ಹೊಸದಿಲ್ಲಿ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕಾಂಗ್ರೆಸ್ ಪ್ರಣಾಳಿಕೆಯನ್ನು ಬಜೆಟ್ ನಲ್ಲಿ ಓದಿರುವುದು ಸಂತಸ ತಂದಿದೆ ಎಂದು ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ವ್ಯಂಗ್ಯವಾಡಿದ್ದಾರೆ.
ಬಜೆಟ್ ಕುರಿತು ಎಕ್ಸ್ ಪೋಸ್ಟ್ ನಲ್ಲಿ ಪ್ರತಿಕ್ರಿಯೆ ನೀಡಿದ ಚಿದಂಬರಂ ” ಲೋಕಸಭಾ ಚುನಾವಣೆ ಬಳಿಕ ನಿರ್ಮಲಾ ಸೀತಾರಾಮನ್ ಅವರು ಕಾಂಗ್ರೆಸ್ ಪಕ್ಷದ 2024 ರ ಚುನಾವಣ ಪ್ರಣಾಳಿಕೆಯನ್ನು ಓದಿದ್ದಾರೆ. ನಮ್ಮ ಪ್ರಣಾಳಿಕೆಯ 30 ನೇಯ ಪುಟದಲ್ಲಿದ್ದ Employment-linked incentive (ELI) ಅನ್ನು ನೇರವಾಗಿ ತೆಗೆದುಕೊಳ್ಳಲಾಗಿದೆ’ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಪ್ರಣಾಳಿಕೆಯ 11 ನೆಯ ಪುಟದಲ್ಲಿದ್ದ Apprenticeship scheme ಮತ್ತು ಅನುದಾನವನ್ನೂ ಓದಿರುವುದು ಸಂತಸ ತಂದಿದೆ. ನಮ್ಮ ಪ್ರಣಾಳಿಕೆಯಲ್ಲಿದ್ದ ಹಲವು ವಿಚಾರಗಳನ್ನು ನಕಲು ಮಾಡಿದ್ದಾರೆ. ನಾನು ಇದರ ಕಿರು ಪಟ್ಟಿ ನೀಡಿದ್ದೇನಷ್ಟೆ ಎಂದು ಚಿದಂಬರಂ ಟೀಕಾ ಪ್ರಹಾರ ನಡೆಸಿದ್ದಾರೆ.
Angel Tax ಅನ್ನು ತೆಗೆದು ಹಾಕುವ ನಿರ್ಣಯವನ್ನು ಸ್ವಾಗತಿಸುತ್ತೇನೆ. ಕಾಂಗ್ರೆಸ್ ಪಕ್ಷ ಹಲವು ವರ್ಷಗಳ ಹಿಂದೆ ಅದನ್ನು ತೆಗೆದು ಹಾಕುವ ವಿಚಾರ ಪ್ರಸ್ತಾಪಿಸಿತ್ತು ಮತ್ತು ಇತ್ತೀಚಿಗಿನ ಪ್ರಣಾಳಿಕೆಯ 31ನೇ ಪುಟದಲ್ಲಿಯೂ ಬರೆಯಲಾಗಿದೆ ಎಂದು ಮಾಜಿ ಹಣಕಾಸು ಸಚಿವ ಪೋಸ್ಟ್ ಮಾಡಿದ್ದಾರೆ.