ಹೊಸದಿಲ್ಲಿ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಗಳವಾರ ಮಂಡಿಸಿದ ಬಜೆಟ್ ದೇಶದ ಅಭಿವೃದ್ಧಿಗೆ ಹೊಸ ದಾರಿ ತೋರಲಿದೆ ಎಂದು ಪ್ರಧಾನಿ ಮೋದಿ ಹೇಳಿಕೆ ನೀಡಿದ್ದಾರೆ.
ಬಜೆಟ್ ಬಳಿಕ ಮಾತನಾಡಿದ ಪ್ರಧಾನಿ ಮೋದಿ ‘ ಬಜೆಟ್ ಯುವ ಜನಾಂಗ, ಮಧ್ಯಮವರ್ಗ , ಮಹಿಳೆಯರು, ಮೂಲಭೂತ ಸೌಕರ್ಯ, ಉತ್ಪಾದಕ ವಲಯದ ಮೇಲೆ ಆಳವಾದ ಗುರಿ ಹೊಂದಿದೆ’ ಎಂದು ಹೇಳಿದರು.
ಉದ್ಯೋಗಕ್ಕೆ ಸಂಬಂಧಿಸಿದ ಯೋಜನೆಗಳು ಕೋಟ್ಯಂತರ ಉದ್ಯೋಗಗಳನ್ನು ಸೃಷ್ಟಿಸಲಿವೆ. ದೂರ ದೃಷ್ಟಿಯುಳ್ಳ ಬಜೆಟ್ ಸಮಾಜದ ಪ್ರತಿಯೊಬ್ಬರ ಉಜ್ವಲ ಭವಿಷ್ಯಕ್ಕೆ ನೆರವಾಗಲಿದೆ ಎಂದರು.
ಮಧ್ಯಮ ವರ್ಗದವರನ್ನು ಇನ್ನಷ್ಟು ಪ್ರಬಲರನ್ನಾಗಿಸಿ ಶಿಕ್ಷಣ ಮತ್ತು ಕೌಶಲ್ಯಾಭಿವೃದ್ಧಿಗೆ ಪೂರಕವಾಗಲಿದೆ. ದಲಿತರು, ಹಿಂದುಳಿದ ವರ್ಗ ಮತ್ತು ಬುಡಕಟ್ಟು ಸಮಾಜದ ಏಳಿಗೆಗೆ ಬಲವಾದ ಯೋಜನೆಗಳನ್ನೂ ಹೊಂದಿದೆ ಎಂದರು.
MSMES ಮತ್ತು ಸಣ್ಣ ವ್ಯಾಪಾರಿಗಳಿಗೆ ಹೊಸ ದಾರಿಯನ್ನು ತೋರಿಸಲಿದೆ. ಕಳೆದ 10 ವರ್ಷಗಳಲ್ಲಿ ಸುಮಾರು 25 ಕೋಟಿ ಜನರು ಬಡತನದಿಂದ ಹೊರ ಬಂದಿದ್ದಾರೆ ಎಂದರು.