Advertisement

ಕಟ್ಟಿದ್ದು ಪ್ರೇಕ್ಷಕನಿಗೆ; ಬಚ್ಚಿಟ್ಟಿದ್ದು ಪಾತ್ರಗಳಿಗೆ

10:57 AM Jun 16, 2018 | |

ಹಾಗಾದರೆ ಮನೆಗೆ ನುಗ್ಗಿದ್ದು ಯಾರು? ಒಬ್ಬ ಕಳ್ಳ ಎನ್ನುತ್ತಾನೆ, ಇನ್ನೊಬ್ಬ ದೆವ್ವ ಅಂತ ಆಣೆ ಮಾಡಿ ಹೇಳುತ್ತಾನೆ, ಮಗದೊಬ್ಬ ಆನೆ ಎಂದು ಭಾವಿಸುತ್ತಾನೆ … ಈ ಮೂರರಲ್ಲಿ ಯಾರು ನಿಜ ಹೇಳುತ್ತಿದ್ದಾರೆ, ಯಾರು ಸುಳ್ಳು ಹೇಳುತ್ತಿದ್ದಾರೆ, ಯಾರು ಕಥೆ ಕಟ್ಟುತ್ತಿದ್ದಾರೆ ಎಂಬುದು ಆ ಕ್ಷಣಕ್ಕೆ ಆ ಪೊಲೀಸ್‌ ಅಧಿಕಾರಿಗೆ ಗೊತ್ತಾಗುವುದಿಲ್ಲ. ಪ್ರೇಕ್ಷಕರು ಏನು ತೆರೆಯ ಮೇಲೆ ನೋಡುತ್ತಾರೋ, ಅದನ್ನೇ ಪಾತ್ರಗಳ ಬಾಯಿಂದ ಕೇಳಿರುತ್ತಾನೆ.

Advertisement

ಹಾಗಾಗಿ ಅವನಿಗೂ ಪ್ರೇಕ್ಷಕರಷ್ಟೇ ಗೊಂದಲ. ಹಾಗಂತ ಸುಮ್ಮನಿರುವ ಹಾಗಿಲ್ಲ. ಏಕೆಂದರೆ, ಅಷ್ಟರಲ್ಲಾಗಲೇ ಎರಡು ಕೊಲೆಗಳಾಗಿರುತ್ತವೆ. ಅದಕ್ಕೂ ಆರು ತಿಂಗಳ ಮುನ್ನ ಇನ್ನೂ ಒಂದು ಕೊಲೆಯಾಗಿರುತ್ತದೆ. ಈ ಮೂರು ಕೊಲೆಗಳಿಗೂ, ಆ ಮನೆಯಲ್ಲಿರುವ ಜನರಿಗೂ ಏನೋ ಸಂಬಂಧವಿರಬಹುದು ಎಂದು ಎಲ್ಲರನ್ನೂ ಕರೆಸಿ ತನಿಖೆ ನಡೆಸುತ್ತಾನೆ. ತನಿಖೆ ಮುಂದುವರೆಯುತ್ತಿದ್ದಂತೆ ಅದು ಎಲ್ಲಿಂದ ಎಲ್ಲಿಗೋ ಹೋಗಿ, ಇನ್ನೆಲ್ಲೋ ತಲುಪುತ್ತದೆ. ಹಾಗಾದರೆ, ಈ ಮೂರು ಕೊಲೆಗಳ ರಹಸ್ಯವೇನು?

