Advertisement

ಫಲಪುಷ್ಪ ಪ್ರದರ್ಶನದಲ್ಲಿ ಬುದ್ಧಮಂದಿರ

10:41 AM Feb 01, 2018 | |

ಕಲಬುರಗಿ: ಒಂದೆಡೆ ವಿಮಾನ. ಇನ್ನೊಂದೆಡೆ ನವಿಲು, ಮೂರು ಜೋಡಿಯ ಹೂವಿನ ಅಣಬೆ, ಮಧ್ಯದಲ್ಲೊಂದು ಬೃಹತ್ತಾದ ವಿವಿಧ ಹೂವುಗಳಿಂದ ಅಲಂಕೃತವಾದ ಬುದ್ಧ ವಿಹಾರ. ಈ ಮೂರು ಕಥಾವಸ್ತು ಸೃಷ್ಟಿಯಾಗಿದ್ದು ನಗರದ ಶರಣಬಸವೇಶ್ವರ ಕೆರೆ ಉದ್ಯಾನವನದಲ್ಲಿ.

Advertisement

ಕಳೆದ ಮೂರು ದಿನಗಳಿಂದ ಜಿಪಂ, ತೋಟಗಾರಿಕೆ ಇಲಾಖೆಯಿಂದ ಹಮ್ಮಿಕೊಂಡಿದ್ದ ಫಲಪುಷ್ಪ ಪ್ರದರ್ಶನದಲ್ಲಿ ಕಂಡು ಬಂದ ವಿಹಂಗಮ ದೃಶ್ಯವಿದು. ಸತತವಾಗಿ ಕಳೆದ ಏಳು ವರ್ಷಗಳಿಂದ ಜಿಲ್ಲಾ ತೋಟಗಾರಿಕೆ ಇಲಾಖೆಯು ಫಲಪುಷ್ಪ ಪ್ರದರ್ಶನ ಹಮ್ಮಿಕೊಂಡು ಜನರನ್ನು ತನ್ನತ್ತ ಸೆಳೆಯುತ್ತಿದೆ. ಕೇವಲ ದಕ್ಷಿಣ ಕರ್ನಾಟಕದ ಜನ ಮಾತ್ರ ಸವಿಯುತ್ತಿದ್ದ ಪುಷ್ಪ ದರ್ಶನವನ್ನು ಸೂರ್ಯ ನಗರಿ ಕಲಬುರಗಿ ಜಿಲ್ಲೆಯ ಜನರು ಸವಿಯುವಂತೆ ಮಾಡಿದ ಕೀರ್ತಿ ತೋಟಗಾರಿಕೆ ಇಲಾಖೆಗೆ ಸಲ್ಲುತ್ತದೆ.

11×11 ಅಡಿ ವಿಸ್ತೀರ್ಣದಲ್ಲಿ 5 ಸಾವಿರ ಬಿಳಿ, 500 ಹಳದಿ, 500 ಕಿತ್ತಳೆ, 500 ಗುಲಾಬಿ ಬಣ್ಣ ಸೇರಿದಂತೆ ಒಟ್ಟು ಆರುವರೆ ಸಾವಿರ ಜರ್ಬೆರಾ ಹೂ ಹಾಗೂ 20 ಕೆಜಿ ಆಸ್ಪರಾಗಸ್‌ ಹುಲ್ಲಿನಲ್ಲಿ ನಿರ್ಮಿಸಿದ ಬುದ್ಧವಿಹಾರ ಕಂಗೊಳಿಸುತ್ತಿತ್ತು. ಪ್ರದರ್ಶನದ ಕೇಂದ್ರ ಬಿಂದುವೇ ಬುದ್ಧವಿಹಾರ ಆಗಿದ್ದರಿಂದ ತನ್ನ ಅಲಂಕಾರದಿಂದ ಜನರನ್ನು ಮೋಡಿ ಮಾಡಿತ್ತು.
 
