Advertisement
ಮಂಡ್ಯ: ಮುಂದಿನ ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರ ಮಂಡಿಸಿರುವ ಬಜೆಟ್‌ನಲ್ಲಿ ಎಲ್ಲ ವರ್ಗದ ಜನರಿಗೂ ಬಂಪರ್ ಗಿಫ್ಟ್ ನೀಡಿದೆಯಾದರರೂ, ಕೃಷಿ ಪ್ರಧಾನ ದೇಶವನ್ನು ಕೃಷಿ ಆಧಾರಿತವಾಗಿ ಯಾವ ರೀತಿ ಮುನ್ನಡೆಸುತ್ತೇವೆ ಎಂಬ ಪರಿಕಲ್ಪನೆಗಳನ್ನು ಜನರ ಮುಂದಿಡುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ. ರೈತರು, ಜನರನ್ನು ಸೆಳೆಯುವ ದೃಷ್ಟಿಕೋನದಿಂದ ರೂಪಿತಗೊಂಡ ಆಕರ್ಷಣೀಯ ಬಜೆಟ್ ಇದಾಗಿದೆ.
Related Articles
Advertisement
ರೈತರ ಕಲ್ಯಾಣ ಮತ್ತು ಅವರ ಆದಾಯ ದ್ವಿಗುಣ ಮಾಡುವ ಉದ್ದೇಶದಿಂದ ಬೆಳೆಗಳಿಗೆ 1.5ರಷ್ಟು ಹೆಚ್ಚಿನ ಕನಿಷ್ಠ ಬೆಂಬಲ ಬೆಲೆ ಘೋಷಣೆ ಮಾಡಿದೆ. ನೈಸರ್ಗಿಕ ವಿಕೋಪಕ್ಕೆ ಒಳಗಾದ ರೈತ ವರ್ಗಕ್ಕೆ ಶೇ. 2ರಷ್ಟು ಬಡ್ಡಿ ರಿಯಾಯಿತಿ ನೀಡಲಾಗುವುದು. ಸಾಲ ಮರುಪಾವತಿ ಮಾಡಿದ ರೈತರಿಗೆ ಶೇ. 3ರಷ್ಟು ಬಡ್ಡಿ ವಿನಾಯಿತಿ ಕಲ್ಪಿಸಿ ಸಂತೈಸಲು ಮುಂದಾಗಿದೆ.
ರೈತರ ಅಸಮಾಧಾನ: ಇದೇ ಸಮಯದಲ್ಲಿ ಕೃಷಿಯಲ್ಲಿ ವೈಜ್ಞಾನಿಕ ವಿಧಾನಗಳನ್ನು ಜಾರಿಗೊಳಿಸುವ, ಆಹಾರ ಉತ್ಪಾದನೆಯನ್ನು ಹೆಚ್ಚಿಸುವ, ಕೃಷಿ ಕ್ಷೇತ್ರಕ್ಕೆ ಹೊಸ ರೂಪ ನೀಡುವ ನಿಟ್ಟಿನಲ್ಲಿ ವಿಶೇಷವಾದ ಕೊಡುಗೆಗಳು ಬಜೆಟ್‌ನಲ್ಲಿ ಕಾಣುತ್ತಿಲ್ಲ. ಕೃಷಿಯಲ್ಲಿ ಉದ್ಯೋಗ ಸೃಷ್ಟಿಸುವ ನಿಟ್ಟಿನಲ್ಲೂ ಕೇಂದ್ರ ಸರ್ಕಾರ ಯೋಜನೆ ರೂಪಿಸದೆ ಆ ಕ್ಷೇತ್ರವನ್ನು ಅಭಿವೃದ್ಧಿಯಿಂದ ದೂರವೇ ಇಟ್ಟಿರುವುದು ರೈತರ ಅಸಮಾಧಾನಕ್ಕೆ ಕಾರಣವಾಗಿದೆ.