“ಕಟ್ಟುಕಥೆ’ ಒಂದು ಒಳ್ಳೆಯ ಮರ್ಡರ್‌ ಮಿಸ್ಟ್ರಿ. ಇಲ್ಲೊಂದು ವಿಭಿನ್ನ ಪ್ರಯೋಗ ಮಾಡಿದ್ದಾರೆ ರಾಜ್‌ ಪ್ರವೀಣ್‌. ಸಾಮಾನ್ಯವಾಗಿ ಒಂದು ಮರ್ಡರ್‌ ಮಿಸ್ಟ್ರಿ ಚಿತ್ರದಲ್ಲಿ, ಕೊನೆಗೆ ಕೊಲೆಗಳ ರಹಸ್ಯ ಬಯಲಾಗುತ್ತದೆ. ಏಕಕಾಲಕ್ಕೆ ಚಿತ್ರದಲ್ಲಿನ ಪಾತ್ರಗಳಿಗೆ ಮತ್ತು ಪ್ರೇಕ್ಷಕರಿಗೆ ಸತ್ಯದ ಅರಿವು ಗೊತ್ತಾಗುತ್ತದೆ. ಆದರೆ, ಇಲ್ಲಿ ಆ ರಹಸ್ಯ ಪ್ರೇಕ್ಷಕರಿಗೆ ಮಾತ್ರ ತಿಳಿಯುತ್ತದೆಯೇ ಹೊರತು, ಪಾತ್ರಗಳಿಗೆ ಗೊತ್ತೇ ಆಗುವುದಿಲ್ಲ. ಪೊಲೀಸ್‌ ಆಧಿಕಾರಿ ಬೆಂಬಿಡದೆ ಎಲ್ಲರಿಂದ ಮಾಹಿತಿ ಪಡೆದು, ತನಿಖೆ ನಡೆಸುತ್ತಾನೆ.

ಆದರೆ, ಕೊನೆಗೆ ಅಲ್ಲೇನಾಯಿತು ಎಂಬುದು ಅವನಿಗೇ ಸ್ಪಷ್ಟವಾಗುವುದಿಲ್ಲ. ಎಲ್ಲವನ್ನೂ ದಾಟಿ ಇನ್ನೇನು ರಹಸ್ಯ ಬಯಲಾಗಬೇಕು ಎನ್ನುವಷ್ಟರಲ್ಲಿ ಇನ್ನೇನೋ ಆಗುತ್ತದೆ. ಹಾಗಾಗಿ ಅಷ್ಟೆಲ್ಲಾ ಆಗುಹೋಗುಗಳ ನಂತರ, ಆ ಪಾತ್ರಗಳಿಗೆ ಅದೊಂದು ಕಟ್ಟುಕಥೆಯಾಗಿಯೇ ಉಳಿಯುತ್ತದೇ ಹೊರತು, ನಿಜ ಏನು ಎಂಬುದು ಗೊತ್ತಾಗುವುದೇ ಇಲ್ಲ. ಪ್ರೇಕ್ಷಕನಿಗೆ ಮಾತ್ರ ಇನ್ನೊಂದು ರೀತಿಯಲ್ಲಿ ಇಡೀ ರಹಸ್ಯ ಗೊತ್ತಾಗುತ್ತದೆ. ಆ ನಿಟ್ಟಿನಲ್ಲಿ ಇದೊಂದು ವಿಭಿನ್ನ ಪ್ರಯತ್ನ.

ಆದರೆ, ಇಂಥದ್ದೊಂದು ಸಾಹಸ ಮಾಡುವಾಗ ಇನ್ನಷ್ಟು ಚುರುಕುತನದ ಅವಶ್ಯಕತೆ ಇತ್ತು. ನಿಜ ಹೇಳಬೇಕೆಂದರೆ, ಚಿತ್ರದ ಮೊದಲಾರ್ಧ ಏನೂ ಆಗುವುದೇ ಇಲ್ಲ. ಅದೊಂದು ಫಾರ್ಮ್ ಹೌಸ್‌ಗೆ ಕೆಲವರು ಬೇರೆಬೇರೆ ಕಾರಣಗಳಿಗೆಂದು ಹೋಗುತ್ತಾರೆ. ಅಲ್ಲಿ ಒಂದಿಷ್ಟು ಪಾತ್ರಗಳು ಚಿತ್ರವಿಚಿತ್ರವಾಗಿ ವರ್ತಿಸಿ ಪ್ರೇಕ್ಷಕರನ್ನು ಕಾಡುವುದು ಬಿಟ್ಟರೆ, ಏನೂ ಆಗುವುದಿಲ್ಲ.

