ಮುಂಬಯಿ : ಜಾಗತಿಕ ಮಾರುಕಟ್ಟೆಗಳಲ್ಲಿನ ಧನಾತ್ಮಕ ಪ್ರವೃತ್ತಿಯನ್ನು ಅನುಸರಿಸಿ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಸೋಮವಾರದ ಆರಂಭಿಕ ವಹಿವಾಟಿನಲ್ಲಿ 195 ಅಂಕಗಳ ಜಿಗಿತವನ್ನು ದಾಖಲಿಸಿತು. ದೇಶೀಯ ಸಾಂಸ್ಥಿಕ ಹೂಡಿಕೆದಾರರು ಮುಂಚೂಣಿ ಶೇರುಗಳ ಭರಾಟೆ ಖರೀದಿಯಲ್ಲಿ ತೊಡಗಿಕೊಂಡ ಕಾರಣ ಮುಂಬಯಿ ಶೇರು ಪೇಟೆಯಲ್ಲಿ ತೇಜಿ ಕಂಡು ಬಂತು.
ಇಂದಿನ ಆರಂಭಿಕ ವಹಿವಾಟಿನಲ್ಲಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ 10,300 ಅಂಕಗಳ ಮಟ್ಟವನ್ನು ದಾಟಿರುವುದು ಇಂದಿನ ವಿಶೇಷವೆನಿಸಿತು.
ಇಂದು ಬೆಳಗ್ಗೆ 11.50ರ ಹೊತ್ತಿಗೆ ಸೆನ್ಸೆಕ್ಸ್ 128.30 ಅಂಕಗಳ ಏರಿಕೆಯನ್ನು ಕಾಯ್ದುಕೊಂಡು 33,378.33 ಅಂಕಗಳ ಮಟ್ಟದಲ್ಲೂ, ನಿಫ್ಟಿ 35.80 ಅಂಕಗಳ ಏರಿಕೆಯೊಂದಿಗೆ 10,301.50 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ಭಾರ್ತಿ ಏರ್‌ಟೆಲ್, ಐಟಿಸಿ, ಮಾರುತಿ ಸುಜುಕಿ, ರಿಲಯನ್ಸ್, ಎಚ್‌ಡಿಎಫ್ಸಿ ಶೇರುಗಳು ಇಂದಿನ ಆರಂಭಿಕ ವಹಿವಾಟಿನಲ್ಲಿ ಅತ್ಯಂತ ಕ್ರಿಯಾಶೀಲವಾಗಿದ್ದವು.
ಈಶರ್ ಮೋಟರ್, ಅರಬಿಂದೋ ಫಾರ್ಮಾ, ವಿಪ್ರೋ, ಐಟಿಸಿ, ಅಲ್‌ಟ್ರಾ ಟೆಕ್ ಸಿಮೆಂಟ್ ಶೇರುಗಳು ಟಾಪ್ ಗೇನರ್ ಎನಿಸಿಕೊಂಡವು; ಅದಾನಿ ಪೋರ್ಟ್, ಹಿಂಡಾಲ್ಕೊ, ಸಿಪ್ಲಾ, ಎನ್‌ಟಿಪಿಸಿ, ಗೇಲ್ ಶೇರುಗಳು ಹಿನ್ನಡೆಗೆ ಗುರಿಯಾದವು.