Advertisement

ಬರ್ಮಾ ದೇಶದ ಕತೆ: ನರಿ ಮತ್ತು ನಗಾರಿ

06:00 AM Jul 08, 2018 | Team Udayavani |

ಒಂದು ಹಳ್ಳಿಯಲ್ಲಿ ವಾಂಕೋ ಎಂಬ ನಗಾರಿ ಬಡಿಯುವವನಿದ್ದ. ಊರಿನಲ್ಲಿ ಯಾರಿಗಾದರೂ ಮಕ್ಕಳು ಹುಟ್ಟಿದರೆ ಅವನು ಶಂಖ ಊದಿ ಈ ಸುದ್ದಿ ಊರಿಗೇ ತಿಳಿಯುವಂತೆ ಮಾಡಬೇಕು. ಯಾರಾದರೂ ಸತ್ತುಹೋದರೆ ಊರಿಗೇ ಕೇಳಿಸುವಂತೆ ದೊಡ್ಡದಾಗಿ ನಗಾರಿ ಬಡಿಯಬೇಕು. ಈ ಕೆಲಸಕ್ಕಾಗಿ ಅವನಿಗೆ ಹಳ್ಳಿಯ ಜನ ಕೊಡುವ ದವಸ ಧಾನ್ಯಗಳಿಂದ ಜೀವನ ಸಾಗುತ್ತಿತ್ತು ಮಾತ್ರವಲ್ಲ, ತುಂಬ ಉಳಿತಾಯವೂ ಆಗುತ್ತಿತ್ತು. ಇದರಿಂದಾಗಿ ವಾಂಕೋನಿಗೆ ಮದ್ಯ ಕುಡಿಯುವ ಕೆಟ್ಟ ಚಟವೊಂದು ಅಂಟಿಕೊಂಡಿತು. ಉಳಿತಾಯದ ಧಾನ್ಯವನ್ನು ಮಾರಾಟ ಮಾಡಿ ಬಂದ ಹಣದಲ್ಲಿ ಕಂಠಪೂರ್ತಿ ಕುಡಿಯುತ್ತಿದ್ದ. ಕುಡಿದ ಮತ್ತಿನಲ್ಲಿ ಮನೆಗೆ ಬಂದು ರಾತ್ರೆ ಎಲ್ಲರೂ ಮಲಗಿ ನಿದ್ರಿಸುವ ಹೊತ್ತಿನಲ್ಲಿ ಜೋರಾಗಿ ನಗಾರಿ ಬಡಿಯುತ್ತಿದ್ದ. ಇದರಿಂದ ಯಾರೋ ಸತ್ತಿದ್ದಾರೆಂದು ಭಾವಿಸಿ ಜನರೆಲ್ಲ ನಿದ್ರೆಯಿಂದ ಎಚ್ಚತ್ತು ಸತ್ತವರು ಯಾರೆಂದು ತಿಳಿಯಲು ಅವನ ಬಳಿಗೆ ಓಡಿ ಬರುತ್ತಿದ್ದರು. ಆದರೆ ಯಾರೂ ಸತ್ತಿಲ್ಲವೆಂದು ತಿಳಿದಾಗ ಅವನನ್ನು ಶಪಿಸುತ್ತ ಹೋಗಿಬಿಡುವರು. ಹೀಗೆ ಒಂದೆರಡು ದಿನ ಮಾತ್ರ ನಡೆಯಲಿಲ್ಲ, ದಿನವೂ ವಾಂಕೋ ತನ್ನ ದುಶ್ಚಟದಿಂದ ಜನಗಳ ನಿದ್ರೆಗೆಡಿಸಿ ಅವರ ಕೋಪಕ್ಕೆ ಗುರಿಯಾದ.

