ಕನ್ನಡದಲ್ಲಿ ತರಹೇವಾರಿ ಶೀರ್ಷಿಕೆಗಳಿರುವ ಚಿತ್ರಗಳು ಸೆಟ್ಟೇರುತ್ತಿವೆ. ಆ ಸಾಲಿಗೆ ಇಲ್ಲೊಂದು ಹೊಸಬರ ತಂಡ ಮಾಡಲು ಹೊರಟಿರುವ ಚಿತ್ರವೂ ಸೇರಿದೆ. ಅಂದಹಾಗೆ, ಆ ಚಿತ್ರಕ್ಕೆ “ಇಬ್ಬರು ಬಿ.ಟೆಕ್ ಸ್ಟುಡೆಂಟ್ಸ್ ಜರ್ನಿ’ ಎಂಬ ಹೆಸರಿಡಲಾಗಿದೆ. ಮೊದಲೇ ಹೇಳಿದಂತೆ ಇದೊಂದು ಹೊಸಬರ ಚಿತ್ರ. ಶೀರ್ಷಿಕೆ ಕೇಳಿದ ಮೇಲೆ, ಇದೊಂದು ಪಕ್ಕಾ ಲವ್‌ಸ್ಟೋರಿ. ಅದರಲ್ಲೂ ಹುಡುಗ, ಹುಡುಗಿಯ ಜರ್ನಿಯಲ್ಲಿ ನಡೆಯೋ ಪ್ರೀತಿಯ ಕಥೆ ಎಂಬುದನ್ನು ಪ್ರತ್ಯೇಕವಾಗಿ ಹೇಳುವಂತಿಲ್ಲ.
ಈ ಚಿತ್ರದ ಮೂಲಕ ಕೃಷ್ಣಂರಾಜು ನಾಯಕರಾಗಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿಯಾಗುತ್ತಿದ್ದಾರೆ. ಇದಕ್ಕೂ ಮುನ್ನ, ಕೃಷ್ಣಂರಾಜು, ತೆಲುಗು ಹಾಗೂ ತಮಿಳಿನ ಒಂದೊಂದು ಸಿನಿಮಾದಲ್ಲಿ ನಾಯಕರಾಗಿ ನಟಿಸಿದ್ದಾರೆ. “ಇಬ್ಬರು ಬಿ.ಟೆಕ್ ಸ್ಟುಡೆಂಟ್ಸ್ ಜರ್ನಿ’ ಅವರ ಮೊದಲ ಕನ್ನಡ ಸಿನಿಮಾ. ಕಿರಣ್ ಜಾತ್ವಾನಿ ಅವರು ಕೃಷ್ಣಂರಾಜುಗೆ ನಾಯಕಿ. ಇವರಿಗೂ ಇದು ಮೊದಲ ಅನುಭವ. ಈ ಚಿತ್ರವನ್ನು ವೇಮುಘಂಟೆ ನಿರ್ದೇಶಿಸುತ್ತಿದ್ದಾರೆ.
ವೇಮುಘಂಟೆಗೆ ಇದು ಮೊದಲ ಸಿನಿಮಾವೇನಲ್ಲ. ಈಗಾಗಲೇ ಅವರು ತೆಲುಗಿನಲ್ಲಿ ಸುಮಾರು ಒಂಭತ್ತು ಚಿತ್ರಗಳನ್ನು ನಿರ್ದೇಶಿಸಿದ್ದಾರೆ. ಅವರ ನಿರ್ದೇಶನದ ಚಿತ್ರಗಳಿಗೆ ನಾಲ್ಕು ನಂದಿ ಪ್ರಶಸ್ತಿಯನ್ನೂ ತಮ್ಮದಾಗಿಸಿಕೊಂಡಿದ್ದಾರೆ. ಈ ಚಿತ್ರಕ್ಕೆ ಅವರು ಕಥೆ ಬರೆದು ನಿರ್ದೇಶಿಸುತ್ತಿದ್ದಾರೆ. ಇನ್ನು, ಈ ಚಿತ್ರಕ್ಕೆ ಶ್ರೀನಿವಾಸ್‌ಯಾದವ್ ನಿರ್ಮಾಪಕರು. ಪುತ್ರನನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸಬೇಕು ಎಂಬ ಉದ್ದೇಶದಿಂದ ಈ ಚಿತ್ರವನ್ನು ಗೆಳೆಯ ಪಿ.ವಿನಯ್‌ಕುಮಾರ್ ಜತೆ ಸೇರಿ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ.
