ಮುಂಬಯಿ: ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ನಿರಂತರ ಎರಡನೇ ದಿನದ ಏರಿಕೆಯಾಗಿ ಇಂದು ಬುಧವಾರ 629.06 ಅಂಕಗಳ ಭರ್ಜರಿ ಜಿಗಿತವನ್ನು ದಾಖಲಿಸಿ ದಿನದ ವಹಿವಾಟನ್ನು 35,779.07 ಅಂಕಗಳ ಮಟ್ಟದಲ್ಲಿ ಆಶಾದಾಯಕವಾಗಿ ಕೊನೆಗೊಳಿಸಿತು.
ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 188.45 ಅಂಕಗಳ ಉತ್ತಮ ಏರಿಕೆಯನ್ನು ದಾಖಲಿಸಿ ದಿನದ ವಹಿವಾಟನ್ನು 10,737.60 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಊರ್ಜಿತ್ ಪಟೇಲ್ ಹಠಾತ್ ರಾಜೀನಾಮೆಯಿಂದ ತೆರವಾಗಿದ್ದ ಆರ್‌ಬಿಐ ಗವರ್ನರ್ ಹುದ್ದೆಗೆ ಕೇಂದ್ರ ಸರಕಾರ ಒಡನೆಯೇ ಶಕ್ತಿಕಾಂತ್ ದಾಸ್ ಅವರನ್ನು ನೇಮಿಸಿರುವುದನ್ನು ಶೇರು ಮಾರುಕಟ್ಟೆ ದೊಡ್ಡ ರೀತಿಯಲ್ಲಿ ಸ್ವಾಗತಿಸಿತು.
ಇಂದಿನ ಟಾಪ್ ಗೇನರ್‌ಗಳಲ್ಲಿ ಶೇ.7.01ರ ಏರಿಕೆಯನ್ನು ದಾಖಲಿಸಿದ ಹೀರೋ ಮೋಟೋ ಕಾರ್ಪ್ ಪ್ರಮುಖ ಗೇನರ್ ಎನಿಸಿಕೊಂಡಿತು. ಉಳಿದಂತೆ ಭಾರ್ತಿ ಏರ್‌ಟೆಲ್, ಎಸ್ ಬ್ಯಾಂಕ್, ಅದಾನಿ ಪೋರ್ಟ್, ಟಾಟಾ ಸ್ಟೀಲ್, ಬಜಾಜ್ ಆಟೋ ಶೇರುಗಳು ಉತ್ತಮ ಮುನ್ನಡೆ ದಾಖಲಿಸಿದವು.
ಮುಂಬಯಿ ಶೇರು ಪೇಟೆಯಲ್ಲಿ ಇಂದು ಒಟ್ಟು 2,703 ಕಂಪೆನಿಗಳು ವಹಿವಾಟಿಗೆ ಒಳಪಟ್ಟವು; ಈ ಪೈಕಿ 1,901 ಕಂಪೆನಿಗಳು ಮುನ್ನಡೆ ಸಾಧಿಸಿದವು; 678 ಕಂಪೆನಿಗಳು ಹಿನ್ನಡೆಗೆ ಗುರಿಯಾದವು; 124 ಕಂಪೆನಿಗಳ ಶೇರು ಧಾರಣೆಯಲ್ಲಿ ಯಾವುದೇ ವ್ಯತ್ಯಾಸ ಕಂಡು ಬರಲಿಲ್ಲ.