Advertisement

    ಒಂದು ದಿನ ಸಿಟ್ಟಿಗೆದ್ದ ಜನರು ವಾಂಕೋನನ್ನು ಹಿಡಿದು ಚೆನ್ನಾಗಿ ಹೊಡೆದರು. “ಇನ್ನು ಮುಂದೆ ನಿನಗೆ ನಗಾರಿ ಬಡಿಯುವ ಉದ್ಯೋಗವಿಲ್ಲ. ರಾತ್ರೆ ಬೆಳಗಾಗುವುದರೊಳಗೆ ನಗಾರಿಯನ್ನು ತೆಗೆದುಕೊಂಡು ಹೋಗಿ ದೂರ ಎಲ್ಲಿಯಾದರೂ ಎಸೆದು ಬರಬೇಕು. ತಪ್ಪಿ$ದರೆ ನಿನ್ನನ್ನು ಕೊಂದು ಹಾಕುತ್ತೇವೆ’ ಎಂದು ತಾಕೀತು ಮಾಡಿದರು. ಅನ್ಯ ದಾರಿಯಿಲ್ಲದೆ ವಾಂಕೋ ನಗಾರಿಯನ್ನು ತೆಗೆದುಕೊಂಡು ಹೋಗಿ ಕಾಡಿನಲ್ಲಿದ್ದ ಒಂದು ಹಾಸುಗಲ್ಲಿನ ಮೇಲೆ ಇರಿಸಿ ಮನೆಗೆ ಬಂದ. ಅದರ ಪಕ್ಕದಲ್ಲಿ ಒಂದು ಮರ ಇತ್ತು. ಮರದ ಒಂದು ಕೊಂಬೆ ನೆಲದ ವರೆಗೆ ಬಾಗಿತ್ತು. ಗಾಳಿ ಬೀಸಿದಾಗ ಈ ಕೊಂಬೆ ನಗಾರಿಯ ಮೈಯನ್ನು ಸವರುತ್ತಿತ್ತು. ಅದರಿಂದ ದೊಡ್ಡದಾಗಿ ಧಾಂ ಧಾಂ ಎಂಬ ಶಬ್ದ ಬರುತ್ತಿತ್ತು.

    ಆ ಕಾಡಿನಲ್ಲಿದ್ದ ಒಂದು ಮುದಿ ನರಿಗೆ ರಾತ್ರೆಯಿಡೀ ತಿರುಗಾಡಿದರೂ ಎಲ್ಲಿಯೂ ಆಹಾರವಾಗಬಲ್ಲ ಒಂದು ಕೋಳಿಯಾಗಲಿ, ಮೊಲವಾಗಲಿ ಕಾಣಿಸಿರಲಿಲ್ಲ. ನಿರಾಸೆಯಿಂದ ತನ್ನ ಗವಿಗೆ ಮರಳುತ್ತಿತ್ತು. ಆಗ ದೊಡ್ಡದಾಗಿ ಧಾಂ ಧಾಂ ಎಂಬ ನಗಾರಿಯ ಸದ್ದು ಕೇಳಿಸಿತು. ನರಿಗೆ ಎದೆಯೊಡೆದಂತಾಯಿತು. ಕಾಡಿಗೆ ಯಾವುದೋ ಬಲಶಾಲಿಯಾದ ಪ್ರಾಣಿ ಬಂದಿದೆ, ಇದು ಅದರದೇ ಕೂಗು ಎಂದುಕೊಂಡು ಅಲ್ಲಿಂದ ಓಡಲಾರಂಭಿಸಿತು. ಎದುರಿನಿಂದ ಬರುತ್ತಿದ್ದ ಆನೆ ಅದನ್ನು ತಡೆದು ನಿಲ್ಲಿಸಿತು. “ಅರಣ್ಯ ಮಂತ್ರಿಗಳೇ, ತಮ್ಮ ಹುಟ್ಟುಹಬ್ಬದ ಸಮಾರಂಭಕ್ಕೆ ಕಾಡಿನ ರಾಜನನ್ನು ಆಹ್ವಾನಿಸಲು ಹೊರಟಂತಿದೆ. ಯಾಕೆ ನಾನು ನಿಮಗೆ ಕಾಣಿಸಲಿಲ್ಲವೆ?’ ಕೇಳಿತು. ನರಿ ಏದುಸಿರು ಬಿಟ್ಟಿತು. “ಸುಮ್ಮನಿರಣ್ಣಾ, ನಿನಗೆ ಯಾವಾಗಲೂ ತಮಾಷೆ. ಇಡೀ ಕಾಡಿಗೆ ಅಪಾಯ ತರುವ ಹೊಸ ಜೀವಿಯ ಪ್ರವೇಶವಾಗಿದೆ. ಅದರ ಕೂಗು ಕೇಳಿಯೇ ಎದೆ ಒಡೆಯುವಂತಾಯಿತು. ಇನ್ನು ಅದನ್ನು ನೋಡಿದರೆ ಜೀವ ಹಾರಿ ಹೋಗುವುದು ಖಂಡಿತ’ ಎಂದು ಬೆವರೊರೆಸಿಕೊಂಡಿತು. 