ಒಟ್ಟು 5 ಜನರು ಒಂದು ವಾರದಿಂದ ಕಾರ್ಯನಿರ್ವಹಿಸಿ ತಾವು ಬೆಳೆದ ಹೂಗಳಿಂದಲೇ ಇವೆಲ್ಲವನ್ನು ನಿರ್ಮಿಸಿದ್ದು ವಿಶೇಷವಾಗಿತ್ತು. ಪ್ರದರ್ಶನದಲ್ಲಿ 20 ಸಾವಿರ ಹೂವುಗಳನ್ನು ಬಳಸಲಾಗಿದ್ದು, ಎರಡು ಸಾವಿರ ಹೂಕುಂಡಗಳನ್ನು ಜೋಡಿಸಲಾಗಿದೆ. ತರಕಾರಿ ಕೆತ್ತನೆಯಲ್ಲಿ ಕಲಬುರಗಿಯ ಕೋಟೆ, ಚರ್ಚ್‌, ಬಂದೇನವಾಜ್‌ ದರ್ಗಾ, ಶ್ರೀ  ಶರಣಬಸವೇಶ್ವರ ದೇವಸ್ಥಾನ ಸೇರಿದಂತೆ ಮೀನು,ಮೊಸಳೆ, ಮೊಲ, ಶಿವಲಿಂಗ, ಪೆಂಗ್ವಿನ್‌, ವೆಂಕಟರಮಣ, ಗರುಡ, ಹೂವಿನ ಕುಂಡ, ಪಾತರಗಿತ್ತಿ, ಹೂವುಗಳಿಂದ ತಯಾರಿಸಿದ ಛೋಟಾ ಭೀಮ ಮಕ್ಕಳನ್ನು ಆಕರ್ಷಿಸಿದವು.

ಜಿಲ್ಲೆಯ ಪ್ರಗತಿಪರ ರೈತರು ಬೆಳೆದಿರುವ ತರಕಾರಿ, ಹಣ್ಣು, ಹೂ, ಗೆಣಸು, ಅಲಂಕಾರಿಕ ವಸ್ತುಗಳನ್ನು ಪ್ರದರ್ಶನಕ್ಕೆ
ಇಡಲಾಗಿತ್ತು. ಜನರಲ್ಲಿ ಸಾರ್ವತ್ರಿಕ ಮತದಾನ ಕುರಿತು ಜಾಗೃತಿ ಮೂಡಿಸಲು ಪುಷ್ಪಗಳಿಂದ ತಯಾರಿಸಿದ
ಚುನಾವಣಾ ಆಯೋಗದ ಲೋಗೋ ಹಾಗೂ ಓಟು ಹಾಕಿ ಬೆರಳು ತೋರಿಸುವ ಕಲಾಕೃತಿ ವಿಶಿಷ್ಟವಾಗಿತ್ತು.

ಈರುಳ್ಳಿ ಶೇಖರಣೆ, ನೆರಳು ಪರದೆ(ಪಾಲಿಹೌಸ್‌), ಹಸಿರು ಮನೆಯಲ್ಲಿ ಪುಷ್ಪ ಬೇಸಾಯ ಹೇಗೆ ಮಾಡಲಾಗುತ್ತದೆ ಎನ್ನುವ ಸ್ತಬ್ದ ಚಿತ್ರ ವೀಕ್ಷಿಸಲು ಅನುವು ಮಾಡಿಕೊಡಲಾಗಿತ್ತು. ತೋಟಗಾರಿಕೆ ಇಲಾಖೆಯ ವಿಷಯ ತಜ್ಞರು ಇವುಗಳ ಮಾಹಿತಿಯನ್ನು ರೈತರಿಗೆ ನೀಡಿದರು. ತೋಟಗಾರಿಕೆಯಿಂದ ಅಭಿವೃದ್ಧಿಪಡಿಸಲಾದ ದಾಸವಾಳ, ಕರಿಬೇವು, ನಿಂಬೆಹಣ್ಣು, ಅಲಂಕಾರಿಕ ಸಸಿಗಳನ್ನು ಕಡಿಮೆ ದರದಲ್ಲಿ ಮಾರಾಟಕ್ಕೆ ಇಡಲಾಗಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next