Advertisement

ಬಿಎಸ್‌ಎನ್‌ಎಲ್‌ ಚೇತರಿಸಿಕೊಳ್ಳಬೇಕು  

12:30 AM Mar 16, 2019 | |

ಸರಕಾರಿ ಸ್ವಾಮ್ಯದ ಭಾರತ್‌ ಸಂಚಾರ್‌ ನಿಗಮ್‌ (ಬಿಎಸ್‌ಎನ್‌ಎಲ್‌) ಸಂಸ್ಥೆಯ ಹಣಕಾಸು ಪರಿಸ್ಥಿತಿ ತೀರಾ ಹದಗೆಟ್ಟಿದೆ. ಇದೇ ಮೊದಲ ಬಾರಿಗೆ ಬಿಎಸ್‌ಎನ್‌ಎಲ್‌ ತನ್ನ ನೌಕರರಿಗೆ ವೇತನ ಪಾವತಿ ಮಾಡಲೂ ಸಾಧ್ಯವಾಗದೆ ಪರಿತಪಿಸುವ ಸ್ಥಿತಿಗೆ ತಲುಪಿದೆ. ಸಾಮಾನ್ಯವಾಗಿ ಪ್ರತಿ ಮಾಸದ ಕೊನೆಯ ದಿನ ನೌಕರರ ವೇತನ ಬಟವಾಡೆಯಾಗಿರುತ್ತದೆ. ಆದರೆ ಫೆಬ್ರವರಿ ತಿಂಗಳ ವೇತನ ಮಾರ್ಚ್‌ 15 ಕಳೆದರೂ ಆಗಿಲ್ಲ ಹಾಗೂ ಸದ್ಯಕ್ಕೆ ಆಗುವ ಲಕ್ಷಣವೂ ಇಲ್ಲ. ವೇತನ ಬಟವಾಡೆಗಾಗಿ ಬಿಎಸ್‌ಎನ್‌ಎಲ್‌ ಸಾಲದ ಮೊರೆ ಹೋಗುವ ತೀರ್ಮಾನಕ್ಕೆ ಬಂದಿದೆ. ಹೀಗೆ ಏರ್‌ ಇಂಡಿಯಾ ಬಳಿಕ ಇದೀಗ ಸಂಪೂರ್ಣವಾಗಿ ಸರಕಾರಿ ಸ್ವಾಮ್ಯದಲ್ಲಿರುವ ಇನ್ನೊಂದು ಸಂಸ್ಥೆ ಅಧಃಪತನ ದತ್ತ ಮುಖ ಮಾಡಿದೆ. 

Advertisement

ಬಿಎಸ್‌ಎನ್‌ಎಲ್‌ ದುಃಸ್ಥಿತಿಗೆ ಅದು ಸತತವಾಗಿ ನಷ್ಟ ಅನುಭವಿ ಸುತ್ತಿ ರುವುದೇ ಕಾರಣ. ಸುಮಾರು ಹತ್ತು ವರ್ಷಗಳಿಂದ ಬಿಎಸ್‌ಎನ್‌ಎಲ್‌ ನಷ್ಟ ಅನುಭವಿಸುತ್ತಿದೆ. ನಡುವೆ ರವಿಶಂಕರ್‌ ಪ್ರಸಾದ್‌ ದೂರಸಂಪರ್ಕ ಸಚಿವರಾಗಿದ್ದಾಗೊಮ್ಮೆ ತುಸು ಚೇತರಿಕೆಯ ಲಕ್ಷಣ ಕಂಡಿತ್ತಾದರೂ ಇದೀಗ ಮತ್ತೆ ನಷ್ಟದ ಪ್ರಮಾಣ ಹೆಚ್ಚಾಗಿದೆ. ಒಂದು ಅಂದಾಜಿನ ಪ್ರಕಾರ ಈ ಸಾಲಿನಲ್ಲಿ ನಷ್ಟದ ಮೊತ್ತ 6000 ಕೋ.ರೂ.ಗಿಂತ ಅಧಿಕವಿರಲಿದೆ. ಒಂದು ಕಾಲದಲ್ಲಿ ಅತ್ಯಂತ ಲಾಭದಾಯಕವಾಗಿ ನಡೆಯುತ್ತಿದ್ದ ಸರಕಾರಿ ಸಂಸ್ಥೆಯೊಂದು ನಷ್ಟದತ್ತ ಹೊರಳಲು ಕಾರಣ ಏನು ಎನ್ನುವುದರ ಬಗ್ಗೆ ಆತ್ಮವಿಮರ್ಶೆ ಮಾಡಿಕೊಳ್ಳಲು ಇದು ಸಕಾಲ. ಮೋದಿ ನೇತೃತ್ವದ ಸರಕಾರದ ಕಾಲದಲ್ಲಿ ಸಾರ್ವಜನಿಕ ವಲಯದ ಕಂಪೆನಿಗಳು ಚೇತರಿಕೆ ಕಂಡಾವು ಎಂಬ ದೊಡ್ಡದೊಂದು ನಿರೀಕ್ಷೆ ಇತ್ತಾದರೂ ಇದೀಗ ಈ ನಿರೀಕ್ಷೆ ಹುಸಿಯಾಗುವ ಲಕ್ಷಣಗಳು ಕಾಣಿಸುತ್ತಿವೆ.  

