Advertisement

ಆರ್ಥಿಕ ಸಂಕಷ್ಟದಲ್ಲಿ ಬಿಎಸ್‌ಎಸ್‌ಕೆ

03:17 PM Jan 24, 2022 | Team Udayavani |

ಹುಮನಾಬಾದ: ಬೀದರ ಸಹಕಾರ ಸಕ್ಕರೆ ಕಾರ್ಖಾನೆ ಆರಂಭವಾದ ನಂತರ ಈವರೆಗೆ 25 ಸಾವಿರ ಟನ್‌ ಕಬ್ಬು ನುರಿಸಲಾಗಿದ್ದು, ಈ ಹಂಗಾಮಿನಲ್ಲಿ ಸರಾಸರಿ 15ರಿಂದ 20 ಕೋಟಿ ಹಾನಿ ಸಂಭವಿಸುವ ಸಾಧ್ಯತೆ ಇದೆ. ಹೀಗಾದರೇ ಕಾರ್ಖಾನೆಗೆ ಕಬ್ಬು ಪೂರೈಕೆ ಮಾಡಿದವರ ಗತಿ ಏನು ಎಂದು ಶಾಸಕ ರಾಜಶೇಖರ ಪಾಟೀಲ ಪ್ರಶ್ನಿಸಿದರು.

Advertisement

ರವಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಎಸ್‌ಎಸ್‌ಕೆ ಈ ಹಿಂದೆ ದಿನಕ್ಕೆ 4ರಿಂದ 5 ಸಾವಿರ ಟನ್‌ ಕಬ್ಬು ನುರಿಸುವ ಸಾಮರ್ಥ್ಯ ಹೊಂದಿತ್ತು. ಸಂಕಷ್ಟದ ಮಧ್ಯೆ ಕೂಡ ಸುಭಾಷ್‌ ಕಲ್ಲೂರ್‌ ಕಾರ್ಖಾನೆ ಆರಂಭಿಸುವ ಕಾರ್ಯ ಮಾಡಿದ್ದಾರೆ. ಆರಂಭದಲ್ಲಿ ಸುಮಾರು ನಾಲ್ಕು ಸಾವಿರಕ್ಕೂ ಅಧಿಕ ಟನ್‌ ಕಬ್ಬಿನ ಹಾಲು ಹಾಳಾಗಿರುವ ಮಾಹಿತಿ ಲಭ್ಯವಾಗಿದ್ದು, ಬಿಜೆಪಿ ಮುಖಂಡರು, ರಾಜ್ಯ ಹಾಗೂ ಕೇಂದ್ರ ಸಚಿವರು ಸರಕಾರದ ಮೇಲೆ ಒತ್ತಡ ಹೇರಿ ಅನುದಾನ ತರುವ ಕೆಲಸ ಮಾಡಲಿ. ಜಿಲ್ಲೆಯ ಅಭಿವೃದ್ಧಿ ಕಾರ್ಯಕ್ಕೆ ನಾನು ಕೂಡ ಯಾವುದೇ ಸಮಯಕ್ಕೂ ಸಹಕಾರ ನೀಡಲು ಸಿದ್ಧನಿದ್ದೇನೆ ಎಂದರು.

ಹಾಳಾದ ಕಾನೂನು ವ್ಯವಸ್ಥೆ

ಹುಮನಾಬಾದ ಪಟ್ಟಣದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿದೆ. ಅನೈತಿಕ ಚಟುವಟಿಕೆಗಳು ಹೆಚ್ಚಾಗಿದ್ದು, ಕಡಿವಾಣ ಹಾಕಬೇಕಿರುವ ಡಿವೈಎಸ್‌ಪಿ ಸೇರಿದಂತೆ ಇತರೆ ಪೊಲೀಸ್‌ ಅಧಿಕಾರಿಗಳು ಪಕ್ಷವೊಂದರ ಕಾರ್ಯದರ್ಶಿ ಜೊತೆಗೆ ರಾತ್ರಿಯೆಲ್ಲಾ ಪಾರ್ಟಿ ಮಾಡುತ್ತಾರೆ. ಇಂಥದ್ದು ಎಂದು ನಾವು ಕಂಡಿಲ್ಲ. ಮಟ್ಕಾ, ಜೂಜು ಸೇರಿದಂತೆ ಇತರೆ ಅನೈತಿಕ ಚಟುವಟಿಕೆಗಳು ಹೆಚ್ಚಾಗಿವೆ ಎಂದು ಆರೋಪಿಸಿದರು.

ಭಾರಿ ಅವ್ಯವಹಾರ ಬಯಲಿಗೆ

Advertisement

ಪಟ್ಟಣದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಭಾರಿ ಪ್ರಮಾಣದ ಅವ್ಯವಹಾರ ನಡೆದಿರುವುದು ಅಲ್ಲಿನ ದಾಖಲೆಗಳಿಂದ ತಿಳಿದು ಬಂದಿದೆ. ಮುಂದಿನ ಕೆಲ ದಿನಗಳಲ್ಲಿ ಅಧಿಕೃತ ದಾಖಲೆಗಳು ಮಾಧ್ಯಮಕ್ಕೆ ನೀಡುವುದಾಗಿ ಶಾಸಕ ರಾಜಶೇಖರ ಪಾಟೀಲ ತಿಳಿಸಿದ್ದಾರೆ. ಸಂಘದಲ್ಲಿ ಇಲ್ಲಿನ ಜನರು ಸುಮಾರು 3.5 ಕೋಟಿ ಹಣ ಠೇವಣಿ ಇರಿಸಿದ್ದು, ಇದೀಗ ಆ ಹಣ ದ್ವಿಗುಣಗೊಳ್ಳುವ ಅವಧಿ ಬಂದಿದೆ. ಗಡವಂತಿಯಲ್ಲಿ ಒಂದು ಕಟ್ಟಡ ನಿರ್ಮಾಣಕ್ಕೆ 13 ಲಕ್ಷದ ಯೋಜನೆಗೆ 34 ಲಕ್ಷ ಖರ್ಚು ಮಾಡಲಾಗಿದೆ ಎಂಬುದು ದಾಖಲೆಗಳು ಹೇಳುತ್ತಿವೆ. ಅಲ್ಲದೆ, ಸಂಘದಲ್ಲಿ ಅನೇಕರ ಹೆಸರಲ್ಲಿ ಸಾಲ ತೋರಿಸಲಾಗುತ್ತಿದೆ. ಅನೇಕರು ಸಾಲ ಇರುವ ಬಗ್ಗೆ ಒಪ್ಪಿಕೊಳ್ಳುತ್ತಿಲ್ಲ ಎಂಬುವುದು ಕೂಡ ಸದಸ್ಯರು ಗಮನಕ್ಕೆ ತಂದಿದ್ದಾರೆ. ಇನ್ನೂ ಅನೇಕ ಮಾಹಿತಿಗಳು ಬರಬೇಕಾಗಿದ್ದು, ಇಲ್ಲಿನ ಅವ್ಯವಹಾರದ ಕುರಿತು ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದು ಮಾಧ್ಯಮಕ್ಕೆ ವಿವರಣೆ ನೀಡುವುದಾಗಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next