ನವದೆಹಲಿ:ಲಡಾಖ್ ನ ಗಾಲ್ವಾನ್ ಕಣಿವೆ ಪ್ರದೇಶಕ್ಕೆ ಸಂಬಂಧಿಸಿದಂತೆ ಭಾರತ, ಚೀನಾ ನಡುವೆ ಸಂಘರ್ಷ ಮುಂದುವರಿದಿರುವ ನಡುವೆಯೇ ಶನಿವಾರ ಜಮ್ಮು-ಕಾಶ್ಮೀರದ ಅಂತಾರಾಷ್ಟ್ರೀಯ ಗಡಿ ಸಮೀಪ ಪಾಕಿಸ್ತಾನದ ಡ್ರೋನ್ ಅನ್ನು ಭಾರತೀಯ ಭದ್ರತಾ ಪಡೆ ಹೊಡೆದುರುಳಿಸಿರುವ ಘಟನೆ ನಡೆದಿದೆ.
ಗಡಿಯಲ್ಲಿ ಪಾಕ್ ನ ಡ್ರೋನ್ ಅನ್ನು ಹೊಡೆದುರುಳಿಸುವ ಮೂಲಕ ಗಡಿ ಭಾಗದಲ್ಲಿ ಮದ್ದು ಗುಂಡು, ಶಸ್ತ್ರಾಸ್ತ್ರಗಳನ್ನು ಕೆಳಕ್ಕೆ ಹಾಕುವ ಪಾಕ್ ಐಎಸ್ ಐನ ಸಂಚು ಮತ್ತೊಮ್ಮೆ ವಿಫಲಗೊಂಡಂತಾಗಿದೆ ಎಂದು ವರದಿ ತಿಳಿಸಿದೆ.
ವರದಿಯ ಪ್ರಕಾರ, ಕಥುವಾ ಜಿಲ್ಲೆಯ ಹೀರಾನಗರ್ ತಾಲೂಕಿನ ರಥುವಾ ಗ್ರಾಮದ ಬಳಿ ಪಾಕ್ ನ ಡ್ರೋನ್ ಅನ್ನು ಭಾರತೀಯ ಸೇನಾ ಪಡೆ ಹೊಡೆದುರುಳಿಸಿದೆ ಎಂದು ತಿಳಿಸಿದೆ.
ರಥುವಾ ಪ್ರದೇಶದ ಹೀರಾನಗರ್ ಸೆಕ್ಟರ್ ಬಳಿ ಪಾಕಿಸ್ತಾನದ ಡ್ರೋನ್ ಹಾರಾಡುತ್ತಿರುವುದನ್ನು ಬಿಎಸ್ ಎಫ್ 19 ಬೆಟಾಲಿಯನ್ ಗಮನಕ್ಕೆ ಬಂದಿತ್ತು. ಕೂಡಲೇ ಎಂಟು ಸುತ್ತುಗಳ ಗುಂಡು ಹಾರಿಸುವ ಮೂಲಕ ಡ್ರೋನ್ ಅನ್ನು ನೆಲಕ್ಕೆ ಉರುಳಿಸಲಾಯ್ತು ಎಂದು ವರದಿ ವಿವರಿಸಿದೆ. ಈ ವೇಳೆ ಭಾರತೀಯ ಬಿಎಸ್ ಎಫ್ ಪಡೆ ಒಂದು ಎಂ-4 ಅಮೆರಿಕ ನಿರ್ಮಿತ ರೈಫಲ್, 2 ಮ್ಯಾಗಝೀನ್ಸ್, 60 ಸುತ್ತುಗಳ ಗುಂಡು, 7 ಗ್ರೆನೇಡ್ಸ್ ವಶಪಡಿಸಿಕೊಂಡಿದೆ ಎಂದು ತಿಳಿಸಿದೆ.