ಹರಿಹರ: ಗ್ರಾಮ ವ್ಯಾಪ್ತಿಯ ಗೋಮಾಳದ ನಿವಾಸಿ ರೈತರು, ಮಹಿಳೆಯರ ಮೇಲೆ ಪೊಲೀಸರು ದೌರ್ಜನ್ಯವೆಸಗಿ, ಮನೆಗಳನ್ನು ಧ್ವಂಸಗೊಳಿಸಿದ ಹಿನ್ನೆಲೆಯಲ್ಲಿ ಪ್ರಸಕ್ತ ವಿಧಾನಸಭೆ ಚುನಾವಣೆ ಬಹಿಷ್ಕರಿಸುತ್ತಿರುವುದಾಗಿ ತಾಲೂಕಿನ ಬುಳ್ಳಾಪುರ ಗ್ರಾಮಸ್ಥರು ಬುಧವಾರ ಇಲ್ಲಿನ ಚುನಾವಣಾಧಿ ಕಾರಿ ಶಹಜಾದ್ ಅಹ್ಮದ್ ಮುಲ್ಲಾ ಅವರಿಗೆ ಪತ್ರವನ್ನು ಸಲ್ಲಿಸಿದರು.
ಈ ವೇಳೆ ಮಾತನಾಡಿದ ಮುಖಂಡರು, ಮಳೆಗಾಲದಲ್ಲಿ ಕೊಂಡಜ್ಜಿ ಕೆರೆ ನೀರಿನಿಂದ ಜೌಗು ಪ್ರದೇಶವಾಗುತ್ತಿದ್ದ ಗ್ರಾಮದ 11 ಎಕರೆ ಪ್ರದೇಶವನ್ನು ಆಗಿನ ಸಚಿವರಾಗಿದ್ದ ಕೊಂಡಜ್ಜಿ ಬಸಪ್ಪನವರು ಶಿಫ್ಟಿಂಗ್ ವಿಲೇಜ್ ಆಗಿ ಘೋಷಿಸಿದ್ದರು. ಆಗಲೇ ಅಲ್ಲಿಗೆ ಸ್ಥಳಾಂತರಗೊಂಡ ನಿವಾಸಿಗಳಿಗೆ ಹಕ್ಕುಪತ್ರ ಸಹ ನೀಡಲಾಗಿತ್ತು.
ನಂತರದಲ್ಲಿ ಹಲವು ನಿರ್ವಸತಿಕರು ಮನೆ ನಿರ್ಮಿಸಿಕೊಂಡು ಅಕ್ರಮ, ಸಕ್ರಮದಲ್ಲಿ ಹಕ್ಕುಪತ್ರಕ್ಕಾಗಿ ಕಾಯುತ್ತಿದ್ದರು. ಆದರೆ ರಾಜಕೀಯ ದುರುದ್ದೇಶದಿಂದ ಯಾವುದೇ ನೊಟೀಸು, ಮಾಹಿತಿ ನೀಡದೆ ಏಕಾಏಕಿ ಕಳೆದ ಫೆ. 6ರಂದು ತಾಲೂಕು ಆಡಳಿತದಿಂದ ಕಂದಾಯ ಅಧಿಕಾರಿಗಳು ಪೂರ್ಣ ನಿರ್ಮಾಣಗೊಂಡಿದ್ದ 49, ನಿರ್ಮಾಣ ಹಂತದಲ್ಲಿದ್ದ 35 ಮನೆಗಳನ್ನು ಧ್ವಂಸಗೊಳಿಸಿದರು.
ಈ ವೇಳೆ ಪ್ರಶ್ನೆ ಮಾಡಿದ ಗ್ರಾಮಸ್ಥರನ್ನು ಮಹಿಳೆಯರು, ಮಕ್ಕಳೆನ್ನದೆ ಅಮಾನವೀಯವಾಗಿ ಥಳಿಸಲಾಯಿತು. ಈ ಕುರಿತು ಯಾವುದೇ ರಾಜಕೀಯ ಪಕ್ಷದವರು, ಜನಪ್ರತಿನಿಧಿಗಳು ಸ್ಥಳಕ್ಕೆ ಧಾವಿಸಿ ಸಾಂತ್ವನ ಹೇಳಲಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಂಬಿಕೆ ಇದ್ದರೂ ರಾಜಕಾರಣಿಗಳ ಜನ ವಿರೋಧಿ ನಿಲುವಿನಿಂದ ಬೇಸತ್ತು ಗ್ರಾಮಸ್ಥರೆಲ್ಲ ಸೇರಿ ಚುನಾವಣೆ ಬಹಿಷ್ಕಾರದ ನಿರ್ಧಾರ ಕೈಗೊಂಡಿದ್ದೇವೆ ಎಂದು ಹೇಳಿದರು.
ಹನುಮಂತ ಹರಿಹರ, ಮಲ್ಲಿಕಾರ್ಜುನ್, ಬಸವರಾಜ್ ಕರೂರು, ಶಿವಶಂಕರ್ ಎಂ.ಬಿ., ಗ್ರಾಪಂ ಸದಸ್ಯ ಪ್ರಕಾಶ್ ಗೌಡ್ರು, ಆನಂದಪ್ಪ ಬಿ.ಟಿ., ನಾಗರಾಜ್ ಬಿ.ಜಿ., ಡಿ.ಬಿ. ಚನ್ನಬಸಪ್ಪ, ವೃಷಭೇಂದ್ರ ಆರ್.ಕೆ., ಸಿದ್ದೇಶ್ ಹೊರಕೇರಿ ಇತರರಿದ್ದರು.