ಮುಂಬಯಿ : ಚೀನ ಪ್ರಕಟಿಸಿರುವ ಆರ್ಥಿಕ ಪ್ರಗತಿ ಅಂಕಿ ಅಂಶಗಳು ನಿರಾಶಾದಾಯಕವಾಗಿರುವುದರ ಪ್ರತಿಫಲನ ಜಾಗತಿಕ ಶೇರು ಮಾರುಕಟ್ಟೆಗಳಲ್ಲಿ ಕಂಡು ಬಂದಿರುವುದನ್ನು ಅನುಸರಿಸಿ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು 363.05 ಅಂಕಗಳ ಕುಸಿತಕ್ಕೆ ಗುರಿಯಾಗಿ ದಿನದ ವಹಿವಾಟನ್ನು 35,891.52 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 117.60 ಅಂಕಗಳ ನಷ್ಟಕ್ಕೆ ಗುರಿಯಾಗಿ ದಿನದ ವಹಿವಾಟನ್ನು 10,792.50 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಮುಂಬಯಿ ಶೇರು ಪೇಟೆ ಇಂದು ಒಂದು ಹಂತದಲ್ಲಿ 500ಕ್ಕೂ ಅಧಿಕ ಅಂಕಗಳ ನಷ್ಟಕ್ಕೆ ಗುರಿಯಾಗಿತ್ತು. ಆದರೆ ದಿನದ ವಹಿವಾಟಿನ ಅಂತ್ಯದಲ್ಲಿ ಸ್ವಲ್ಪ ಮಟ್ಟಿನ ಚೇತರಿಕೆಯನ್ನು ಕಂಡು ನಷ್ಟದ ಪ್ರಮಾಣವನ್ನು ಕಡಿಮೆ ಮಾಡಿಕೊಂಡಿತು.
ಇಂದಿನ ವಹಿವಾಟಿನ ಅತೀ ದೊಡ್ಡ ಲೂಸರ್ ಗಳೆನಿಸಿಕೊಂಡ ವೇದಾಂತ, ಟಾಟಾ ಸ್ಟೀಲ್, ಮಹೀಂದ್ರ, ಟಾಟಾ ಮೋಟರ್, ಮಾರುತಿ, ಹೀರೋ ಮೋಟೋ ಕಾರ್ಪ್, ಪವರ್ ಗ್ರಿಡ್, ಭಾರ್ತಿ ಏರ್‌ಟೆಲ್, ಎಸ್‌ಬಿಐ ಮತ್ತು ಕೋಲ್ ಇಂಡಿಯಾ ಶೇ.4.48ರ ವರೆಗಿನ ನಷ್ಟಕ್ಕೆ ಗುರಿಯಾದವು.
ಇದೇ ವೇಳೆ ಗೇನರ್‌ಗಳ ಪೈಕಿ ಸನ್ ಫಾರ್ಮಾ, ಏಶ್ಯನ್ ಪೇಂಟ್, ಇನ್‌ಫೋಸಿಸ್, ಎಸ್ ಬ್ಯಾಂಕ್ ಮತ್ತು ಐಸಿಐಸಿಐ ಬ್ಯಾಂಕ್ ಶೇರುಗಳು ಶೇ.1.66ರ ಏರಿಕೆಯನ್ನು ಕಂಡವು.
ಮುಂಬಯಿ ಶೇರು ಪೇಟೆಯಲ್ಲಿ ಇಂದು ಒಟ್ಟು 2,717 ಕಂಪೆನಿಗಳು ವಹಿವಾಟಿಗೆ ಒಳಪಟ್ಟವು; ಈ ಪೈಕಿ 950 ಕಂಪೆನಿಗಳು ಮುನ್ನಡೆ ಸಾಧಿಸಿದವು; 1,601 ಕಂಪೆನಿಗಳು ಹಿನ್ನಡೆಗೆ ಗುರಿಯಾದವು; 166 ಕಂಪೆನಿಗಳ ಶೇರು ಧಾರಣೆಯಲ್ಲಿ ಯಾವುದೇ ವ್ಯತ್ಯಾಸ ಕಂಡು ಬರಲಿಲ್ಲ.