿ ಲಂಕಾದ ಕರಾವಳಿ ಪ್ರದೇಶದಲ್ಲಿರುವ ಜನರು ಜಾಗರೂಕರಾಗಿರಬೇಕು. ಈ ಸಂದರ್ಭದಲ್ಲಿ ಸುರಿಯುವ ಮಳೆಗೆ ಸಿಲುಕದಂತೆ ನೋಡಿಕೊಳ್ಳಬೇಕು ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.
ಕೊಲಂಬೊ ಕರಾವಳಿ ಪ್ರದೇಶದಲ್ಲಿನ ಸಿಂಗಾಪುರ್ ಮೂಲದ ಹಡಗಿನ ಬೆಂಕಿಯನ್ನು ನಂದಿಸಲು ಶ್ರೀಲಂಕಾದ ನೌಕಾಪಡೆಗೆ ನೆರವು ನೀಡಲು ಭಾರತ ಐಸಿಜಿ ವೈಭವ್, ಐಸಿಜಿ ಡೋರ್ನಿಯರ್ ಮತ್ತು ಟಗ್ ವಾಟರ್ ಲಿಲ್ಲಿಯನ್ನು ರವಾನಿಸಿರುವುದಾಗಿ ವರದಿ ತಿಳಿಸಿದೆ.
ಏನಿದು ಆ್ಯಸಿಡ್ ಮಳೆ:
ಸಾಮಾನ್ಯವಾಗಿ ಮಳೆ, ಮಂಜು ಮೊದಲಾದ ರೂಪದಲ್ಲಿ ಆಮ್ಲಗಳು ವಾತಾವರಣದಿಂದ ಭೂಮಿಯ ಮೇಲೆ ಚೆಲ್ಲಲ್ಪಡುವ ಪ್ರಕ್ರಿಯೆಯನ್ನು ಆಮ್ಲ ಮಳೆ ಎಂದು ಕರೆಯಲಾಗುತ್ತದೆ. ಮುಖ್ಯವಾಗಿ ವಾತಾವರಣದಲ್ಲಿ ರೂಪುಗೊಳ್ಳುವ ಗಂಧಕಾಮ್ಲ(ಸಲ್ಫರಿಕ್ ಆಮ್ಲ) ಮತ್ತು ನೈಟ್ರಿಕ್ ಆಮ್ಲಗಳು ಮಳೆ ನೀರಿನ ಜತೆ ಬೆರೆತು ಭೂಮಿಯ ಮೇಲೆ ಸುರಿಯುವುದನ್ನು ಆಮ್ಲ ಮಳೆ ಎನ್ನುತ್ತಾರೆ. ಕೊಲಂಬೋದಲ್ಲಿನ ಸಿಂಗಾಪುರ್ ಹಡಗಿನಲ್ಲಿ ನೈಟ್ರೋಜನ್ ಡೈಆಕ್ಸೈಡ್ ಇದ್ದು, ಇದು ಹೊರಸೂಸುತ್ತಿದೆ. ಮಳೆಯ ಕಾರಣದಿಂದ ಇದು ವಾತಾವರಣದ ಜತೆ ಸೇರಿ ಆಮ್ಲ ಮಳೆ ಸುರಿಸಲು ಕಾರಣವಾಗಬಹುದು ಎಂದು ಲಂಕಾ ಹವಾಮಾನ ಇಲಾಖೆ ಎಚ್ಚರಿಸಿದೆ.