ಚಾಮರಾಜನಗರ: ಕೇಂದ್ರ-ರಾಜ್ಯ ಸರ್ಕಾರಗಳ ಜನ ವಿರೋಧಿ ನೀತಿ ಖಂಡಿಸಿ ಬಹುಜನ ಸಮಾಜ ಪಕ್ಷದ ಜಿಲ್ಲಾ ಘಟಕದ ವತಿಯಿಂದ ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಲಾಯಿತು.
ನಗರದ ಚಾಮರಾಜೇಶ್ವರ ಉದ್ಯಾನವನದ ಆವರಣದಲ್ಲಿ ಸಮಾವೇಶಗೊಂಡ ಪ್ರತಿಭಟನಾನಿರತರು ಅಲ್ಲಿಂದ
ಮೆರವಣಿಗೆ ಹೊರಟು ಭುವನೇಶ್ವರಿ ವೃತ್ತ, ಬಿ.ರಾಚಯ್ಯ ಜೋಡಿ ರಸ್ತೆ ಮೂಲಕ ಜಿಲ್ಲಾಡಳಿತ ಭವನಕ್ಕೆ ತೆರಳಿ ಕೆಲಕಾಲ ಪ್ರತಿಭಟನೆ ನಡೆಸಿದರು. ಈ ವೇಳೆ ಕೇಂದ್ರ-ರಾಜ್ಯ ಸರ್ಕಾರಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಹೆಚ್ಚುವರಿ ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.
ವಿದ್ಯಾರ್ಥಿವೇತನ ಬಿಡುಗಡೆ ಮಾಡಿ: ಪ್ರತಿಭಟನೆ ನೇತೃತ್ವ ವಹಿಸಿದ್ದ ಪಕ್ಷದ ಜಿಲ್ಲಾಧ್ಯಕ್ಷ ನಾಗಯ್ಯ ಮಾತನಾಡಿ, ದೇಶದಲ್ಲಿ 2018-19 ಹಾಗೂ 2019-20ನೇ ಸಾಲಿನ 70 ಲಕ್ಷ ಎಸ್ಸಿ, ಎಸ್ಟಿ ವರ್ಗಗಳ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನಿಲ್ಲಿಸಿರುವುದನ್ನು ಕೇಂದ್ರ -ರಾಜ್ಯ ಸರ್ಕಾರಗಳು ಕೂಡಲೇ ಬಿಡುಗಡೆ ಮಾಡಬೇಕು. ರೈತ ವಿರೋಧಿ ಹೊಸ ಕೃಷಿ ಕಾನೂನು ರದ್ದುಪಡಿಸಲು ಒತ್ತಾಯಿಸಿ ದೇಶ ವ್ಯಾಪಿ ನಡೆದಿರುವ ರೈತ ಹೋರಾಟಕ್ಕೆ ಬೆಂಬಲಿಸುತ್ತೇವೆಂದರು.
ಇದನ್ನೂ ಓದಿ:ಶೀಘ್ರದಲ್ಲೇ ನರ್ಸರಿಗಳನ್ನು ಪ್ರಾರಂಭಿಸುತ್ತೇವೆ : ಕೇಜ್ರಿವಾಲ್
ಜಮೀನು ಉಳಿಸಿ: ನ್ಯಾಯಮೂರ್ತಿ ನಾಗಮೋಹನ್ ದಾಸ್ ವರದಿಯಂತೆ ಜನಸಂಖ್ಯೆಗೆ ಅನುಗುಣವಾಗಿ ಎಸ್ಸಿ ಮೀಸಲು ಪ್ರಮಾಣ ಶೇ.20 ಹಾಗೂ ಎಸ್ಟಿ ವರ್ಗದವರಿಗೆ ಶೇ.10 ಹೆಚ್ಚಿಸಬೇಕು. ಪಿಟಿಸಿಎಲ್ ಕಾಯ್ದೆಯನ್ನು ಕೋರ್ಟುಗಳು ನಿಷ್ಟ್ರಿಯಗೊಳಿಸಿರುವುದರಿಂದ ಈ ಕಾಯ್ದೆಗೆ ರಾಜ್ಯ ಸರ್ಕಾರ ತಿದ್ದುಪಡಿ ತಂದು ಎಸ್ಸಿ, ಎಸ್ಟಿ ವರ್ಗದ ಜಮೀನು ಉಳಿಸಲು ಕ್ರಮಕೈಗೊಳ್ಳಬೇಕು. ತೋಟಿ, ಇನಾಮು ಜಮೀನುಗಳನ್ನು ಪಿಟಿಸಿಎಲ್ ಕಾಯ್ದೆ ವ್ಯಾಪ್ತಿಗೆ ತರಬೇಕೆಂದರು.