    “ಅಂತಹ ದೊಡ್ಡ ಪ್ರಾಣಿ ಯಾವುದು? ಬಾ ತೋರಿಸು’ ಎಂದು ಆನೆ ಕರೆಯಿತು. ನರಿ ಬರಲೊಪ್ಪಲಿಲ್ಲ. ಆನೆ ಅದರ ಕೈ ಹಿಡಿದು ಎಳೆದುಕೊಂಡು ಬಂದಿತು. ಆಗ ಗಾಳಿ ಬೀಸುತ್ತ ಇತ್ತು. ಮರದ ಕೊಂಬೆ ತಗುಲಿದ ಕಾರಣಕ್ಕೆ ನಗಾರಿಯಿಂದ ದೊಡ್ಡ ಸದ್ದು ಕೇಳಿಬಂದಿತು. ಆನೆಗೂ ಎದೆಯಲ್ಲಿ ಅವಲಕ್ಕಿ ಕುಟ್ಟಿದಂತಾಯಿತು. “ನಿನ್ನ ಮಾತು ನಿಜ ಅನಿಸುತ್ತದೆ. ಇಷ್ಟು ದೊಡ್ಡದಾಗಿ ಕೂಗುವ ಗಂಟಲು ಆ ಪ್ರಾಣಿಗಿರುವುದು ಸತ್ಯವಾದರೆ ಅದರ ದೇಹವೂ ಪರ್ವತದಷ್ಟು ದೊಡ್ಡದಿರಬಹುದು ಅಂತ ತೋರುತ್ತದೆ. ಅದು ಎಲ್ಲಾದರೂ ನಮ್ಮನ್ನು ನೋಡಿದರೆ ಅಪಾಯವನ್ನು ಮೈಮೇಲೆಳೆದುಕೊಂಡ ಹಾಗಾಗುತ್ತದೆ. ಬಾ, ಹೋಗೋಣ’ ಎಂದು ನರಿಯೊಂದಿಗೆ ಒಂದೇ ಓಟಕ್ಕೆ ಮರಳಿ ಬಂದಿತು.

ಆಗ ಎದುರಿನಲ್ಲಿ ಒಂದು ಸಿಂಹ ಬರುತ್ತ ಇತ್ತು. ಆನೆಯನ್ನು ಕೆಂಗಣ್ಣಿನಿಂದ ನೋಡಿ, “ಏನೋ ಆನೆರಾಯಾ, ಕುತಂತ್ರಿ ನರಿಯನ್ನು ಕೂಡಿಕೊಂಡು ನನ್ನ ವಿರುದ್ಧ ಏನೋ ಪಿತೂರಿ ಮಾಡುವಂತೆ ಕಾಣುತ್ತ ಇದೆ. ಕಾಡಿನಲ್ಲಿ ನಾನು ಇದನ್ನೆಲ್ಲ ಸಹಿಸಿಕೊಳ್ಳುವುದಿಲ್ಲ, ಶಿಸ್ತು ಕ್ರಮ ಕೈಗೊಳ್ಳಬೇಕಾಗುತ್ತದೆ’ ಎಂದು ಗರ್ಜಿಸಿತು. “ಅಯ್ಯೋ, ನಿನ್ನ ಶಿಸ್ತು ಕ್ರಮಕ್ಕೆ ಮಣ್ಣು ಹಾಕಲಿ. ಕಾಡಿಗೆ ಬಂದ ಅಪಾಯದ ಬಗೆಗೆ ನಿನಗಿನ್ನೂ ಗೊತ್ತಿಲ್ಲ. ಹೊಸ ಪ್ರಾಣಿಯ ಕೂಗು ಕೇಳಿದರೆ ನಿನ್ನ ಆಡಳಿತ ಅಂತ್ಯವಾಗಿ ಹೊಸ ರಾಜ ಪಟ್ಟವೇರುವ ಲಕ್ಷಣವೇ ಕಾಣಿಸುತ್ತಿದೆ’  ಎಂದು ಭಯಪಡಿಸಿತು ಆನೆ.

