ಒಡಿಶಾ : ಬಂಗಾಳ ಕೊಲ್ಲಿಯಲ್ಲಿ ಸೃಷ್ಟಿಯಾಗಿರುವ ವಾಯುಭಾರ ಕುಸಿತದ ಪರಿಣಾಮವಾಗಿ ‘ಡಾನಾ’ ಚಂಡಮಾರುತವು ಗುರುವಾರ ರಾತ್ರಿ (ಅ.24) ಹಾಗೂ ಶುಕ್ರವಾರ (ಅ.25) ಒಡಿಶಾದ ಪುರಿ ಹಾಗೂ ಪಶ್ಚಿಮ ಬಂಗಾಳದ ಸಾಗರ ದ್ವೀಪ ಪ್ರದೇಶಕ್ಕೆ ಚಂಡಮಾರುತ ಅಪ್ಪಳಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಹೇಳಿದೆ.
ಚಂಡಮಾರುತ ಅಪ್ಪಳಿಸುವ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಅಕ್ಟೋಬರ್ 24 ಹಾಗೂ 25 ರಂದು ಒಡಿಶಾದ ಪುರಿಯ ಜಗನ್ನಾಥ ದೇವಾಲಯ ಮತ್ತು ಕೋನಾರ್ಕ್‌ನಲ್ಲಿರುವ ಸೂರ್ಯ ದೇವಾಲಯವನ್ನು ಮುಚ್ಚಲಾಗಿದೆ ಎಂದು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಆದೇಶದಲ್ಲಿ ತಿಳಿಸಿದೆ.
‘ಡಾನಾ’ ಚಂಡಮಾರುತ ಪ್ರಭಾವದಿಂದ ಬಿರುಗಾಳಿ ಸಹಿತ ಭಾರಿ ಮಳೆ ಆಗಲಿದ್ದು ಮುಂದಿನ ಎರಡು ದಿನದಲ್ಲಿ ಚಂಡಮಾರುತದ ವೇಗವೂ ಗಂಟೆಗೆ 120 ಕಿ.ಮೀ. ಹೆಚ್ಚಲಿದೆ. ಈ ಹವಾಮಾನ ವೈಪರೀತ್ಯ ತೀವ್ರಗೊಂಡು ಅ.24 25 ರಂದು ಒಡಿಶಾ ಮತ್ತು ಪಶ್ಚಿಮ ಬಂಗಾಳ ಕರಾವಳಿಗೆ ಅಪ್ಪಳಿಸಲಿದೆ ಎನ್ನಲಾಗಿದೆ.
ಚಂಡಮಾರುತದ ಹಿನ್ನೆಲೆಯಲ್ಲಿ ಒಡಿಶಾ ಹಾಗೂ ಪಶ್ಚಿಮ ಬಂಗಾಳದ ಪ್ರವಾಸಿ ತಾಣಗಳನ್ನು ಮುಚ್ಚಲಾಗಿದೆ ಇದಲ್ಲದೆ, ಗಂಜಾಂ, ಪುರಿ, ಜಗತ್‌ಸಿಂಗ್‌ಪುರ, ಕೇಂದ್ರಪಾರಾ, ಭದ್ರಕ್, ಬಾಲಸೋರ್, ಮಯೂರ್‌ಭಂಜ್, ಕಿಯೋಂಜಾರ್, ಧೆಂಕನಲ್, ಜಾಜ್‌ಪುರ್, ಅಂಗುಲ್, ಖೋರ್ಧಾ, ನಯಾಗಢ ಮತ್ತು ಕಟಕ್ ಜಿಲ್ಲೆಗಳಲ್ಲಿನ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.
ಚಂಡಮಾರುತದ ಪರಿಣಾಮ ಆಗ್ನೇಯ ರೈಲ್ವೆ ವ್ಯಾಪ್ತಿಯಲ್ಲಿ ಸಂಚರಿಸುವ ಸುಮಾರು 150 ಕ್ಕೂ ಹೆಚ್ಚು ರೈಲುಗಳನ್ನು ರದ್ದುಗೊಳಿಸಲಾಗಿದೆ. ರದ್ದಾದ ರೈಲುಗಳಲ್ಲಿ ಹೌರಾ-ಸಿಕಂದರಾಬಾದ್ ಫಲಕ್ನುಮಾ ಎಕ್ಸ್‌ಪ್ರೆಸ್, ಕಾಮಾಖ್ಯ-ಯಶವಂತಪುರ ಎಸಿ ಎಕ್ಸ್‌ಪ್ರೆಸ್, ಹೌರಾ-ಪುರಿ ಶತಾಬ್ದಿ ಎಕ್ಸ್‌ಪ್ರೆಸ್, ಹೌರಾ-ಭುವನೇಶ್ವರ ಶತಾಬ್ದಿ ಎಕ್ಸ್‌ಪ್ರೆಸ್ ಮತ್ತು ಹೌರಾ-ಯಶವಂತಪುರ ಎಕ್ಸ್‌ಪ್ರೆಸ್ ಸೇರಿವೆ ಎಂದು ಪಿಟಿಐ ವರದಿ ಮಾಡಿದೆ.