Advertisement

ಬೇಡಿಕೆಗಳ ಈಡೇರಿಕೆಗೆ ಬಿಎಸ್ಸೆನ್ನೆಲ್‌ ನೌಕರರ ಆಗ್ರಹ

12:37 PM Oct 31, 2018 | Team Udayavani |

ಮೈಸೂರು: ವೇತನ ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬಿಎಸ್ಸೆನ್ನೆಲ್‌ ನೌಕರರು ಜಯಲಕ್ಷಿಪುರಂನಲ್ಲಿರುವ ಬಿಎಸ್ಸೆನ್ನೆಲ್‌ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು. 

Advertisement

ನೌಕರರ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಂಸ್ಥೆಯ ಅಧಿಕಾರಿಗಳು ಹಾಗೂ ಅಧಿಕಾರೇತರ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ದೇಶಾದ್ಯಂತ ನಡೆಸುತ್ತಿರುವ ಹೋರಾಟ ಬೆಂಬಲಿಸಿದ ಪ್ರತಿಭಟನಾಕಾರರು ನಗರದಲ್ಲೂ ಪ್ರತಿಭಟನೆ ನಡೆಸಿದರು.

ಬಿಎಸ್ಸೆನ್ನೆಲ್‌ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳು ಹಾಗೂ ಅಧಿಕಾರೇತರ ಸಿಬ್ಬಂದಿಗೆ ಮೂರನೇ ವೇತನ ಪರಿಷ್ಕರಣೆ ಆಗಬೇಕಿತ್ತು. ಆದರೆ 2017ರ ಜನವರಿಯಲ್ಲೇ ವೇತನ ಪರಿಷ್ಕರಣೆ ಆಗದಿರುವುದು ಖಂಡನೀಯವಾಗಿದ್ದು, ಇದರಿಂದ ನೌಕರರು ಮಾನಸಿಕವಾಗಿ ಕುಂದಿದ್ದಾರೆ ಎಂದು ಪ್ರತಿಭಟನಾಕಾರರು ಅಸಮಾಧಾನ ವ್ಯಕ್ತಪಡಿಸಿದರು. 

ಬಿಎಸ್ಸೆನ್ನೆಲ್‌ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಬಿಎಸ್ಸೆನ್ನೆಲ್‌ ಬೋರ್ಡ್‌ನ ಸಲಹೆಯಂತೆ ಶೇ.15 ಮೂಲ ಏರಿಕೆಯೊಂದಿಗೆ, ಮೂರನೇ ವೇತನ ಪರಿಷ್ಕರಣೆ ಆಗಬೇಕಿದೆ. ಜತೆಗೆ ಕೇಂದ್ರ ಸಚಿವರು 4ಜಿ ತರಂಗಗಳನ್ನು ಬಿಎಸ್ಸೆನ್ನೆಲ್‌ ಸಂಸ್ಥೆಗೆ ನೀಡಲು ದೂರ ಸಂಪರ್ಕ ಇಲಾಖೆ ಕಾರ್ಯದರ್ಶಿಗಳಿಗೆ ಸೂಚನೆ ನೀಡಿದ್ದು, 4ಜಿ ಸೇವೆಯನ್ನು ಶೀಘ್ರವೇ ಬಿಎಸ್ಸೆನ್ನೆಲ್‌ಗೆ ನೀಡಬೇಕಿದೆ.

ಜತೆಗೆ ಬಿಎಸ್ಸೆನ್ನೆಲ್‌ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿರುವ ನೌಕರರ ಮೂಲ ವೇತನದ ಆಧಾರದ ಮೇಲೆ ನೌಕರರ ಪಿಂಚಣಿ ದೇಣಿಗೆಯನ್ನು ಕಡಿತಗೊಳಿಸಬೇಕು. ಈ ಕುರಿತು 8 ತಿಂಗಳಿಂದ ಹೋರಾಟ ನಡೆಸುತ್ತಿದ್ದರೂ, ವೇತನ ಮತ್ತು ಪಿಂಚಣಿ ಪರಿಷ್ಕರಣೆಗಳ ಬೇಡಿಕೆ ನೆನೆಗುದಿಗೆ ಬಿದ್ದಿದೆ.

Advertisement

ಹೀಗಾಗಿ ಕೇಂದ್ರ ಸರ್ಕಾರ ಈಗಲಾದರೂ ಇತ್ತ ಗಮನವಹಿಸಿ ಬಿಎಸ್ಸೆನ್ನೆಲ್‌ ನೌಕರರ ಬೇಡಿಕೆ ಈಡೇರಿಸಿ, ಬಿಎಸ್ಸೆನ್ನೆಲ್‌ಗೆ ನೇರ ನೇಮಕಾತಿಯಾದ ನೌಕರರಿಗೆ 2ನೇ ವೇತನ ಆಯೋಗದ ಶಿಫಾರಸ್ಸಿನಂತೆ ನಿವೃತ್ತಿ ಸವಲತ್ತು ಜಾರಿಗೊಳಿಸಬೇಕೆಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಬಿಎಸ್ಸೆನ್ನೆಲ್‌ ಅಧಿಕಾರಿಗಳ ನೌಕರರ ಸಂಘದ ಜಿಲ್ಲಾ ಕಾರ್ಯದರ್ಶಿ ಗಣೇಶ್‌, ಸಂಘಟನೆ ಜಿಲ್ಲಾ ಕಾರ್ಯದರ್ಶಿ ಎನ್‌. ಸುಬ್ರಹ್ಮಣ್ಯ, ಎನ್‌ಎಫ್ಟಿಇ ನೌಕರರ ಜಿಲ್ಲಾ ಕಾರ್ಯದರ್ಶಿ ನಾಗೇಂದ್ರ, ರವಿಕುಮಾರ್‌ ಇನ್ನಿತರರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next