ಬಿಎಸ್‌ಎನ್‌ಎಲ್‌ ನಷ್ಟ ಅನುಭವಿಸಲು ಮುಖ್ಯ ಕಾರಣ ಅದರಲ್ಲಿರುವ ವೃತ್ತಿಪರತೆಯ ಕೊರತೆ. ದೂರಸಂಪರ್ಕ ಕ್ಷೇತ್ರಕ್ಕೆ ಖಾಸಗಿ ಕಂಪೆನಿಗಳ ಪ್ರವೇಶವಾದ ಬಳಿಕ ಬಿಎಸ್‌ಎನ್‌ಎಲ್‌ ನಷ್ಟ ಅನುಭವಿಸಲು ತೊಡಗಿದೆ. ಅದರಲ್ಲೂ ರಿಲಯನ್ಸ್‌ ಜಿಯೊ ಪ್ರವೇಶದ ಬಳಿಕ ಬಿಎಸ್‌ಎನ್‌ಎಲ್‌ ಮಾತ್ರವಲ್ಲದೆ ಕಂಪೆನಿಗಳ ಲಾಭಾಂಶವೂ ಕುಸಿದಿದೆ. ಆದರೆ ಖಾಸಗಿ ಕಂಪೆನಿಗಳು ತಕ್ಷಣ ಎಚ್ಚೆತ್ತುಕೊಂಡು ಜಿಯೊಗೆ ತಕ್ಕ ಸ್ಪರ್ಧೆ ನೀಡಿವೆ. ಈ ವೃತ್ತಿಪರತೆಯನ್ನು ಪ್ರದರ್ಶಿಸುವಲ್ಲಿ ಬಿಎಸ್‌ಎನ್‌ಎಲ್‌ ವಿಫ‌ಲಗೊಂಡಿದೆ. ಖಾಸಗಿ ಕಂಪೆನಿಗಳು 4ಜಿ ಸೇವೆ ಪ್ರಾರಂಭಿಸಿ ವರ್ಷವಾಗುತ್ತಾ ಬಂದಿದೆ. ಆದರೆ ಬಿಎಸ್‌ಎನ್‌ಎಲ್‌ ಈಗಲೂ 3ಜಿ ಯುಗದಲ್ಲೇ ಇದೆ. ಕೇಳಿದರೆ ನಾವು ನೇರವಾಗಿ 5ಜಿ ಪ್ರಾರಂಭಿಸುತ್ತೇವೆ ಎಂಬ ಉಡಾಫೆ ಉತ್ತರ ಬರುತ್ತದೆ. ಬಿಎಸ್‌ಎನ್‌ಎಲ್‌ನ ಕಳಪೆ ಸೇವಾಗುಣಮಟ್ಟಕ್ಕೆ ಇದೊಂದು ಉದಾಹರಣೆ ಮಾತ್ರ. ಈ ಮಾದರಿ ಸೇವೆಯಿಂದ ತನ್ನ ಗ್ರಾಹಕ ನೆಲೆಯನ್ನು ಕ್ಷಿಪ್ರವಾಗಿ ಕಳೆದುಕೊಳ್ಳುತ್ತಿದೆ. ಕಾರ್ಯನಿರ್ವಹಣೆಯಲ್ಲಿ ವೃತ್ತಿಪರತೆಯನ್ನು ತರುವ ತನಕ ಯಾವ ಕಂಪೆನಿಯೂ ಉದ್ಧಾರವಾಗುವುದು ಸಾಧ್ಯವಿಲ್ಲ. 