Advertisement

    ಆನೆಯ ಮಾತು ಕೇಳಿ ಸಿಂಹವೂ ತಲ್ಲಣಗೊಂಡಿತು. ನರಿ ಮತ್ತು ಆನೆಯ ಜೊತೆಗೂಡಿ ಅದರ ಪರೀಕ್ಷೆಗೆ ಬಂದಿತು. ನಗಾರಿಯ ಧ್ವನಿ ಕೇಳಿ ಅದಕ್ಕೂ ನಡುಕವುಂಟಾಯಿತು. “ನೀನು ಹೇಳಿದ ಸಂಗತಿ ಸತ್ಯ ಅನಿಸುತ್ತದೆ. ತುರ್ತು ಎಲ್ಲ ಪ್ರಾಣಿಗಳ ಸಭೆ ಕರೆದು ಈ ವಿಷಯವನ್ನು ಚರ್ಚಿಸಬೇಕು’ ಎಂದು ಸಿಂಹ ಮರಳಿ ಹೊರಟಿತು. ಕಾಡಿನ ಪ್ರಾಣಿಗಳು, ಪಕ್ಷಿಗಳು ಸಿಂಹದ ಆಣತಿಯಂತೆ ಅದರ ಗುಹೆಯಲ್ಲಿ ಒಂದುಗೂಡಿ ಸಭೆ ನಡೆಸಿದವು. ಕಾಡಿಗೆ ಬಂದಿರುವ ಹೊಸ ಪ್ರಾಣಿಯ ಧ್ವನಿ ಎಲ್ಲ ಪ್ರಾಣಿಗಳೂ ಕೇಳಿ ಭಯಗೊಂಡಿದ್ದವು. “ನಮ್ಮ ಮಕ್ಕಳು ಮರಿಗಳಿಗೆ ಏನು ಗತಿ? ಈ ಪ್ರಾಣಿ ಯಾರನ್ನೆಲ್ಲ ತಿನ್ನುತ್ತದೋ ಏನೆಲ್ಲ ಹಾವಳಿ ಮಾಡುತ್ತದೋ ಗೊತ್ತಿಲ್ಲ. ಮಹಾರಾಜರು ಸೂಕ್ತ ಮಾರ್ಗೋಪಾಯ ಕಂಡುಹಿಡಿಯಬೇಕು’ ಎಂದು ಸಿಂಹದ ಬಳಿ ಕೇಳಿಕೊಂಡವು.

    ಏನು ಮಾಡುವುದೆಂದು ಸಿಂಹಕ್ಕೂ ಗೊತ್ತಿರಲಿಲ್ಲ. “ಈ ಪ್ರಾಣಿಯಿಂದ ಪಾರಾಗುವ ದಾರಿ ತೋರಿಸಿದವರಿಗೆ ಅವರು ಕೇಳಿದುದನ್ನು ಕೊಡುತ್ತೇನೆ’ ಎಂದು ಘೋಷಿಸಿತು. ಆಗ ಮಂಗ ಹಲ್ಲು ಕಿಸಿಯಿತು. ಅದು ವಾಂಕೋ ನಗಾರಿಯನ್ನು ತಂದು ಹಾಸುಗಲ್ಲಿನ ಬಳಿ ಇರಿಸಿ ಹೋಗುವುದನ್ನು ನೋಡಿತ್ತು. ತಾನು ವಾಸವಿರುವ ಮರದ ಕೊಂಬೆ ತಗುಲಿ ನಗಾರಿಯಿಂದ ಧ್ವನಿ ಬರುವ ಗುಟ್ಟನ್ನೂ ತಿಳಿದಿತ್ತು. ಆದರೆ ಗುಟ್ಟನ್ನು ರಟ್ಟು ಮಾಡಲಿಲ್ಲ. “ಇದಕ್ಕೆ ಪರಿಹಾರ ಹುಡುಕಬಲ್ಲ ಒಬ್ಬ ಮನುಷ್ಯನನ್ನು ನಾನು ತಿಳಿದಿದ್ದೇನೆ. ಆದರೆ ಅವನಿಗೆ ಈ ಪ್ರಾಣಿಯನ್ನು ಕೊಲ್ಲುವುದಕ್ಕಾಗಿ ಒಂದು ಮೂಟೆ ತುಂಬ ಬಂಗಾರದ ನಾಣ್ಯಗಳನ್ನು ನೀಡಬೇಕು. ನಾನು ಈ ಕೆಲಸ ಮಾಡಿಸಿದ್ದಕ್ಕೆ ನನಗೆ ನೀವೆಲ್ಲ ಸೇರಿ ಒಂದು ಮನೆ ಕಟ್ಟಿಸಿ ಕೊಡಬೇಕು’ ಎಂದು ಹೇಳಿತು. ಮಂಗನ ಮಾತಿನಲ್ಲಿ ಪ್ರಾಣಿಗಳಿಗೆ ನಂಬಿಕೆ ಇತ್ತು. ಸಿಂಹ ಮತ್ತು ಹುಲಿಯ ಗವಿಯೊಳಗೆ ಅವು ಕೊಂದಿದ್ದ ಮನುಷ್ಯರ ಬಳಿಯಿದ್ದ ಚಿನ್ನದ ನಾಣ್ಯಗಳು ಸಾಕಷ್ಟಿದ್ದವು. ಅದನ್ನು ಮೂಟೆ ಕಟ್ಟಿ ತಂದು ಮಂಗನಿಗೆ ಒಪ್ಪಿ$ಸಿದವು.

