Advertisement

ಹೊತ್ತಿ ಉರಿಯುತ್ತಿದೆ ಅಮೆರಿಕ ಸಮಾನತೆ-ಸಹೋದರತ್ವ ಮುಖ್ಯ

02:22 AM Jun 02, 2020 | Sriram |

ಜಾಗತಿಕ ಸೂಪರ್‌ಪವರ್‌ ಎಂದು ಕರೆಸಿಕೊಳ್ಳುವ ಅಮೆರಿಕದ ದೌರ್ಬಲ್ಯ, ಹುಳುಕುಗಳೂ ಕೆಲ ತಿಂಗಳಿಂದ ಜಗತ್ತಿನೆದುರು ಅನಾವರಣವಾಗುತ್ತಲೇ ಇವೆ. ಕೊರೊನಾದಿಂದ ಅತಿ ಹೆಚ್ಚು ಹಾನಿ ಅನುಭವಿಸಿ, ಅದರಿಂದ ಚೇತರಿಸಿಕೊಳ್ಳಲು ಸಾಧ್ಯವಾಗದೇ ಪರದಾಡುತ್ತಿರುವಾಗಲೇ ಈಗ ವರ್ಣ ತಾರತಮ್ಯದ-ಜನಾಂಗೀಯ ದ್ವೇಷದ ವಿರುದ್ಧ ವ್ಯಾಪಕ ಪ್ರತಿಭಟನೆಗಳು ಆರಂಭವಾಗಿ, ಹಿಂಸಾರೂಪ ಪಡೆದಿದೆ. 140ಕ್ಕೂ ಅಧಿಕ ನಗರಗಳಲ್ಲಿ ಪ್ರತಿಭಟನೆ ನಡೆದಿದ್ದು, ಅದೀಗ ಶ್ವೇತಭವನದವರೆಗೂ ತಲುಪಿದೆ.

Advertisement

ಮೇ 25ರಂದು ಜಾರ್ಜ್‌ ಫ್ಲಾಯ್ಡ ಎಂಬ ಕಪ್ಪುವರ್ಣೀಯ ವ್ಯಕ್ತಿಯನ್ನು ಬಂಧಿಸುವ ನೆಪದಲ್ಲಿ ಅಮೆರಿಕನ್‌ ಪೊಲೀಸರು ಅವರ ಸಾವಿಗೆ ಕಾರಣವಾದರು. ಜಾರ್ಜ್‌ ಫ್ಲಾಯ್ಡ ಅಂಗಡಿಯೊಂದರಲ್ಲಿ ನಕಲಿ ನೋಟು ಕೊಟ್ಟಿದ್ದಾರೆ ಎಂಬ ದೂರನ್ನು ಆಧರಿಸಿ ಪೊಲೀಸರು ಅವರನ್ನು ಬಂಧಿಸಲು ಮುಂದಾದರು. ಪೊಲೀಸ್‌ ಅಧಿಕಾರಿಯೊಬ್ಬರು ಜಾರ್ಜ್‌ ಕುತ್ತಿಗೆಯ ಮೇಲೆ 8 ನಿಮಿಷದವರೆಗೆ ಕುಳಿತು ಅವರು ಉಸಿರುಗಟ್ಟಿ ಸಾಯುವಂತೆ ಮಾಡಿದರು. ಆ ವ್ಯಕ್ತಿ ತನಗೆ ಉಸಿರಾಡಲಾಗುತ್ತಿಲ್ಲ ಎಂದು ಅಂಗಲಾಚಿದರೂ ಪೊಲೀಸ್‌ ಅಧಿಕಾರಿ ಜಾರ್ಜ್‌ ನರಳಾಟಕ್ಕೆ ಕಿವಿಗೊಡಲಿಲ್ಲ. ಜಾರ್ಜ್‌ ಅಂಥದ್ದೇನು ಮಹಾಪರಾಧ ಮಾಡಿದರೆಂದು ಪೊಲೀಸರು ಹಾಗೆ ಮಾಡಿದರು ಎಂಬ ಆಕ್ರೋಶ ಎದುರಾಗುತ್ತಿದೆ. ಈಗ ಆದಾಗ್ಯೂ, ಈಗ ತಪ್ಪೆಸಗಿದ ಪೊಲೀಸ್‌ ಅಧಿಕಾರಿಯ ಮೇಲೆ ಕೊಲೆ ಪ್ರಕರಣ ದಾಖಲಾಗಿದೆಯಾದರೂ ಜನರ ಕೋಪವೇನೂ ಇದರಿಂದ ಶಾಂತವಾಗುವಂತೆ ಕಾಣುತ್ತಿಲ್ಲ. ಏಕೆಂದರೆ, ಅಮೆರಿಕನ್‌ ಪೊಲೀಸರು ಈ ರೀತಿ ಕಪ್ಪುವರ್ಣೀಯರ ವಿರುದ್ಧ ಕ್ರೌರ್ಯ ಮೆರೆಯುತ್ತಿರುವುದು (ಕೊಲೆ ಮಾಡುತ್ತಿರುವುದು) ಇದೇ ಮೊದಲೇನೂ ಅಲ್ಲ. ಪೊಲೀಸರು ತಪ್ಪು ಮಾಡಿದರೂ, ವಿಚಾರಣೆ ನಡೆದು ಹೆಚ್ಚೆಂದರೆ ಕೇವಲ ಅಮಾನತಿನಂಥ ಚಿಕ್ಕ ಶಿಕ್ಷೆ ಅನುಭವಿಸಿ ಪಾರಾದದ್ದೇ ಅಧಿಕ. ಈ ವಿಚಾರವಾಗಿ ಅಮೆರಿಕದ ಮಾನವ ಹಕ್ಕು ಸಂಘಟನೆಗಳು, ಮಾಧ್ಯಮಗಳು ದಶಕಗಳಿಂದ ಧ್ವನಿಯೆತ್ತುತ್ತಲೇ ಬಂದರೂ ಪೊಲೀಸರ ದೌರ್ಜನ್ಯಗಳು ನಿಲ್ಲುತ್ತಲೇ ಇಲ್ಲ. ಈ ಕಾರಣಕ್ಕಾಗಿಯೇ, ಕೆಲ ವರ್ಷಗಳಿಂದ ಆ ದೇಶದಲ್ಲಿ “ಬ್ಲ್ಯಾಕ್‌ ಲೈವ್ಸ್‌ ಮ್ಯಾಟರ್‌’ ಆಂದೋಲನ ನಡೆಯುತ್ತಿದೆ.