ಬಿಎಸ್‌ಎನ್‌ಎಲ್‌ಗೆ ಈಗ ಹೊರೆಯಾಗಿರುವುದೇ ಅದರ ಅಪಾರ ಸಿಬಂದಿವರ್ಗ. ಪ್ರಸ್ತುತ 1.76 ಲಕ್ಷ ಸಿಬಂದಿಗಳನ್ನು ಈ ಸಂಸ್ಥೆ ಹೊಂದಿದ್ದು, ಶೇ.55 ಆದಾಯ ಈ ಸಿಬಂದಿಗಳ ವೇತನಕ್ಕೆ ಹೋಗುತ್ತದೆ. ಈ ಖರ್ಚಿನ ಹೊರೆಯಿಂದಾಗಿ ಬಿಎಸ್‌ಎನ್‌ಎಲ್‌ಗೆ ಯಾವ ಹೊಸ ಕಾರ್ಯಕ್ರಮವನ್ನು ಪ್ರಾರಂಭಿಸಲು ಸಾಧ್ಯವಾಗುತ್ತಿಲ್ಲ. ಸೇವೆಯ ಗುಣಮಟ್ಟ ಸುಧಾರಿಸಿದರೆ ಮತ್ತು ಕಾರ್ಯ ನಿರ್ವಹಣೆಯಲ್ಲಿ ವೃತ್ತಿಪರತೆಯನ್ನು ತಂದರೆ ಈಗಲೂ ಬಿಎಸ್‌ಎನ್‌ಎಲ್‌ ಸೇವೆಯನ್ನು ಪಡೆಯಲು ಉತ್ಸುಕರಾಗಿರುವ ಗ್ರಾಹಕ ರಿದ್ದಾರೆ. ಆದರೆ ಹಣಕಾಸಿನ ಮುಗ್ಗಟ್ಟಿನಿಂದಾಗಿ ಬಿಎಸ್‌ಎನ್‌ಎಲ್‌ ಈಗಲೂ ಓಬೀರಾಯನ ಕಾಲದ ತಂತ್ರಜ್ಞಾನವನ್ನೇ ನೆಚ್ಚಿಕೊಂಡಿದೆ. 

ಸರಕಾರದ ಪಾಲಿಗೆ ಸಾರ್ವಜನಿಕ ವಲಯದ ಉದ್ದಿಮೆಗಳು ಬಿಳಿಯಾನೆ ಯಾಗುತ್ತಿವೆ. ಹೀಗಾಗಿ ಸರಕಾರ ಈ ಉದ್ದಿಮೆಗಳನ್ನು ಖಾಸಗಿಯವರಿಗೆ ವಹಿಸಿಕೊಡಲು ಉತ್ಸುಕವಾಗಿದೆ. ಸರಕಾರಿ ಉದ್ದಿಮೆಗಳನ್ನು ಖಾಸಗಿ ಯವರಿಗೆ ವಹಿಸಲು ಪೂರಕವಾಗಿರುವ ವಾತಾವರಣವನ್ನು ಉದ್ದೇಶ ಪೂರ್ವಕವಾಗಿಯೇ ಸೃಷ್ಟಿಸಲಾಗುತ್ತಿದೆ ಎಂಬ ಗುಮಾನಿಯೂ ಇದೆ. ಆದರೆ ದೂರಸಂಪರ್ಕದಂಥ ಪ್ರಮುಖ ಸೇವೆಯನ್ನು ಖಾಸಗಿಯವರಿ ಗೊಪ್ಪಿಸುವುದು ವಿವೇಚನಾಯುಕ್ತ ನಿರ್ಧಾರವಲ್ಲ. ಇದು ಡಿಜಿಟಲ್‌ ಜಮಾನ. ಬ್ಯಾಂಕ್‌ ವ್ಯವಹಾರಗಳು, ಶಿಕ್ಷಣ, ಸರಕಾರಿ ಸೇವೆ ಇತ್ಯಾದಿಗಳೆಲ್ಲ ಅಂತರ್ಜಾಲದ ಮೂಲಕ ನಡೆಯುತ್ತಿವೆ.ಡಿಜಟಲ್‌ ಇಂಡಿಯಾ ಆಗಬೇಕಿದ್ದರೆ ಸಶಕ್ತವಾದ ದೂರಸಂಪರ್ಕ ವ್ಯವಸ್ಥೆಯೊಂದು ಸರಕಾರದ ಕೈಯಲ್ಲೇ ಇರುವುದು ಅಗತ್ಯ. ಅಲ್ಲದೆ ಸರಕಾರದ ಎಲ್ಲ ರಹಸ್ಯ ಸಂವಹನಗಳು ನಡೆಯುವುದು ಬಿಎಸ್‌ಎನ್‌ಎಲ್‌ ಮೂಲಕ. ಇಂಥ ಸಂಸ್ಥೆಯೊಂದನ್ನು ಖಾಸಗಿ ವಲಯಕ್ಕೆ ಒಪ್ಪಿಸುವುದರಿಂದ ರಾಷ್ಟ್ರೀಯ ಭದ್ರತೆಯೂ ಸೇರಿದಂತೆ ಎದುರಾಗಬಹುದಾದ ಇತರ ಅಪಾಯಗಳೂ ಇವೆ. ಹೀಗಾಗಿ ಬಿಎಸ್‌ಎನ್‌ಎಲ್‌ನ್ನು ಪುನಶ್ಚೇತನಗೊಳಿಸಿ ಮತ್ತೆ ಲಾಭದ ಹಳಿಗೆ ಮರಳುವಂತೆ ಮಾಡಲು ಕ್ಷಿಪ್ರವಾಗಿ ಕಾರ್ಯಯೋಜನೆಯೊಂದನ್ನು ರೂಪಿಸುವುದು ಸದ್ಯದ ಅಗತ್ಯ.

Advertisement
Advertisement

Udayavani is now on Telegram. Click here to join our channel and stay updated with the latest news.

Next