    ಮಂಗ ನಾಣ್ಯಗಳ ಮೂಟೆ ಹೊತ್ತು ವಾಂಕೋನ ಮನೆಗೆ ಬಂದಿತು. “ನಿನ್ನ ನಗಾರಿಯನ್ನು ರಾತ್ರೆ ಬೆಳಗಾಗುವ ಮೊದಲು ತೆಗೆದುಕೊಂಡು ಹೋಗಿ ಒಡೆದು ಹಾಕು. ಮೂಟೆ ತುಂಬ ನಾಣ್ಯಗಳಿವೆ. ಇದನ್ನು ತೆಗೆದುಕೊಂಡು ಹೊಲಗಳನ್ನು ಖರೀದಿಸು. ಕೃಷಿ ಮಾಡಿ ಸುಖವಾಗಿ ಬದುಕು. ಮೊದಲಿನಂತೆ ಕೆಟ್ಟ ಹಾದಿ ತುಳಿಯಬೇಡ’ ಎಂದು ಬುದ್ಧಿ ಹೇಳಿತು. ತನಗೊಲಿದ ಭಾಗ್ಯ ನೋಡಿ ವಾಂಕೋ ಹಿರಿಹಿರಿ ಹಿಗ್ಗಿದ. ಕಾಡಿಗೆ ಹೋಗಿ ನಗಾರಿಯನ್ನು ನದಿಗೆ ಎಸೆದು ಬಂದ.

    ಮರುದಿನ ಜನರೆಲ್ಲ ವಾಂಕೋನ ಮನೆಗೆ ಬಂದರು. “ವಾಂಕೋ, ಆದದ್ದಾಯಿತು. ಮರಳಿ ನಗಾರಿ ಬಡಿಯುವ ಕೆಲಸಕ್ಕೆ ಬಾ’ ಎಂದು ಕರೆದರು. “ಇಲ್ಲ ಇಲ್ಲ. ನಿಮ್ಮ ಸೇವೆ ಮಾಡಿದರೆ ನೀವು ಕೊಡೋದು ಹುಳ ಬಿದ್ದ ಧಾನ್ಯ. ಆದರೆ ನನ್ನ ನಗಾರಿಯನ್ನು ಕಂಡು ಖುಷಿಯಾಗಿ ಆಕಾಶದಲ್ಲಿ ಹಾರುವ ದೇವಕನ್ಯೆ ನೆಲಕ್ಕಿಳಿದು ಬಂದು ಚೀಲ ತುಂಬ ಚಿನ್ನ ಕೊಟ್ಟು ನಗಾರಿಯನ್ನು ದೇವಲೋಕಕ್ಕೆ ತೆಗೆದುಕೊಂಡು ಹೋದಳು’ ಎಂದ ವಾಂಕೋ. ಮುಂದೆ ಕೃಷಿ ಮಾಡಿ ಸುಖದಿಂದ ಅವನು ಜೀವನ ನಡೆಸಿದ.

ಪ. ರಾಮಕೃಷ್ಣ ಶಾಸ್ತ್ರಿ

Advertisement

Udayavani is now on Telegram. Click here to join our channel and stay updated with the latest news.

Next