ಚೆನ್ನೈ/ ತಿರುವನಂತಪುರ: ಬಂಗಾಲ ಕೊಲ್ಲಿಯಲ್ಲಿನ ವಾಯುಭಾರ ಕುಸಿತದ ಪರಿಣಾಮ “ಬುರೇವಿ’ ಸೈಕ್ಲೋನ್ ಉದ್ಭವಿಸಿದ್ದು, ದಕ್ಷಿಣ ತಮಿಳುನಾಡು, ದಕ್ಷಿಣ ಕೇರಳ ಭಾಗಗಳಲ್ಲಿ ಬುಧವಾರ ರಾತ್ರಿಯಿಂದಲೇ ಮಳೆ ರಭಸದಿಂದ ಸುರಿಯಲಾರಂಭಿಸಿದೆ.
ಉತ್ತರ ಶ್ರೀಲಂಕಾ ಸಾಗರ ಭಾಗದಲ್ಲಿ ಗುರುವಾರ ಸಂಜೆ ವೇಳೆ ಗಂಟೆಗೆ 70-80 ಕಿ.ಮೀ. ವೇಗದಲ್ಲಿ ಬೀಸುತ್ತಿದ್ದ ಚಂಡಮಾರುತ ಮಧ್ಯರಾತ್ರಿ ವೇಳೆಗೆ ರಾಮೇಶ್ವರದ ಪಂಬನ್ ತೀರದತ್ತ ಮುನ್ನುಗ್ಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಸಿದೆ.
ಮುಖ್ಯವಾಗಿ ತಮಿಳುನಾಡಿನ ಕಾವೇರಿ ನದಿಪಾತ್ರದ ಕೊಡವಾಸಲ್, ನಾಗ ಪಟ್ಟಿಣಂ, ವೇದಾರಣ್ಯಂ, ಕರಾಯಿಕಲ್, ತಿರುತುರೈಪೂಂಡಿ, ಮದುಕುಲತೂರ್, ಪಂಬನ್, ಕನ್ಯಾಕುಮಾರಿ ಭಾಗಗಳಲ್ಲಿ ಮುಂದಿನ 24 ಗಂಟೆ ಭಾರೀ ಮಳೆ ಸುರಿಯುವ ಸಾಧ್ಯತೆ ಇದೆ. ದಕ್ಷಿಣ ಕೇರಳದ ಅಲಪ್ಪುಳದಲ್ಲೂ ಧಾರಾಕಾರ ಮಳೆಯಾಗಲಿದೆ. ಈ ಭಾಗಗಳಲ್ಲಿ ಗರಿಷ್ಠ 20 ಸೆಂ.ಮೀ. ಮಳೆ ಬೀಳುವ ಸಾಧ್ಯತೆ ಇದೆ ಎಂದು ಐಎಂಡಿ ಎಚ್ಚರಿಸಿದೆ.
ಶಾ ಅಭಯ: ಬರೇವಿಯಿಂದ ತಮಿಳು ನಾಡು, ಕೇರಳ ದಕ್ಷಿಣ ಭಾಗಗಳ ಜನತೆಯನ್ನು ರಕ್ಷಿಸಲು ಕೇಂದ್ರ ಸರಕಾರ ಸಕಲ ನೆರವು ನೀಡುವುದಾಗಿ ಗೃಹ ಸಚಿವ ಅಮಿತ್ ಶಾ ಉಭಯ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಭರವಸೆ ನೀಡಿದ್ದಾರೆ. ರಾಷ್ಟ್ರೀಯ ವಿಪತ್ತು ನಿರ್ವಹಣ ಪಡೆಯ 26 ತಂಡಗಳು ಈಗಾಗಲೇ ಕರಾವಳಿ ತೀರದಲ್ಲಿ ಬೀಡುಬಿಟ್ಟಿವೆ.
ಸೈಕ್ಲೋನ್ ಹೈಲೈಟ್ಸ್
– ಟ್ಯುಟಿಕೊರಿನ್- ಮೈಸೂರು ಸ್ಪೆಷಲ್ ರೈಲು (06235/ 36) ಸಂಚಾರ ರದ್ದು.
– ಪುದುಚೇರಿ ಭಾಗದ ಶಾಲೆಗಳಿಗೆ ಶುಕ್ರವಾರ ರಜೆ ಘೋಷಣೆ.
– ಪಂಬನ್‌ನಿಂದ 300 ಕುಟುಂಬಗಳನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಿದ ಜಿಲ್ಲಾಡಳಿತ.
– ಕೊಡೈಕನಾಲ್ ಗಿರಿಧಾಮ ದತ್ತ ಸಾಗುವ ವಾಹನಗಳಿಗೆ ನಿರ್ಬಂಧ.
– ದಕ್ಷಿಣ ಕೇರಳದಲ್ಲಿ ರೆಡ್ ಅಲರ್ಟ್ ಘೋಷಣೆ.
– ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಸೂಚನೆ.