Advertisement

ರಾಜ್ಯಸಭೆ: ಬಜೆಟ್‌ನಲ್ಲಿ ಕೃಷಿಗೆ ಕಡಿಮೆ ಅನುದಾನದಿಂದ ನಿರಾಸೆ: ಎಚ್‌.ಡಿ.ದೇವೇಗೌಡ 

09:10 PM Feb 07, 2022 | Team Udayavani |

ನವದೆಹಲಿ: ಕೃಷಿ ಕ್ಷೇತ್ರಕ್ಕೆ ಕೇಂದ್ರ ಬಜೆಟ್‌ನಲ್ಲಿ ಮೀಸಲಾಗಿಟ್ಟಿರುವ ಮೊತ್ತ ಕಡಿಮೆಯಾಗಿದ್ದು, ಇದರಿಂದ ಹಲವರಿಗೆ ನಿರಾಸೆಯಾಗಿದೆ ಎಂದು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಕಳವಳ ವ್ಯಕ್ತಪಡಿಸಿದ್ದಾರೆ.

Advertisement

ಸೋಮವಾರ ರಾಜ್ಯಸಭೆಯಲ್ಲಿ ಮಾತನಾಡಿದ ಅವರು, 2022ರ ಒಳಗಾಗಿ ರೈತರ ಆದಾಯ ದ್ವಿಗುಣವಾಗಬೇಕೆಂಬ ಕೇಂದ್ರ ಸರ್ಕಾರದ ಆಶಯ 2022-23ನೇ ಸಾಲಿನ ಬಜೆಟ್‌ನಲ್ಲಿ ಉಲ್ಲೇಖವೇ ಆಗಿಲ್ಲ ಎಂದು ಬೊಟ್ಟು ಮಾಡಿ ತೋರಿಸಿದ್ದಾರೆ.

ಬಜೆಟ್‌ನಲ್ಲಿ ಕೃಷಿ ಕ್ಷೇತ್ರಕ್ಕೆ ಮೀಸಲಾಗಿ ಇರಿಸಲಾಗಿರುವ ಮೊತ್ತ ಶೇ.3.8 ಕಡಿಮೆಯಾಗಿದೆ. ಜತೆಗೆ ಕೃಷಿ ಕ್ಷೇತ್ರದ ಉತ್ಪನ್ನಗಳಿಗೆ ಜಿಎಸ್‌ಟಿ ವಿಧಿಸುವುದನ್ನು ಇದುವರೆಗೆ ಕೇಳಿರಲಿಲ್ಲ. ಹೀಗಾಗಿ, ಅದನ್ನು ಕೂಡಲೇ ಕೈಬಿಡಬೇಕೆಂದು ಒತ್ತಾಯಿಸಿದ್ದಾರೆ. ಆಹಾರ ಮತ್ತು ತೈಲೋತ್ಪನ್ನಗಳಿಗೆ ನೀಡಬೇಕಾಗಿರುವ ಸಹಾಯಧನದ ಪ್ರಮಾಣವನ್ನು ಕಡಿಮೆಗೊಳಿಸಿದ್ದು ಸರಿಯಲ್ಲ. ಇದರಿಂದಾಗಿ ಜನರ ಜೀವನದ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ ಎಂದು ದೇವೇಗೌಡರು ಆತಂಕ ವ್ಯಕ್ತಪಡಿಸಿದ್ದಾರೆ.

ದೇಶದಲ್ಲಿ ಜನಸಂಖ್ಯೆ ಹೆಚ್ಚುತ್ತಿರುವುದರಿಂದ ಅವರಿಗೆ ಅನುಕೂಲವಾಗುವಂತೆ ಸಹಜ ಮತ್ತು ಸಾವಯವ ಕೃಷಿಗೆ ಒತ್ತು ನೀಡಿ, ಆಹಾರ ವಸ್ತುಗಳನ್ನು ಹೆಚ್ಚಿನ ರೀತಿಯಲ್ಲಿ ಉತ್ಪಾದನೆ ಮಾಡುವುದರ ಬಗ್ಗೆ ಸಮಗ್ರ ಚರ್ಚೆಗಳು ನಡೆಯಬೇಕಾಗಿದೆ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next