ಹಾಗಾದರೆ, ಈ ಸ್ಟುಡೆಂಟ್ಸ್‌ಗಳ ಕಥೆ ಏನು? ಶ್ರೀಮಂತ ಕುಟುಂಬದ ಬಿ.ಟೆಕ್ ಓದುವ ಹುಡುಗನಿಗೆ ನಿಶ್ಚಿತಾರ್ಥ ನಡೆಯುತ್ತದೆ. ಹುಡುಗ, ಹುಡುಗಿ ಇಬ್ಬರೂ ಬಿ.ಟೆಕ್ ಸ್ಟುಡೆಂಟ್ಸ್ ಆಗಿರುವುದರಿಂದ ಮದುವೆಗೆ ಮುನ್ನವೇ ಒಬ್ಬರಿಗೊಬ್ಬರು ಲೈಫನ್ನು ಅರ್ಥ ಮಾಡಿಕೊಳ್ಳುವ ಸಲುವಾಗಿ, ಒಂದು ಲಾಂಗ್ ಜರ್ನಿ ಮಾಡಲು ನಿರ್ಧರಿಸುತ್ತಾರೆ. ಆ ಸಮಯದಲ್ಲಿ ಇಬ್ಬರ ನಡುವೆ ಬರುವ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು, ಸ್ವಾರ್ಥ,ಅಹಂ ಹೀಗೆ ಬಂದಾಗ, ಹೇಗೆಲ್ಲಾ ಪರಿತಪಿಸುತ್ತಾರೆ, ಆ ಬಳಿಕ ಅವರು ಮದುವೆಗೆ ಮುಂದಾಗುತ್ತಾರಾ, ಇಲ್ಲವಾ ಅನ್ನೋದು ಕಥೆ.
ಬೆಂಗಳೂರು, ನಂದಿಬೆಟ್ಟ, ಊಟಿ, ಹೈದರಾಬಾದ್‌ನಲ್ಲಿ ಚಿತ್ರೀಕರಣ ನಡೆಯಲಿದೆ. ಮಲೇಶಿಯಾದಲ್ಲಿ ಮೂರು ಹಾಡುಗಳನ್ನು ಚಿತ್ರೀಕರಿಸುವ ಯೋಜನೆ ಚಿತ್ರತಂಡದ್ದು. ಇನ್ನು, ಈ ಚಿತ್ರದಲ್ಲಿ ರವಿಕಿರಣ್ ಅಭಿನಯಿಸುತ್ತಿದ್ದಾರೆ. ಸುಮಾರು ಎಂಟು ವರ್ಷಗಳ ನಂತರ ರವಿಕಿರಣ್ ಹಿರಿತೆರೆಗೆ ಕಾಲಿಡುತ್ತಿದ್ದಾರೆ. ಅವರಿಲ್ಲಿ ನಾಯಕನ ತಂದೆ ಪಾತ್ರದಲ್ಲಿ ನಟಿಸುತ್ತಿದ್ದು, ಅವರಿಗೆ ವೀಣಾಸುಂದರ್ ಜೋಡಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಲಯೇಂದ್ರ ಅವರಿಲ್ಲಿ ನಾಲ್ಕು ಗೀತೆಗಳಿಗೆ ಸಂಗೀತ ನೀಡಿದರೆ, ಮನೋಹರ್ ಅವರು ಕ್ಯಾಮೆರಾ ಹಿಡಿಯುತ್ತಿದ್ದಾರೆ.