ಮುಂಬಯಿ: ಬಿಎಸ್‌ಕೆಬಿ ಅಸೋಸಿಯೇಶನ್ ಮುಂಬಯಿ ಗೋಕುಲ ಸಯಾನ್ ಇದರ ಯುವ ವಿಭಾಗದ ವತಿಯಿಂದ ಕ್ರೀಡೋತ್ಸವವು ವಡಾಲದ ರಾಷ್ಟ್ರೀಯ ಕನ್ನಡ ಶಿಕ್ಷಣ ಸಂಸ್ಥೆ (ಎನ್‌ಕೆಇಎಸ್) ಮೈದಾನದಲ್ಲಿ ನೆರವೇರಿತು.
ಸದಸ್ಯ ಬಾಂಧವರ 3 ವರ್ಷದ ಮೇಲ್ಪಟ್ಟ ಎಲ್ಲಾ ವಯೋಮಾನದವರಿಗೆ ಯುವ ವಿಭಾಗದ ಅಧ್ಯಕ್ಷ ಹರಿದಾಸ್ ಭಟ್ ನೇತೃತ್ವದಲ್ಲಿ ವಿವಿಧ ಸ್ಪರ್ಧೆಗಳೊಂದಿಗೆ ಕ್ರೀಡಾಕೂಟ ಆಯೋಜಿಸಲಾಗಿದ್ದು ಬಿಎಸ್‌ಕೆಬಿಎ ಅಧ್ಯಕ್ಷ ಡಾ| ಸುರೇಶ್ ಎಸ್. ರಾವ್ ಕಟೀಲು ಉದ್ಘಾಟಿಸಿದರು.
ಯುವ ವಿಭಾಗದ ಸಂಚಾಲಕ ನಾರಾಯಣ ಮೂರ್ತಿ ಹಾಗೂ ಕಾರ್ಯಕರ್ತೆ ಶ್ರೀಲಕ್ಷಿ ¾ ಉಡುಪ ಅವರ ಮುಂದಾಳತ್ವದಲ್ಲಿ ಹಲವಾರು ಆಟೋಟ ಸ್ಪರ್ಧೆಗಳು ಜರಗಿದವು. ಅಧ್ಯಕ್ಷ ಡಾ| ಸುರೇಶ್ ಎಸ್. ರಾವ್ ಕಟೀಲು, ಉಪಾಧ್ಯಕ್ಷ ವಾಮನ್ ಹೊಳ್ಳ, ಗೌರವ ಕಾರ್ಯದರ್ಶಿ ಎ. ಪಿ. ಕೆ. ಪೋತಿ ಅವರು ವಿಜೇತರಿಗೆ ಬಹುಮಾನ ವಿತರಿಸಿ ಅಭಿನಂದಿಸಿದರು.
ಇದೇ ಸಂದರ್ಭದಲ್ಲಿ ಸುರೇಶ್ ರಾವ್ ಮಾತನಾಡಿ, ಕ್ರೀಡಾ ಚಟುವಟಿಕೆಗಳು ಮನಸ್ಸಿಗೆ ಮತ್ತು ದೇಹಕ್ಕೆ ಚೈತನ್ಯ ತುಂಬುತ್ತವೆ. ಇದು ಪ್ರಕೃತಿ ಸಹಜ ಶಕ್ತಿ ತುಂಬುವ ಕಲೆಯೂ ಹೌದು. ಕ್ರೀಡೆಯಿಂದ ಆರೋಗ್ಯ ಸುಧಾರಣೆ ಜತೆಗೆ ಮನಸ್ಸುಗಳೂ ಸ್ವಸ್ಥಗೊಳ್ಳುತ್ತವೆ. ಆದುದರಿಂದ ನಾವೆಲ್ಲರೂ ಕ್ರೀಡೆಗೆ ಹೆಚ್ಚು ಮಹತ್ವ ನೀಡೋಣ ಎಂದು ಸ್ಪರ್ಧಾಳುಗಳನ್ನು ಅಭಿನಂದಿಸುತ್ತಾ ಗೋಕುಲ ಕಟ್ಟಡ ನಿರ್ಮಾಣ ಕಾರ್ಯದ ಸದ್ಯದ ಪ್ರಗತಿಯ ಬಗ್ಗೆ ವಿವರವಾಗಿ ತಿಳಿಸಿ, ಯೋಜನೆಯ ಯಶಸ್ಸಿಗೆ ಸರ್ವರ ಸಹಕಾರ ಕೋರುತ್ತಾ, ಸಣ್ಣ ಉಳಿತಾಯದ ಮೂಲಕ ನಿಧಿ ಸಂಗ್ರಹಿಸುವ ಪ್ರಯುಕ್ತ ಹಲವು ಸದಸ್ಯರಿಗೆ ಹುಂಡಿಯನ್ನು ವಿತರಿಸಿದ ಅವರು ಕ್ರೀಡಾಳುಗಳಿಗೆ ಶುಭಹಾರೈಸಿದರು.
ಶ್ರೀಲಕ್ಷ್ಮೀ ಉಡುಪ ವಿಜೇತರ ಯಾದಿಯನ್ನು ವಾಚಿಸಿದರು. ವಿಜೇತ ಬಾಲಕ ಶ್ರೀಕೃಷ್ಣ ಉಡುಪ ಸೇರಿದಂತೆ ಇತರ ವಿಜೇತರೂ, ಹಲವಾರು ಸದಸ್ಯರು ತಮ್ಮ ಬಹುಮಾನದ ಮೊತ್ತವನ್ನು ನಿರ್ಮಾಣ ಹಂತದಲ್ಲಿರುವ ಗೋಕುಲದ ಪುನರ್ ನಿರ್ಮಾಣ ಯೋಜನೆಗೆ ದೇಣಿಗೆಯನ್ನಿತ್ತು ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ಹರಿದಾಸ್ ಭಟ್ ಹಾಗೂ ಗುರುರಾಜ್ ಭಟ್ ಆಟೋಟ ಸ್ಪರ್ಧೆಗಳನ್ನು ನಿರ್ವಹಿಸಿದರು. ಕಾರ್ಯಕಾರಿ ಸಮಿತಿಯ ಸದಸ್ಯರಾದ ಪ್ರಶಾಂತ್ ಹೆರ್ಲೆ, ಉಮೇಶ್ ರಾವ್, ಸಹನಾ ಪೋತಿ, ಪ್ರೇಮಾ ಬಿ. ರಾವ್. ಸಪ್ನಾ ಭಟ್, ಚಂದ್ರಾವತಿ ರಾವ್, ಪಿ. ಸಿ. ಎನ್. ರಾವ್, ಕುಸುಮ್ ಶ್ರೀನಿವಾಸ್, ಶಶಿಧರ್ ರಾವ್, ಶಾಂತಿಲಕ್ಷ್ಮೀ ಉಡುಪ, ಹರಿಶ್ಚಂದ್ರ ರಾವ್, ಪ್ರಸಾದ್ ನಿಂಜೂರ್ ಹಾಗೂ ಯುವ ವಿಭಾಗದ ಕಾರ್ಯಕರ್ತರು ಉಪಸ್ಥಿತರಿದ್ದು ಸಹಕರಿಸಿದರು. ಎ. ಪಿ. ಕೆ. ಪೋತಿ ವಂದಿಸಿದರು. ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕ್ರೀಡಾಸ್ಫೂರ್ತಿ ಮೆರೆದರು.