ಭಾಗಿ, ಎಕ್ಸಾಮ್‌ಗೆ ಹಾಲ್‌ಟಿಕೆಟ್ ತರೋದನ್ನು ಮರೆತರೂ ಕಂಪಾಸಲ್ಲಿ ಬಬಲ್ ಗಮ್ ತರೋದನ್ನು ಮಾತ್ರ ಮರೆಯುತ್ತಿರಲಿಲ್ಲ. ಬಬಲ್ ಗಮ್ ತಿಂದರೆ ಮಾತ್ರ ಅವಳು ನಾರ್ಮಲ್ ಮೋಡ್‌ನಲ್ಲಿರುತ್ತಿದ್ದಳು…
ಬಾಲ್ಯದಿಂದಲೂ ನೂರಾರು ಕೆಟ್ಟ ಹಾಗೂ ಒಳ್ಳೆಯ ಹವ್ಯಾಸ ಇರುವ ಗೆಳೆಯರನ್ನು ನೋಡುತ್ತಲೇ ಬಂದಿದ್ದೆ. ಕಾಲೇಜಿನಲ್ಲಿ ಶಂಕರ ಯಾವಾಗಲೂ ಕಥೆ, ಕಾದಂಬರಿ ಪುಸ್ತಕಗಳನ್ನು ಓದುತ್ತಿದ್ದ. ಮಾಲಾ ಯಾವಾಗಲೂ ಉಗುರು ಕಚ್ಚುತ್ತಿದ್ದಳು, ಕ್ಯಾಂಟೀನ್ ಕಾಕಾನ ಅಂಗಡಿಗೆ ಪದೇಪದೆ ಕಾಫಿ- ಟೀ ಕುಡಿಯಲು ನಮ್ಮ ಗ್ಯಾಂಗ್ ಹೋಗುತ್ತಿತ್ತು.
ನನ್ನ ಕ್ಲಾಸ್‌ಮೇಟ್ ಬಬ್ಲಿ ಎಂದರೆ ಎಲ್ಲಿಲ್ಲದ ಪ್ರೀತಿ ನನಗೆ. ಅವಳು ದಿನಾ ಉಡುವ ಉಡುಪು ನನಗಿಷ್ಟ. ಥೇಟ್ ಸೈರಾಟ್ ಹಿರೋಯಿನ್ ಥರ ಕಾಣುತ್ತಿದ್ದಳು. ಆ ಬಬ್ಲಿಯ ಹೆಸರು ಭಾಗೀರಥಿ. ನೋಡೋಕೆ ಚಿತ್ರನಟಿ ಬೇಬಿ ಶ್ಯಾಮಿಲಿಯ ಹಾಗಿದ್ದಳು. ಯಾವಾಗಲೂ ಬಬಲ್ ಗಮ್‌ತಿನ್ನುವುದು ಅವಳ ಖಯಾಲಿಯಾಗಿತ್ತು. ಈ ಕಾರಣಕ್ಕೆ ಬಬಲ್ ಗಮ್ ಬೇಬಿ ಎಂದೇ ಕಾಲೇಜಿನಲ್ಲಿ ಚಿರಪರಿಚಿತೆಯಾಗಿದ್ದಳು. ತುಂಬಾ ತಂಟೆಕೋರೆಯೂ ಆಗಿದ್ದಳು.
ಭಾಗಿಗೆ ಬಬಲ್ ಗಮ್ ಮೇಲೆ ಪ್ರೀತಿ ಇದ್ದ ಹಾಗೇ, ನನಗೆ ಭಾಗೀ ಎಂದರೆ ಎಲ್ಲಿಲ್ಲದ ಪ್ರೀತಿ. ಅವಳು ಎಕ್ಸಾಮ್‌ಗೆ ಹಾಲ್‌ಟಿಕೆಟ್ ತರೋದನ್ನು ಮರೆತರೂ ಕಂಪಾಸಲ್ಲಿ ಬಬಲ್ ಗಮ್ ತರೋದನ್ನು ಮಾತ್ರ ಮರೆಯುತ್ತಿರಲಿಲ್ಲ. ಬಬಲ್ ಗಮ್ ತಿಂದರೆ ಮಾತ್ರ ಅವಳು ನಾರ್ಮಲ್ ಮೋಡ್‌ನಲ್ಲಿರುತ್ತಿದ್ದಳು. ಇಲ್ಲಾಂದ್ರೆ ಹುಚ್ಚಿಯಂತೆ ಆಡ್ತಿದ್ದಳು.