Advertisement

ದ್ವಿತೀಯಾರ್ಧದಲ್ಲಿ ಎರಡನೆಯ ಕೊಲೆಯಾಗಿ, ತನಿಖೆ ಶುರುವಾದ ನಂತರ ಚಿತ್ರ ಸ್ವಲ್ಪ ಗಂಭೀರವಾಗುತ್ತದೆ. ಅದರಲ್ಲೂ ಕೊನೆಯ 20 ನಿಮಿಷವು ಪ್ರೇಕ್ಷಕರನ್ನು ಸೀಟಿನಂಚಿಗೆ ತಂದು ಕೂರಿಸುತ್ತದೆ. ಆದರೆ, ಅದಕ್ಕೆ ಒಂದಿಷ್ಟು ತಾಳ್ಮೆ ಬೇಕು. ಮೊದಲಾರ್ಧದ ಎಳೆದಾಟ, ಬೇಡದ ಕಾಮಿಡಿಯನ್ನು ಹೊಟ್ಟಗೆ ಹಾಕಿಕೊಳ್ಳಬೇಕು. ಎಲ್ಲವನ್ನೂ ಸಹಿಸಿಕೊಳ್ಳುವ ಶಕ್ತಿ ಇದ್ದರೆ, ಚಿತ್ರ ಅದ್ಭುತವಲ್ಲದಿದ್ದರೂ, ವಿಭಿನ್ನ ಎಂದನಿಸುವುದು ಹೌದು.

ಇಲ್ಲಿ ಅಸಂಖ್ಯಾತ ಪಾತ್ರಗಳಿವೆ. ಅಷ್ಟು ಜನರ ಪೈಕಿ ಗಮನಸೆಳೆಯುವುದು ರಾಜೇಶ್‌. ಪೊಲೀಸ್‌ ಅಧಿಕಾರಿಯಾಗಿ ಕಾಣಿಸಿಕೊಂಡಿರುವ ಅವರಿಗೆ, ಈ ಪಾತ್ರ ನೀರು ಕುಡಿದಷ್ಟೇ ಸಲೀಸಾಗಿದೆ. ಮಿಕ್ಕಂತೆ ಕಿವುಡನಾಗಿ ಸೂರ್ಯ ಅಲ್ಲಲ್ಲಿ ನಗಿಸುವ ಪ್ರಯತ್ನ ಮಾಡುತ್ತಾರೆ. ಮಿತ್ರ, ಕೆಂಪೇಗೌಡ, ಸ್ವಾತಿ ಕೊಂಡೆ, ಮೋಹನ್‌ ಜುನೇಜ ಅಲ್ಲಲ್ಲಿ ಗಮನಸೆಳೆಯುತ್ತಾರೆ. ವಿಕ್ರಮ್‌ ಸುಬ್ರಹ್ಮಣ್ಯ ಅವರ ಸಂಗೀತ, ಮನು ಬಿ.ಕೆ ಅವರ ಛಾಯಾಗ್ರಹಣದಲ್ಲಿ ವಿಶೇಷವನ್ನುವಂತದ್ದು ಏನೂ ಇಲ್ಲ.

ಚಿತ್ರ: ಕಟ್ಟುಕಥೆ
ನಿರ್ಮಾಣ: ಸ್ವೀಟ್ಸ್‌ ಮಹದೇವ
ನಿರ್ದೇಶನ: ರಾಜ್‌ ಪ್ರವೀಣ್‌
ತಾರಾಗಣ: ರಾಜೇಶ್‌ ನಟರಂಗ, ಸೂರ್ಯ, ಸ್ವಾತಿ ಕೊಂಡೆ, ಮಿತ್ರ, ಕೆಂಪೇಗೌಡ, ಮೋಹನ್‌ ಜುನೇಜ, ಬೃನಾಲಿ ಗೌಡ ಮುಂತಾದವರು

* ಚೇತನ್‌ ನಾಡಿಗೇರ್‌

Advertisement

Udayavani is now on Telegram. Click here to join our channel and stay updated with the latest news.

Next