ಮುಂಬಯಿ : ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ನಿರಂತರ ಎರಡನೇ ದಿನವೂ ಇಂದು ಮಂಗಳವಾರ ಕುಸಿದಿದೆ. ನಿನ್ನೆ ಸೋಮವಾರ 468 ಅಂಕಗಳ ನಷ್ಟಕ್ಕೆ ಗುರಿಯಾಗಿದ್ದ ಸೆನ್ಸೆಕ್ಸ್ ಇಂದು 509.04 ಅಂಕಗಳ ನಷ್ಟವನ್ನು ಅನುಭವಿಸಿ ದಿನದ ವಹಿವಾಟನ್ನು 37,413.13 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 150.60 ಅಂಕಗಳ ಕುಸಿತಕ್ಕೆ ಗುರಿಯಾಗಿ ದಿನದ ವಹಿವಾಟನ್ನು 11,287.50 ಅಂಕಗಳ ಮಟ್ಟದಲ್ಲಿ ನಿರಾಶಾದಾಯಕವಾಗಿ ಕೊನೆಗೊಳಿಸಿತು.
ಅಮೆರಿಕ ಮತ್ತು ಚೀನ ನಡುವಿನ ವಾಣಿಜ್ಯ ಸಮರ ತಾರಕಕ್ಕೆ ಏರುವುದೆಂಬ ಭೀತಿ ಜಾಗತಿಕ ಶೇರು ಮಾರುಕಟ್ಟೆಗಳನ್ನು ಆವರಿಸಿಕೊಂಡಿರುವಂತೆಯೇ ಮುಂಬಯಿ ಶೇರು ಪೇಟೆ ಕೂಡ ಅದೇ ಆತಂಕಕ್ಕೆ ಗುರಿಯಾಯಿತು.
ಇಂದಿನ ವಹಿವಾಟಿನ ಪ್ರಮುಖ ಲೂಸರ್‌ಗಳು : ಟಿಸಿಎಸ್, ಕೋಟಕ್ ಬ್ಯಾಂಕ್, ಅದಾನಿ ಪೋರ್ಟ್, ಐಸಿಐಸಿಐ ಬ್ಯಾಂಕ್, ಎಚ್ ಡಿ ಎಫ್ ಸಿ ಬ್ಯಾಂಕ್, ಎಸ್ ಬ್ಯಾಂಕ್, ಭಾರ್ತಿ ಏರ್ ಟೆಲ್, ಐಟಿಸಿ, ಟಾಟಾ ಮೋಟರ್, ಹೀರೋ ಮೋಟೋ ಕಾರ್ಪ್, ಪವರ್ ಗ್ರಿಡ್, ಟಾಟಾ ಸ್ಟೀಲ್ ಶೇ.3.46ರಷ್ಟು ಕುಸಿದವು.
ಡಾಲರ್ ಎದುರು ರೂಪಾಯಿ ಇಂದು 28 ಪೈಸೆಗಳ ನಷ್ಟದೊಂದಿಗೆ 72.73 ಕ್ಕೆ ಕುಸಿಯುವ ಮೂಲಕ ಹೊಸ ತಳಮಟ್ಟವನ್ನು ಕಂಡುಕೊಂಡಿತು. ಕಚ್ಚಾ ತೈಲ ಬೆಲೆ ಕೂಡ ಬ್ಯಾರಲ್‌ಗೆ ಇಂದು 78 ಡಾಲರ್ ಮಟ್ಟವನ್ನು ದಾಟಿತು.
ನಿನ್ನೆ ಸೋಮವಾರದ ಸೆನ್ಸೆಕ್ಸ್ ಕುಸಿತದಲ್ಲಿ ಹೂಡಿಕೆದಾರರು 1.96 ಲಕ್ಷ ಕೋಟಿ ರೂ.ನಷ್ಟಕ್ಕೆ ಗುರಿಯಾಗಿದ್ದರು. ಇದೇ ರೀತಿ ಬಿಎಸ್‌ಇ ಲಿಸ್ಟೆಡ್ ಶೇರುಗಳ ಮಾರುಕಟ್ಟೆ ಮೌಲ್ಯ 1,96.130.84 ಕೋಟಿ ರೂ ಇದ್ದಲ್ಲಿಂದ 1,55,43,657 ಕೋಟಿ ರೂ. ಮಟ್ಟಕ್ಕೆ ಇಂದು ಮಂಗಳವಾರ ಕುಸಿಯಿತು.