ಈ ರೀತಿಯ ಘಟನೆಗಳು ನಡೆದಾಗಲೆಲ್ಲ, ಕಪ್ಪುವರ್ಣೀಯರಿಂದ ಅಮೆರಿಕದಲ್ಲಿ ಅಪರಾಧ ಪ್ರಕರಣಗಳು ಹೆಚ್ಚುತ್ತಿವೆ, ಅವರು ಪೊಲೀಸರಿಗೆ ಸಹಕರಿಸುವುದಿಲ್ಲ ಎಂಬೆಲ್ಲ ವಾದಗಳು ಒಂದು ವಲಯದಿಂದ ಎದುರಾಗುತ್ತವೆ. ಆದರೆ ತಪ್ಪು ಮಾಡಿದರೆ ಶಿಕ್ಷಿಸಲು ನ್ಯಾಯಾಲಯಗಳು ಇರುತ್ತವೆ. ಯಾವ ಕಾರಣಕ್ಕೂ ಪೊಲೀಸರ ವರ್ತನೆ ಸಮರ್ಥನೀಯವಲ್ಲವೇ ಅಲ್ಲ. ದುರಂತವೆಂದರೆ, ಪ್ರತಿ ಬಾರಿಯೂ ಪೊಲೀಸರ‌ ಇಂಥ ಕೃತ್ಯ ವಿರೋಧಿಸಿ ಪ್ರತಿಭಟನೆಗಳು ಆರಂಭವಾದಾಗಲೆಲ್ಲ ಇದರ ಲಾಭ ಪಡೆಯುವ ಕೆಲ ದುಷ್ಟರು ಅಂಗಡಿ-ಮಾಲ್‌ಗಳನ್ನು ಲೂಟಿ ಮಾಡಲಾರಂಭಿಸುತ್ತಾರೆ, ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಮಾಡುತ್ತಾರೆ. ಇದರಿಂದಾಗಿ, ಮುಖ್ಯ ಚರ್ಚೆಯೇ ಮೂಲೆಗುಂಪಾಗಿ, ಲೂಟಿ ಮಾಡುವವರ ವಿಷಯವೇ ಮುನ್ನೆಲೆಗೆ ಬಂದುಬಿಡುತ್ತದೆ. ಈಗಲೂ ಇದೇ ಆಗುತ್ತಿರುವುದು. ಜಾರ್ಜ್‌ ಫ್ಲಾಯ್ಡ ಸಾವಿಗೆ ನ್ಯಾಯ ಸಿಗಬೇಕೆಂದು ಆರಂಭವಾದ ಶಾಂತಿಯುತ ಪ್ರತಿಭಟನೆಯ ನಡುವೆಯೇ, ಅರಾಜಕತೆ, ಹಿಂಸಾಚಾರ, ಕಳ್ಳತನಗಳು ಅಧಿಕವಾಗಿದ್ದು, ಮಾಧ್ಯಮಗಳಲ್ಲಿ ಈ ಚರ್ಚೆಯೇ ಜೋರಾಗಿದೆ. ಎಲ್ಲಿಯವರೆಗೂ ಅಮೆರಿಕದ ಪೊಲೀಸ್‌ ವ್ಯವಸ್ಥೆಯಲ್ಲಿ ಆಮೂಲಾಗ್ರ ಸುಧಾರಣೆ ಆಗುವುದಿಲ್ಲವೋ ಪೊಲೀಸರಲ್ಲಿ ಸಮಾನತೆ-ಸಹೋದರತ್ವದ ಗುಣ ಬೆಳೆಯುವುದಿಲ್ಲವೋ ಅಲ್ಲಿಯವರೆಗೂ ಇಂಥ ಘಟನೆಗಳು ಮರುಕಳಿಸುತ್ತಲೇ ಇರುತ್ತವೆ. ದುರಂತವೆಂದರೆ, ಈಗ ಅಮೆರಿಕದಲ್ಲಿ ಕೋವಿಡ್-19 ಹಾವಳಿಯೂ ಅಪಾಯಕಾರಿ ಮಟ್ಟ ಮುಟ್ಟಿದ್ದು, ಈ ಪ್ರತಿಭಟನೆಗಳಿಂದಾಗಿ ಸೋಂಕಿತರ ಸಂಖ್ಯೆ ನಿಸ್ಸಂಶಯವಾಗಿಯೂ ಅಧಿಕವಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next