ಬೆಳೆಗಳ ಉತ್ಪಾದನಾ ವೆಚ್ಚವನ್ನು ಗಮನದಲ್ಲಿಟ್ಟುಕೊಂಡು ಬೆಳೆಗಳಿಗೆ ಬೆಂಬಲ ಬೆಲೆ ನಿಗದಿಪಡಿಸಬೇಕು ಎಂಬ ದೃಷ್ಟಿಯಿಂದ ಡಾ.ಸ್ವಾಮಿನಾಥನ್ ವರದಿ ಜಾರಿಗೆ ಪ್ರಾಮುಖ್ಯತೆ ನೀಡಿಲ್ಲ. ಕಬ್ಬು ಜಿಲ್ಲೆಯ ಪ್ರಮುಖ ಬೆಳೆಯಾಗಿದ್ದರೂ ಅದಕ್ಕೆ ಸಂಬಂಧಿಸಿದಂತೆ ಅಧ್ಯಯನ ಕೇಂದ್ರದ ಸ್ಥಾಪನೆಗೆ ಒಲವು ತೋರಲಿಲ್ಲ. ಕಬ್ಬಿನ ಉತ್ಪನ್ನಗಳು ಹೆಚ್ಚು ಬಳಕೆಯಾಗುವುದರೊಂದಿಗೆ ರೈತರಿಗೆ ಹೆಚ್ಚಿನ ಆದಾಯ ಸೃಷ್ಟಿಸಿಕೊಡುವ ಪ್ರಯತ್ನಗಳನ್ನಾಗಲೀ, ಮೊಲಾಸಸ್ ಬಳಕೆ ಬಗ್ಗೆ ತಿಳಿವಳಿಕೆ ಹಾಗೂ ಅದಕ್ಕೆ ಪೂರಕವಾಗುವ ಉದ್ಯಮಗಳನ್ನು ತೆರೆಯುವುದಕ್ಕೂ ಮನಸ್ಸು ಕೊಟ್ಟಿಲ್ಲ.
ತೆರಿಗೆ ಹೊರೆ ಇಳಿದ ಸಮಾಧಾನ: ಆದಾಯ ತೆರಿಗೆ ಮಿತಿಯನ್ನು 5 ಲಕ್ಷ ರೂ.ವರೆಗೆ ಹೆಚ್ಚಿಸಿ ಮಧ್ಯಮ ವರ್ಗದ ಜನರಿಗೆ ನೇರ ಅನುಕೂಲ ಕಲ್ಪಿಸಿದೆ. ಈ ಮೂಲಕ ಮಧ್ಯಮ ವರ್ಗದವರ ಮನಗೆಲ್ಲುವ ಆಲೋಚನೆ ಇದೆ. ಪ್ರತಿ ವರ್ಷ ತೆರಿಗೆ ಮಿತಿ 50 ಸಾವಿರ ರೂ.ವರೆಗೆ ಮಾತ್ರ ಏರಿಕೆಯಾಗುತ್ತಿತ್ತು. ಈ ಸಾಲಿನಲ್ಲಿ ಅದು ಏಕಾಏಕಿ 2.50 ಲಕ್ಷ ರೂ.ವರೆಗೆ ಏರಿಕೆಯಾಗಿದ್ದು, ಮಧ್ಯಮ ವರ್ಗದ ಜನರಿಗೆ ಖುಷಿ ನೀಡಿದೆ. ತೆರಿಗೆ ಹೊರೆ ಇಳಿಯಿತೆಂಬ ಸಂತಸ ಅವರಲ್ಲಿದೆ.
ಪಿಎಂ ಪಿಂಚಣಿ: ಅಸಂಘಟಿತ ವಲಯದ ಕಾರ್ಮಿಕರನ್ನು ಆಕರ್ಷಿಸುವ ಸಲುವಾಗಿ ಸುಮಾರು 10 ಕೋಟಿ ಕಾರ್ಮಿಕರಿಗೆ ಪಿಎಂ ಪಿಂಚಣಿ ಯೋಜನೆ ಜಾರಿಗೊಳಿಸಿದೆ. ಅಸಂಘಟಿತ ವಲಯದಲ್ಲಿ 60 ವರ್ಷ ದಾಟಿದ ಕಾರ್ಮಿಕರಿಗೆ ಪ್ರತಿ ತಿಂಗಳು 3 ಸಾವಿರ ರೂ. ಪಿಂಚಣಿ ಸೌಲಭ್ಯ ಸಿಗಲಿದೆ. ಇದಕ್ಕೆ ಪ್ರತಿ ತಿಂಗಳು 100 ರೂ.ಗಳನ್ನು ಕಾರ್ಮಿಕರು ಪಾವತಿ ಮಾಡಬೇಕು. ಇದಲ್ಲದೆ, ಅಂಗನವಾಡಿ ಕಾರ್ಯಕರ್ತೆಯರ ವೇತನ ಹೆಚ್ಚಳ ಮಾಡಿ ಅವರಿಗೂ ಖುಷಿಪಡಿಸಿದ್ದಾರೆ.
ಮುಂದಿನ ಚುನಾವಣೆಯನ್ನು ಗೆಲ್ಲಲೇಬೇಕೆಂಬ ಗೇಮ್ ಪ್ಲಾನ್‌ನೊಂದಿಗೆ ಬಜೆಟ್ ಮಂಡಿಸಲಾಗಿದೆ. ಈ ಬಜೆಟ್ ಚುನಾವಣೆಯ ಮೇಲೆ ಯಾವ ರೀತಿ ಪ್ರಭಾವ ಬೀರಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.
* ಮಂಡ್ಯ ಮಂಜುನಾಥ್