ಕಾಲೇಜು ಕ್ಯಾಂಟೀನ್‌ನಲ್ಲಿ ನಿತ್ಯ ಸುಮಾರು 50ಕ್ಕೂ ಹೆಚ್ಚು ಬಬಲ್ ಗಮ್ ಖರೀದಿಸಿದ ಕೀರ್ತಿ ಆಕೆಯದು. ಅವಳಿಂದ ಏನಾದರೂ ಸಹಾಯವಾಗಬೇಕಿದ್ದರೂ ಬಬಲ್ ಗಮ್‌ಅನ್ನೇ ಕಪ್ಪಕಾಣಿಕೆಯಾಗಿ ನೀಡಬೇಕಿತ್ತು. ನಂತರವೇ ಅವಳು ಸಹಾಯ ಮಾಡುತ್ತಿದ್ದಿದ್ದು. ಬಬ್ಲಿಯ ಫೇಸ್‌ಬುಕ್, ವಾಟ್ಸಾಪ್‌ಗ್ಳಲ್ಲಿಯೂ ಬಬಲ್ ಗಮ್‌ನದೇ ದರ್ಬಾರ್… ಸ್ಟೇಟಸ್ ಕೂಡಾ ಐ ಲವ್ ಬಬಲ್ ಗಮ್ ಅಂತಾನೆ ಇರುತ್ತಿತ್ತು. ಬರ್ತ್ ಡೇ ದಿನದಂದು ಸ್ನೇಹಿತರೆಲ್ಲರೂ ಆಕೆಗೆ ಬಬಲ್ ಗಮ್‌ನಲ್ಲಿಯೇ ಮಸ್ತಕಾಭಿಷೇಕ ಮಾಡುತ್ತಿದ್ದರು. ಅವಳಿಗೆ ಇದರಿಂದ ಸಂತೋಷವಾಗುತ್ತಿದ್ದರೂ ನನಗೆ ಮಾತ್ರ ಅವರ ಮೇಲೆ ಕೋಪ ಬರುತ್ತಿತ್ತು.
ಇಂತಿಪ್ಪ ಭಾಗೀಗೆ ನಾನು ಒಂದು ದಿನ ಪ್ರಪೋಸ್ ಮಾಡಿದೆ. ಅವಳಿಗೂ ನಾನೆಂದರೆ ಇಷ್ಟವಿತ್ತಂತೆ. ಹಾಗಾಗಿ ಬೇಗನೆ ಹೂಂ ಅಂದಳು. ಅವಳು ನನ್ನೊಂದಿಗಿದ್ದ ಪ್ರತಿದಿನವೂ ಬಬಲ್ ಗಮ್ ಬಿಟ್ಟು ಬೇರೇನನ್ನೂ ಕೊಡಿಸು ಅಂತ ಕೇಳುತ್ತಿರಲಿಲ್ಲ. ಬರೀ ಬಬಲ್ ಗಮ್ ತಾನೇ, ದುಬಾರಿ ಬೆಲೆಯ ವಸ್ತುವನ್ನೇನೂ ಕೇಳಲಿಲ್ಲವಲ್ಲ ಎಂದುಕೊಳ್ಳದಿರಿ. ದಿನಕ್ಕೆ ಒಂದು ಸಲ, ಎರಡು ಸಲ ಕೊಡಿಸಬಹುದು. ಆದರೆ ಲೆಕ್ಕವಿಲ್ಲದಷ್ಟು ಬಾರಿ ಕೇಳಿದರೆ? ನನ್ನ ಪರಿಸ್ಥಿತಿ ಅದೇ ಆಯಿತು. ಕೊನೆಕೊನೆಗೆ ಅವಳಿಗೆ ಬಬಲ್ ಗಮ್ ಕೊಡಿಸಲು ನನ್ನ ಪಾಕೆಟ್ ಮನಿಯೆಲ್ಲಾ ಖಾಲಿಯಾಗಿ ಅಮ್ಮನ ಮಸಾಲೆ ಡಬ್ಬದ ಹಣ, ಅಪ್ಪನ ಜೇಬಿನಲ್ಲಿದ್ದ ಹಣಕ್ಕೂ ಕತ್ತರಿ ಹಾಕುವ ದುಃಸ್ಥಿತಿ ಒದಗಿತು. ಅದೃಷ್ಟವಶಾತ್ ನಮ್ಮ ಬಾಂಧವ್ಯ ತುಂಬಾ ಕಾಲ ಮುಂದುವರಿಯಲಿಲ್ಲ. ಬಬಲ್ ಗಮ್ ಹುಡುಗಿಗೆ ಮನೆಯವರು ಬೇರೊಬ್ಬನನ್ನು ಗೊತ್ತು ಮಾಡಿದ್ದರು. ಅವನಾದರೂ ಚೆನ್ನಾಗಿರಲಿ ಎಂದು ಮನದಲ್ಲೇ ಹಾರೈಸುತ್ತೇನೆ.
– ವಿನಾಯಕ ಬೆಣ್ಣಿ, ಬೆಳಗಾವಿ