Advertisement

ಬಿಎಸ್ಸೆನ್ನೆಲ್‌ ಜಾಗ ಹರಾಜಿಗೆ ಆಕ್ಷೇಪ ಹಿನ್ನೆಲೆ: ಅಗತ್ಯ ಕ್ರಮಕ್ಕೆ ಜಿಲ್ಲಾಧಿಕಾರಿ ಸೂಚನೆ

12:43 AM Jan 18, 2023 | Team Udayavani |

ಮಂಗಳೂರು: ಕದ್ರಿ ಪಾರ್ಕ್‌ ಸಮೀಪದಲ್ಲಿರುವ ಭಾರತ ಸಂಚಾರ ನಿಗಮದ ಎರಡು ಎಕರೆ ಜಮೀನು (ಬಿಎಸ್ಸೆನ್ನೆಲ್‌) ಮಾರಾಟ ಮಾಡುವ ಕ್ರಮವನ್ನು ಆಕ್ಷೇಪಿಸಿ ಸಾಮಾಜಿಕ ಹೋರಾಟಗಾರರು ಸಲ್ಲಿಸಿರುವ ಮನವಿಗೆ ಸಂಬಂಧಿಸಿ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ದ.ಕ. ಜಿಲ್ಲಾಧಿಕಾರಿ ಮಂಗಳೂರು ಸಹಾಯಕ ಆಯುಕ್ತ(ಎಸಿ)ರಿಗೆ ಸೂಚನೆ ನೀಡಿದ್ದರು. ಈ ಬಗ್ಗೆ ಕ್ರಮ ಕೈಗೊಂಡಿರುವ ಎಸಿ ಅವರು ಬಿಎಸ್ಸೆನ್ನೆಲ್‌ಗೆ ನೋಟಿಸ್‌ ನೀಡಿದ್ದಾರೆ.

Advertisement

ಕದ್ರಿ ಪಾರ್ಕ್‌ ಎದುರುಗಡೆಯ 2 ಎಕರೆ ಸ್ಥಳವನ್ನು ಕನ್ನಡಿಗರಿಗೆ ದೂರ ಸಂಪರ್ಕ ಲ್ಯಾಂಡ್‌ ಲೈನ್‌ ನೀಡಲು ದಶಕಗಳ ಹಿಂದೆ ನೀಡಲಾಗಿದ್ದು, ಅದರಲ್ಲಿ 50 ಸೆಂಟ್ಸ್‌ ಜಾಗದಲ್ಲಿ ಟೆಲಿಫೋನ್‌ ಎಕ್ಸ್‌ಚೇಂಜ್‌ ಕಟ್ಟಡ ನಿರ್ಮಾಣ ವಾಗಿದ್ದು, ಉಳಿದ ಜಾಗ ಖಾಲಿಯಾಗಿದೆ. ಇದೀಗ ಬಿಎಸ್ಸೆನ್ನೆಲ್‌ ಆ ಜಾಗವನ್ನು ಮಾರಾಟಕ್ಕೆ ಮುಂದಾಗಿದೆ. ಕೋಟಿಗಟ್ಟಲೆ ಬೆಲೆಯ ರಾಜ್ಯ ಸರಕಾರದ ಜಮೀನನ್ನು ಕನ್ನಡಿಗರಿಗಾಗಿಯೇ ಉಪಯೋಗಿಸಬೇಕು. ಅದನ್ನು ಖಾಸಗಿಯಾಗಿ ಮಾರಲು ಅವಕಾಶ ನೀಡಬಾರದು ಎಂದು ಸಾಮಾಜಿಕ ಹೋರಾಟಗಾರರು ಜಿಲ್ಲಾಧಿಕಾರಿಯನ್ನು ಆಗ್ರಹಿಸಿದ್ದರು. ಜಿಲ್ಲಾಧಿಕಾರಿ ರವಿ ಕುಮಾರ್‌ ಎಂ.ಆರ್‌., ಪರಿಶೀಲನೆ ನಡೆಸಿ ಅಗತ್ಯ ಕ್ರಮ ಕೈಗೊಂಡು ನಿಗಮಕ್ಕೆ ಮಂಜೂರು ಮಾಡಲಾದ ಎಲ್ಲ ದಾಖಲೆಗಳನ್ನು ಕಚೇರಿಗೆ ವರದಿ ಮಾಡುವಂತೆ ಎಸಿಯವರಿಗೆ ತಿಳಿಸಿದ್ದರು.

ಕಟ್ಟಡ ಸಹಿತ 200 ಸೆಂಟ್ಸ್‌ ಜಾಗವನ್ನು ಪಾರ್ಕಿಂಗ್‌ ಸ್ಥಳವಾಗಿ ಉಪಯೋಗಿಸಲು ಮನಪಾಕ್ಕೆ ಒದಗಿಸಬೇಕು. ಇದರಿಂದ ಪಾಲಿಕೆಗೆ ಪಾರ್ಕಿಂಗ್‌ ಶುಲ್ಕ ಸಂಗ್ರಹಿಸಬಹುದಾಗಿದೆ. ಮಾತ್ರವಲ್ಲದೆ 25 ವರ್ಷ ಹಳೆಯ ಕಟ್ಟಡವನ್ನು ನ್ಯಾಯೋಚಿತ ಬೆಲೆಗೆ ಪ್ರಾದೇಶಿಕ ಸಾರಿಗೆ ಕಚೇರಿಗೆ ಒದ ಗಿಸಬೇಕು ಎಂಬುದು ಹೋರಾಟಗಾರರ ಆಗ್ರಹವಾಗಿದೆ.

ಅದು ಸರಕಾರಿ ಜಾಗವಾಗಿದ್ದು, ಅದನ್ನು ಮಾರಾಟ ಅಥವಾ ಹರಾಜು ಹಾಕಲು ಆಗುವುದಿಲ್ಲ. ಈ ಬಗ್ಗೆ ಸಂಬಂಧಪಟ್ಟವರಿಗೆ ನೋಟಿಸ್‌ ನೀಡಲಾಗಿದೆ.
– ಮದನ್‌ ಮೋಹನ್‌, ಸಹಾಯಕ ಆಯುಕ್ತ, ಮಂಗಳೂರು ಉಪ ವಿಭಾಗ

ಮಂಗಳೂರು ಮಾತ್ರವಲ್ಲದೆ, ವಿವಿಧ ಕಡೆಗಳಲ್ಲೂ ಬಿಎಸ್ಸೆನ್ನೆಲ್‌ನ ಹೆಚ್ಚುವರಿ ಜಾಗದ ಮಾರಾಟ ಪ್ರಕ್ರಿಯೆ ಕೇಂದ್ರ ಸರಕಾರದ ಸಂಬಂಧಪಟ್ಟ ಇಲಾಖೆಯ ಮೇಲ್ವಿಚಾರಣೆಯಲ್ಲಿ ನಡೆಯುತ್ತಿದೆ.

Advertisement

– ಜಿ.ಆರ್‌. ರವಿ, ಪ್ರ. ಮಹಾ ಪ್ರಬಂಧಕ

Advertisement

Udayavani is now on Telegram. Click here to join our channel and stay updated with the latest news.

Next