Advertisement

ಬುದ್ಧ ಸಮಾಜದ ಮೊದಲ ಪರಿವರ್ತಕ

03:30 PM Feb 27, 2017 | |

ಹುಬ್ಬಳ್ಳಿ: ಚರಾ-ಚರಗಳೂ ಬದುಕುವ ಹಕ್ಕು ಹೊಂದಿವೆ ಎಂದು ಬುದ್ಧ ಪ್ರತಿಪಾದಿಸಿದರು, ಹೋರಾಡಿದರು. ಪ್ರೇಮ ಮತ್ತು ವಿವೇಕ ಕಂಡುಕೊಂಡರು. ಅವರೇ ಸಮಾಜದ ಮೊದಲ ಪರಿವರ್ತಕರಾಗಿದ್ದಾರೆ ಎಂದು ಚಿತ್ರನಟ, ರಂಗಭೂಮಿ ಕಲಾವಿದ ಸಂಪತ್‌ಕುಮಾರ ಹೇಳಿದರು. 

Advertisement

ಇಲ್ಲಿನ ಘಂಟಿಕೇರಿಯ ಸರಕಾರಿ ಮೆಟ್ರಿಕ್‌ ನಂತರದ ಹಿಂದುಳಿದ ವರ್ಗದ ಹಾಸ್ಟೆಲ್‌ ಆವರಣದಲ್ಲಿ ರಾಜ್ಯ ಸರಕಾರ, ಜಿಲ್ಲಾ ಪಂಚಾಯತ್‌, ಸಮಾಜ ಕಲ್ಯಾಣ ಇಲಾಖೆ, ಸಮ್ಮೇಳನ ಆಯೋಜನ ಸಮಿತಿ ವತಿಯಿಂದ ಜ್ಞಾನರತ್ನ ಡಾ| ಬಿ.ಆರ್‌. ಅಂಬೇಡ್ಕರ್‌ ಅವರ 125ನೇ ಜಯಂತಿ ವರ್ಷಾಚರಣೆಯ ಅಂತಾರಾಷ್ಟ್ರೀಯ ಸಮ್ಮೇಳನದ ಅಂಗವಾಗಿ ರವಿವಾರ ಹಮ್ಮಿಕೊಂಡಿದ್ದ ಅಂಬೇಡ್ಕರ ಜ್ಞಾನದರ್ಶನ ಅಭಿಯಾನ, ಅಂಬೇಡ್ಕರ ಬದುಕು-ಬರಹ ಕುರಿತ ಉಪನ್ಯಾಸ ಹಾಗೂ ಸಂವಾದ ಕಾರ್ಯಕ್ರಮದಲ್ಲಿ ಅವರು ಕ್ರಾಂತಿ ಮತ್ತು ಪ್ರತಿಕ್ರಾಂತಿ ವಿಷಯವಾಗಿ ಉಪನ್ಯಾಸ ನೀಡಿದರು.  

ಅಂಬೇಡ್ಕರ ಅವರು ದಲಿತರ ಬಗ್ಗೆ  ಮಾತ್ರವಲ್ಲದೆ ಸಮಾಜದಲ್ಲಿನ ಪ್ರತಿಯೊಬ್ಬರ ಬಗ್ಗೆಯೂ ಧ್ವನಿ ಎತ್ತಿದ್ದರು. ಆದರೆ ಅವರನ್ನು ದಲಿತರಿಗೆ ಮಾತ್ರ ಸೀಮಿತ ಮಾಡಲಾಯಿತು. ಅವರು ಸಹ ಬುದ್ದನ ಮಾದರಿ ಆಗಿದ್ದರು. ಪುರಾತನ ಕಾಲದಲ್ಲಿ ವೈದಿಕರು ಮೊದಲು ಯಜ್ಞಕ್ಕೆ ಮನುಷ್ಯನನ್ನು ಬಲಿ ಕೊಡುತ್ತಿದ್ದರು. ಅದೂ ಕೆಳಜಾತಿಯವರನ್ನು.

ನಂತರ ಕುದುರೆ ಕೊಡಲು ಹಾಗೂ ತದನಂತರ ಗೋವುಗಳನ್ನು ಬಲಿ ಕೊಡಲು ಆರಂಭಿಸಿದರು. ಯಜ್ಞಕ್ಕೆ ಕೊಟ್ಟ ಬಲಿಯ ಮಾಂಸವನ್ನೆ ಅವರು ತಿನ್ನುತ್ತಿದ್ದರು. ಆದರೆ ಇಂದು ಅಂಥವರೆ ಇನ್ನುಳಿದವರ ಆಹಾರ ಪದ್ಧತಿ ಬಗ್ಗೆ ಆಕ್ಷೇಪಣೆ ವ್ಯಕ್ತಪಡಿಸುತ್ತಿದ್ದಾರೆ. ದೇಶದಲ್ಲಿ ಇತಿಹಾಸ, ಚರಿತ್ರೆಯನ್ನು ಸುಳ್ಳು ಹೇಳುತ್ತಲೇ ಬರಲಾಗುತ್ತಿದೆ. ಇಂದಿಗೂ ಸನಾತನ ಧರ್ಮವನ್ನು ಪುರಾತನ, ಶ್ರೇಷ್ಠವೆಂದು ಹೇಳಲಾಗುತ್ತಿದೆ ಎಂದರು. 

