ಢಾಕಾ: ಬಾಯ್ಕಾಟ್ ಇಂಡಿಯಾ ಅಭಿಯಾನದ ಬಗ್ಗೆ ವಿಪಕ್ಷಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡಿರುವ ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಅವರು, ಭಾರತೀಯ ವಸ್ತುಗಳನ್ನು ಬಹಿಷ್ಕರಿಸುವ ವಿಪಕ್ಷಗಳ ನೈತಿಕತೆಯನ್ನು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ:Mysore: ಆಸ್ತಿ ಘೋಷಣೆ ಮಾಡಿದ ಯದುವೀರ್: ಸ್ಥಿರಾಸ್ತಿ-ಚರಾಸ್ತಿ ಮೌಲ್ಯವೆಷ್ಟು?
ಭಾರತೀಯ ವಸ್ತುಗಳನ್ನು ಬಹಿಷ್ಕರಿಸಿ ಎಂದು ಅಭಿಯಾನ ನಡೆಸುತ್ತಿರುವ ವಿಪಕ್ಷಗಳು, ಒಂದು ವೇಳೆ ಅವರು ಭಾರತೀಯ ಖಾದ್ಯ ಇಲ್ಲದೇ ಊಟೋಪಚಾರ ಮಾಡುತ್ತಿದ್ದಾರೆಯೇ ಎಂಬುದಾಗಿ ಉತ್ತರ ನೀಡಬೇಕಾಗಿದೆ ಎಂದು ಹಸೀನಾ ತಿರುಗೇಟು ನೀಡಿದ್ದಾರೆ.
ಬಾಯ್ಕಾಟ್ ಅಭಿಯಾನ ನಡೆಸುತ್ತಿರುವವರ ಎಷ್ಟು ಮಂದಿ ಪತ್ನಿಯರು ಭಾರತೀಯ ಸೀರೆಗಳನ್ನು ಉಟ್ಟುಕೊಂಡಿದ್ದಾರೆ? ಹಾಗಾದರೆ ಪತ್ನಿಯರು ತೊಟ್ಟ ಸೀರೆಯನ್ನು ಯಾಕೆ ಸುಟ್ಟು ಹಾಕಿಲ್ಲ? ಎಂದು ಹಸೀನಾ ಪ್ರಶ್ನಿಸಿದ್ದಾರೆ.
ಪ್ರಧಾನಿ ಶೇಖ್ ಹಸೀನಾ ಭಾರತದ ಜತೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಜನವರಿ ತಿಂಗಳಿನಲ್ಲಿ ಬಾಂಗ್ಲಾದೇಶದಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಶೇಖ್ ಹಸೀನಾ ಪಕ್ಷ ಜಯಭೇರಿ ಬಾರಿಸುವ ಮೂಲಕ ಐದನೇ ಬಾರಿ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ್ದರು.
ಬಾಂಗ್ಲಾದೇಶ ಚುನಾವಣೆಯಲ್ಲಿ ಹಸೀನಾ ನೇತೃತ್ವದ ಅವಾಮಿ ಲೀಗ್ ಪಕ್ಷವು ಪ್ರಚಂಡ ಗೆಲುವು ಸಾಧಿಸಿತ್ತು. 299 ಕ್ಷೇತ್ರಗಳಲ್ಲಿ ಅವಾಮಿ ಲೀಗ್ 216 ಸ್ಥಾನಗಳಲ್ಲಿ ಜಯ ಸಾಧಿಸಿತ್ತು. ಈ ಸಂದರ್ಭದಲ್ಲಿ ವಿಪಕ್ಷಗಳು ಚುನಾವಣೆಯನ್ನು ಬಹಿಷ್ಕರಿಸುವಂತೆ ಕರೆ ನೀಡಿದ್ದವು. ತದನಂತರ ವಿಪಕ್ಷಗಳು Boycott India ಅಭಿಯಾನ ಆರಂಭಿಸಿದ್ದವು.