Advertisement

ಸೌಲಭ್ಯ ವಂಚಿತ ಬೋರಬಂಡ

12:30 PM Jan 18, 2019 | Team Udayavani |

ಗುರುಮಠಕಲ್‌: ಸಮೀಪದ ಕಾಕಲವಾರ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಬೋರಬಂಡ ಗ್ರಾಮ ಹಲವು ಸಮಸ್ಯೆಗಳ ಸುಳಿಯಲ್ಲಿ ಸಿಲುಕಿ ಮೂಲ ಸೌಕರ್ಯಗಳ ಕೊರತೆಯಿಂದ ಬಳಲುತ್ತಿದೆ.

Advertisement

ಗ್ರಾಮದ ಬಹುತೇಕ ಎಲ್ಲ ಭಾಗದ ಮನೆಗಳಲ್ಲಿ ಬಳಕೆ ಮಾಡಿದ ನೀರು ಹೋಗಲು ಸೂಕ್ತ ಚರಂಡಿಗಳಿಲ್ಲದೇ ಮನೆ ಅಂಗಳದಲ್ಲಿಯೇ ಕೊಳಚೆ ನೀರು ನಿಂತು ಕೆಸರು ಹೊಂಡಗಳಂತಾಗಿ ದುರ್ನಾತ ಬೀರುತ್ತಿದೆ. ಇದರಿಂದ ಸೊಳ್ಳೆಗಳು ಹೆಚ್ಚಾಗಿ ಸಾಂಕ್ರಾಮಿಕ ಕಾಯಿಲೆಗಳ ಭೀತಿ ಎದುರಾಗಿದೆ. ನರಕಯಾತನೆ ಅನುಭವಿಸುತ್ತಿರುವ ಗ್ರಾಮಸ್ಥರು ಜನಪ್ರತಿನಿಧಿಗಳಿಗೆ ಹಾಗೂ ಅಧಿಕಾರಿಗಳಿಗೆ ಹಿಡಿ ಶಾಪ ಹಾಕುತ್ತಿದ್ದಾರೆ.

ಹೈದ್ರಾಬಾದ್‌-ವಿಜಯಪುರ ರಾಜ್ಯ ಹೆದ್ದಾರಿ (ಎಸ್‌.ಹೆಚ್-16) ಈ ಗ್ರಾಮದಲ್ಲಿಯೇ ಹಾಯ್ದು ಹೋಗುತ್ತಿದ್ದು, ಯಾವುದೇ ಅಭಿವೃದ್ಧಿ ಕಂಡಿಲ್ಲ. ಹೀಗಾಗಿ ಗ್ರಾಮಸ್ಥರಿಗೆ ಶೌಚಾಲಯ ವ್ಯವಸ್ಥೆ ಇಲ್ಲದ ಕಾರಣ ರಸ್ತೆಯೇ ಇವರಿಗೆ ಶೌಚತಾಣವಾಗಿದೆ.

ಕೇಂದ್ರ ಹಾಗೂ ರಾಜ್ಯ ಸರ್ಕಾರ ಸ್ವಚ್ಛ ಭಾರತ ಹಾಗೂ ಉದ್ಯೋಗ ಖಾತರಿ ಸೇರಿದಂತೆ ಹಲವು ಯೋಜನೆಗಳಿಂದ ಬಯಲು ಶೌಚಮುಕ್ತ ಗ್ರಾಮಗಳ ನಿರ್ಮಾಣಕ್ಕಾಗಿ, ವೈಯಕ್ತಿಕ ಶೌಚಾಲಯಗಳ ನಿರ್ಮಾಣ ಸಾರ್ವಜನಿಕ ಶೌಚಾಲಯಗಳ ನಿರ್ಮಾಣಕ್ಕೆ ಅನುದಾನ ನೀಡುತ್ತಿದ್ದರೂ ಬೋರಬಂಡ ಗ್ರಾಮಕ್ಕೆ ಅವು ತಲುಪುತ್ತಿಲ್ಲ.

ಗ್ರಾಮದಲ್ಲಿನ ಬಹುತೇಕ ರಸ್ತೆಗಳು ಹದಗೆಟ್ಟಿವೆ. ಕೆಲವು ಕಡೆ ಚರಂಡಿಗಳೇ ಇಲ್ಲ. ಇನ್ನೂ ಕೆಲವಡೆ ತುಂಬಿದ ಚರಂಡಿಗಳನ್ನು ಸ್ವಚ್ಛಗೊಳಿಸಿಲ್ಲ. ಇದರಿಂದಾಗಿ ಚರಂಡಿ ನೀರು ರಸ್ತೆಗಳ ಮೇಲೆಯೇ ಹರಿದು ದುರ್ನಾತ ಬೀರುತ್ತಿದೆ. ಹೀಗಾಗಿ ಇಲ್ಲಿಯ ಜನರು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ಗ್ರಾಮದ ವಿಶ್ವನಾಥ, ಉಶಪ್ಪಾ ಅಳಲು ತೋಡಿಕೊಂಡರು.

Advertisement

ಸಮಸ್ಯೆ ನಿವಾರಣೆಗೆ ಶೀಘ್ರ ಕ್ರಮ
ಮುಖ್ಯಮಂತ್ರಿ ಗ್ರಾಮ ವಿಕಾಸ ಯೋಜನೆಯಡಿ ಬೋರಬಂಡಾ ಗ್ರಾಮ ಆಯ್ಕೆಯಾಗಿದೆ. 1 ಕೋಟಿ ರೂ. ಬಿಡುಗಡೆಯಾಗಿದ್ದು, ಅದರಲ್ಲಿ 19 ಲಕ್ಷ ರೂ. ಗಳನ್ನು ನಿರ್ಮಿತಿ ಕೇಂದ್ರಕ್ಕೆ ಕಾಮಗಾರಿಗಾಗಿ ನೀಡಲಾಗಿದೆ. ಶೀಘ್ರದಲ್ಲಿ ಕಾಮಗಾರಿ ಪ್ರಾರಂಭವಾಗಲಿದ್ದು, ಮುಂದಿನ ದಿನಗಳಲ್ಲಿ ಗ್ರಾಮದಲ್ಲಿ ಯಾವುದೇ ಸಮಸ್ಯೆಗಳು ಇರುವುದಿಲ್ಲ. ಕೆಲವು ಸಮಸ್ಯೆಗಳಿಗೆ ಕೂಡಲೇ ಪರಿಹಾರ ಒದಗಿಸಲಾಗುವುದು.
 ಅಮೃತ ಜಮಾದಾರ, ಅಭಿವೃದ್ಧಿ ಅಧಿಕಾರಿ, ಗ್ರಾಪಂ ಕಾಕಲವಾರ

Advertisement

Udayavani is now on Telegram. Click here to join our channel and stay updated with the latest news.

Next