ಅಂಬೇಡ್ಕರ ಜ್ಞಾನದರ್ಶನ ಅಭಿಯಾನದ ವಲಯ ಸಂಯೋಜಕ ಬಸವರಾಜ ಸೂಳಿಭಾವಿ ಮಾತನಾಡಿ, ಸಾಮಾಜಿಕ ಬಹಿಷ್ಕಾರ ಅಪರಾಧ ಕೃತ್ಯವಾಗಿದ್ದರೂ ಇನ್ನು ಹಲವೆಡೆ ಅವರ ಮೇಲೆ ಸಾಮಾಜಿಕ ಬಹಿಷ್ಕಾರ ಹಾಕುತ್ತಿರುವುದು ಖೇದಕರ. ಇನ್ನು ಮನುವಾದ ಜೀವಂತವಾಗಿದೆ. ಜಾತಿಯಿಂದ ಮನುಷ್ಯನ ಮೇಲೆ ಅಪಚಾರವಾದ ನಡೆಯುತ್ತಿದೆ. ಸಮಾಜ ಮನುಷ್ಯನನ್ನು ಮನುಷ್ಯನನ್ನಾಗಿ ನೋಡುತ್ತಿಲ್ಲ.

Advertisement

ಜಾತಿ ಸಮಾಜದ ಏಳ್ಗೆಗೆ ಅಡ್ಡಗೋಡೆಯಾಗಿ ಪರಿಣಮಿಸಿದೆ. ಜಾತಿ ವ್ಯವಸ್ಥೆ ಹೋಗಲಾಡದಿದ್ದರೆ ದೇಶದ ಅಭಿವೃದ್ಧಿಯಾಗದು ಎಂದರು. ಪಾಲಿಕೆ ಸದಸ್ಯೆ ಲಕ್ಷ್ಮೀಬಾಯಿ ಬಿಜವಾಡ ಕಾರ್ಯಕ್ರಮ ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ಸಫಾಯಿ ಕರ್ಮಚಾರಿಗಳ ಆಯೋಗದ ಕಾರ್ಯದರ್ಶಿ ಡಾ| ಎಚ್‌.ನಟರಾಜ ಅವರು ಅಂಬೇಡ್ಕರ ಚಿಂತನೆಗಳ ಪ್ರವೇಶಿಕೆ ಪುಸ್ತಕ ಬಿಡುಗಡೆಗೊಳಿಸಿದರು.

ನಂತರ ಡಾ| ಬಿ.ಆರ್‌. ಅಂಬೇಡ್ಕರ ಜ್ಞಾನದರ್ಶನ ಅಭಿಯಾನ ಕುರಿತು ಉಪನ್ಯಾಸ ನೀಡಿದರು. ಹಾವೇರಿಯ ಕವಿವಿ ಸ್ನಾತಕೋತ್ತರ ಕೇಂದ್ರದ ಪ್ರಾಧ್ಯಾಪಕಿ ಡಾ| ಅನಸೂಯಾ ಕಾಂಬಳೆ, ನಿವೃತ್ತ ಪ್ರಾಧ್ಯಾಪಕ ಪ್ರೊ| ಎ.ವೈ. ನವಲಗುಂದ, ಡಾ| ಬಿ.ಆರ್‌. ಅಂಬೇಡ್ಕರ ಅಂತಾರಾಷ್ಟ್ರೀಯ ಸಮ್ಮೇಳನ ಸಮಿತಿಯ ನೋಡಲ್‌ ಅಧಿಕಾರಿ ಡಾ| ಎಂ.ಸಿ. ಶ್ರೀನಿವಾಸ, ಜ್ಞಾನದರ್ಶನ ಅಭಿಯಾನದ ಕೇಂದ್ರೀಯ ಸಂಯೋಜಕ ಡಾ| ಚಂದ್ರಶೇಖರ ವಿವಿಧ ವಿಷಯವಾಗಿ ಉಪನ್ಯಾಸ ನೀಡಿದರು. 

ರಾಜ್ಯ ವಾರ್ಡ್‌ನ ಸಂಘದ ಗೌರವಾಧ್ಯಕ್ಷ ಮಂಜುನಾಥ ಕೆ., ಪಿತಾಂಬರಪ್ಪ ಬಿಳಾರ, ಆರ್‌. ಬಸವರಾಜ ದುಂದೂರ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಆರ್‌. ಜಯಲಕ್ಷ್ಮಿ, ಪ್ರೇಮನಾಥ ಚಿಕ್ಕತುಂಬಳ ಇದ್ದರು. ಡಾ| ಪ್ರಹ್ಲಾದ ಗೆಜ್ಜಿ ನಿರೂಪಿಸಿದರು. ವೆಂಕನಗೌಡ ಪಾಟೀಲ ವಂದಿಸಿದರು.  

Advertisement

Udayavani is now on Telegram. Click here to join our channel and stay updated with the latest news.

Next