ದೇವಸ್ಥಾನ ಜಾತ್ರೆ, ಪುಸ್ತಕ ಜಾತ್ರೆಗಳನ್ನು ಕೇಳಿರುತ್ತೀರಾ. ಆದರೆ ಡ್ಯಾನ್ಸ್ ಜಾತ್ರೆ ಕೇಳಿದ್ದೀರಾ? ಅಂಥದ್ದೊಂದು ಜಾತ್ರೆ ನಗರದಲ್ಲಿ ನಡೆಯುತ್ತಿದೆ. ನೃತ್ಯಕಲೆಗೇ ಮೀಸಲಾದ ಜಾತ್ರೆಯಿದು. ಕಲಾವಿದೆ ವೈಜಯಂತಿಕಾಶಿ ಅವರು “ಶಾಂಭವಿ ಸ್ಕೂಲ್ ಆಫ್ ಡ್ಯಾನ್ಸ್’ ಕಳೆದ 6 ವರ್ಷಗಳಿಂದ ಡ್ಯಾನ್ಸ್ ಜಾತ್ರೆಯನ್ನು ನಡೆಸಿಕೊಂಡು ಬರುತ್ತಿದ್ದಾರೆ.
ಈಗ ನಡೆಯುತ್ತಿರುವುದು 7ನೇ ಅವತರಣಿಕೆ. ಎರಡು ದಿನಗಳ ಕಾಲ ನಡೆಯುವ ಈ ನೃತ್ಯಜಾತ್ರೆಯಲ್ಲಿ ಪ್ರತಿದಿನ ಕಾರ್ಯಾಗಾರ, ಸ್ಪರ್ಧೆ ಮತ್ತು ನೃತ್ಯ ಪ್ರದರ್ಶನಗಳು ಇರುತ್ತವೆ. ಸಂಗೀತ ಮತ್ತು ನೃತ್ಯ ಕ್ಷೇತ್ರದಲ್ಲಿ ಹೆಸರು ಮಾಡಿರುವ ಶ್ರೀಮತಿ ಪದ್ಮಿನಿ ರಾವಿ, ರಾಧಾ ಶ್ರೀಧರ್,
ಶೋಭಾ ಶಶಿಕುಮಾರ್, ಶ್ರೀವಿದ್ಯಾ ಮುರಳೀಧರ್, ಚಾಂದಿನಿ ಸುಬ್ಬಯ್ಯ, ಸ್ನೇಹ ಕಪ್ಪಣ್ಣ, ರಾಗಿಣಿ ಚಂದ್ರನ್, ಡ್ರಮ್ಮರ್ ಅರುಣ್ ಕುಮಾರ್, ರತಿಕಾಂತ್ ಮೋಹಪಾತ್ರ, ಪ್ರವೀಣ್ ಕುಮಾರ್, ಕಾರ್ತಿಕ್ ತಂತ್ರಿ, ರಾಮ್‌ಕುಮಾರ್, ದೀಪಕ್ ಮಜುಮದಾರ್ ಮುಂತಾದವರು ಕಾರ್ಯಾಗಾರದಲ್ಲಿ ಉಪನ್ಯಾಸಕರಾಗಿ, ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.
ಶಾಸ್ತ್ರೀಯ ನೃತ್ಯ, ಕಲರಿಪಯಟ್ಟು, ಸಾಲ್ಸಾ, ಜಾನಪದ, ಹಿಪ್‌ಹಾಪ್ ಇನ್ನೂ ಅನೇಕ ನೃತ್ಯಪ್ರಕಾರಗಳನ್ನು ಕಲಾಪ್ರಿಯರು ಒಂದೇ ವೇದಿಕೆಯಲ್ಲಿ ನೋಡಿ ಆನಂದಿಸಬಹುದು. ಕಾರ್ಯಕ್ರಮದಲ್ಲಿ ವಸ್ತುಪ್ರದರ್ಶನ ಮತ್ತು ನಾಟ್ಯ ಕುರಿತ ಹಲವು ಬಗೆಯ ಮಳಿಗೆಗಳೂ ಇರಲಿವೆ. ಶಾಲೆ, ಕಾಲೇಜುಗಳ ತಂಡಗಳ ನಡುವೆ ಸ್ಪರ್ಧೆಯೂ ಆಯೋಜನೆಯಾಗಿರುವುದರಿಂದ ಜಿದ್ದಾಜಿದ್ದಿಯೂ ಏರ್ಪಡುವುದರಲ್ಲಿ ಸಂಶಯವಿಲ್ಲ.
ಎಲ್ಲಿ?: ಶಂಕರ ಫೌಂಡೇಶನ್, ಯೆಲಚೇನಹಳ್ಳಿ ಮೆಟ್ರೊ ಸ್ಟೇಷನ್ ಬಳಿ
ಯಾವಾಗ?: ಜನವರಿ 27, 28, ಬೆಳಗ್ಗೆ 10.30 ರಿಂದ ಶುರು
ಪ್ರವೇಶ: ಉಚಿತ