ಬೆಂಗಳೂರು: ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಪಾಲ್ಗೊಳ್ಳಲು ದೆಹಲಿಗೆ ತೆರಳಿದ್ದ ಪ್ರತಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ ದಿಢೀರ್ ಬೆಂಗಳೂರಿಗೆ ವಾಪಸ್ ಆಗಿದ್ದು ಕುತೂಹಲ ಮೂಡಿಸಿದೆ.
ಶುಕ್ರವಾರ ದೆಹಲಿಯಲ್ಲಿದ್ದ ಯಡಿಯೂರಪ್ಪ ಶನಿವಾರ ಬೆಳಗ್ಗೆ ಬೆಂಗಳೂರಿಗೆ ವಾಪಸ್ಸಾದ ಬೆನ್ನಲ್ಲೇ ರಾಜಕೀಯ ವಲಯದಲ್ಲಿ ನಾನಾ ರೀತಿ ವ್ಯಾಖ್ಯಾನಗಳು ಕೇಳಿಬಂದವು.
ಡಿ.ಕೆ.ಸುರೇಶ್ ಪತ್ರಿಕಾಗೋಷ್ಠಿ ಮಾಡಿ ಬಿ.ಎಸ್.ಯಡಿಯೂರಪ್ಪ ನಮ್ಮ ವಿರುದ್ಧ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ ಎಂದು ಆರೋಪಿಸುವುದಕ್ಕೂ ಯಡಿಯೂರಪ್ಪ ಬೆಂಗಳೂರಿಗೆ ಬರುವುದಕ್ಕೂ ಅತ್ತ ದೆಹಲಿಯಲ್ಲಿ ಈಶ್ವರಪ್ಪ ಎರಡು ದಿನ ಕಾದು ನೋಡಿ ರಾಜ್ಯ ರಾಜಕಾರಣದಲ್ಲಿ ಏನಾಗುತ್ತದೆ ಎಂದು ಹೇಳಿದ್ದಕ್ಕೂ ಒಂದಕ್ಕೊಂದು ಸಂಬಂಧ ಕಲ್ಪಿಸಿ ನಾನಾ ಸುದ್ದಿಗಳು ಹುಟ್ಟಿಕೊಂಡವು.
ಆದರೆ, ಮೊಮ್ಮಗನಿಗೆ ಆರೋಗ್ಯ ಸಮಸ್ಯೆ ಎದುರಾದ ಕಾರಣ ವಾಪಸ್ ಆದರು ಎಂದು ಮೂಲಗಳು ತಿಳಿಸಿವೆ.
ಶನಿವಾರ ರಾತ್ರಿ ಅಥವಾ ಭಾನುವಾರ ಬೆಳಗ್ಗೆ ಮತ್ತೆ ದೆಹಲಿಗೆ ತೆರಳಲಿದ್ದಾರೆ ಎಂದು ಪಕ್ಷದ ನಾಯಕರು ತಿಳಿಸಿದ್ದಾರೆ.
ಈ ಮಧ್ಯೆ, ಯಡಿಯೂರಪ್ಪ ಅವರು ದೆಹಲಿಯಿಂದ ವಾಪಸ್ ಆಗಿದ್ದರ ಬಗ್ಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿಯಾಗಿ ಪ್ರಮಾಣ ಸ್ವೀಕರಿಸಲು ಬಂದಿರಬಹುದು ಎಂದು ಲೇವಡಿ ಮಾಡಿದರು.
ಇದಕ್ಕೆ ತಿರುಗೇಟು ನೀಡಿದ ಯಡಿಯೂರಪ್ಪ, . ಯಡಿಯೂರಪ್ಪ ಸಿಎಂ ಆಗಿ ಪ್ರತಿಜ್ಞಾವಿಧಿ ಸ್ವೀಕರಿಸಲು ದೆಹಲಿಯಿಂದ ವಾಪಸ್‌ಆಗಿದ್ದಾರೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ, ಅವರ ಮಾತು ನಿಜವಾಗಲಿ ಬಿಡಿ ಎಂದು ಹೇಳಿದರು.