ಹೊಸದಿಲ್ಲಿ: ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯ ಅಪಘಾತಗಳನ್ನು ಎದುರಿಸುತ್ತಿರುವ ಭಾರತೀಯ ರೈಲ್ವೇಯು ಟ್ರ್ಯಾಕ್ ನವೀಕರಣ ಕಾರ್ಯಕ್ಕೆ ಒತ್ತು ನೀಡಿದೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಈ ಬಾರಿಯ ಬಜೆಟ್ ನಲ್ಲಿ 825 ಕೋಟಿ ರೂ.ಗಳನ್ನು ಹಳಿ ನವೀಕರಣ ಕಾಮಗಾರಿಗೆ ಮೀಸಲಿಡುವುದರೊಂದಿಗೆ ರೈಲ್ವೆಯ ಸುರಕ್ಷತೆಗೆ ಉತ್ತೇಜನ ನೀಡಿದೆ.
ಕಳೆದ ವರ್ಷ 16,826.36 ಕೋಟಿ ರೂ.ಗೆ ಹೋಲಿಸಿದರೆ ಈ ವರ್ಷ 17,651.98 ಕೋಟಿ ರೂ.ಗಳನ್ನು ಟ್ರ್ಯಾಕ್ ನವೀಕರಣಕ್ಕಾಗಿ ರೈಲ್ವೆ ಪಡೆದುಕೊಂಡಿದೆ.
ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ರೈಲ್ವೆ ವಲಯದಲ್ಲಿ ಮೂಲಸೌಕರ್ಯ ಅಭಿವೃದ್ಧಿ ಮತ್ತು ಉನ್ನತೀಕರಣಕ್ಕೆ ಒತ್ತು ನೀಡಿದ್ದು, ₹ 2.66 ಲಕ್ಷ ಕೋಟಿ ಹಂಚಿಕೆಯನ್ನು ಘೋಷಿಸಿದ್ದಾರೆ.
ಈ ಬಜೆಟ್ ನ ಗಮನಾರ್ಹ ಭಾಗವನ್ನು ಸುರಕ್ಷತಾ ಕ್ರಮಗಳನ್ನು ಹೆಚ್ಚಿಸಲು ಮೀಸಲಿಡಲಾಗುವುದು, 5,000 ಕಿಲೋಮೀಟರ್ ರೈಲು ಮಾರ್ಗಗಳಲ್ಲಿ ಕವಚ ವ್ಯವಸ್ಥೆಯನ್ನು ಅಳವಡಿಸಲು ಯೋಜಿಸಲಾಗಿದೆ. ಹೆಚ್ಚುವರಿಯಾಗಿ, ಸದ್ಯದಲ್ಲಿಯೇ ವಂದೇ ಭಾರತ್ ಮತ್ತು ಸ್ಲೀಪರ್ ವಂದೇ ಭಾರತ್ ರೈಲುಗಳ ಪರಿಚಯ ಸೇರಿದಂತೆ ಕೋಚ್ ಗಳಿಗೆ ಅಪ್‌ಗ್ರೇಡ್ ಆಗಲಿದೆ. ಈ ಬೆಳವಣಿಗೆಗಳ ಹೊರತಾಗಿಯೂ, ಭಾರತೀಯ ರೈಲ್ವೆ ದರಗಳು ವಿಶ್ವದಲ್ಲೇ ಅತ್ಯಂತ ಕಡಿಮೆ ಎಂದು ಅವರು ಹೇಳಿದರು.
ಕಳೆದ ವರ್ಷ 11,833.13 ಕೋಟಿ ರೂ.ಗೆ ಹೋಲಿಸಿದರೆ ಈ ಬಾರಿ ದುರಸ್ತಿ ಮತ್ತು ನಿರ್ವಹಣೆ ಸಾಮಗ್ರಿಗಳಿಗಾಗಿ ವಿತ್ತ ಸಚಿವರು 12,725.76 ಕೋಟಿ ರೂ. ಮೀಸಲಿಟ್ಟಿದ್ದಾರೆ. ಹೊಸ ಮಾರ್ಗಗಳ ನಿರ್ಮಾಣ/ಸೇರ್ಪಡೆಗಾಗಿ ರೈಲ್ವೆಗೆ 34,602.75 ಕೋಟಿ ರೂ.ಗಳನ್ನು ನೀಡಲಾಗಿದ್ದು, ಈಗಿರುವ ಮಾರ್ಗಗಳನ್ನು ದ್ವಿಗುಣಗೊಳಿಸಲು 29,312.19 ಕೋಟಿ ರೂ.ಗಳನ್ನು ನೀಡಲಾಗಿದ್ದು, ರಸ್ತೆ ಸುರಕ್ಷತಾ ಕಾಮಗಾರಿ ಮತ್ತು ಲೆವೆಲ್ ಕ್ರಾಸಿಂಗ್‌ಗಳಿಗೆ 705.18 ಕೋಟಿ ರೂ.ಗಳನ್ನು ವಿನಿಯೋಗಿಸಲಾಗಿದ್ದು, ರೋಡ್ ಓವರ್/ಅಂಡರ್ ಬ್ರಿಡ್ಜ್‌ಗಳಿಗೆ 9274.69 ಕೋಟಿ ನೀಡಲಾಗಿದೆ.