ಮುಂಬಯಿ : ಅಂತಾರಾಷ್ಟ್ರೀಯ ಕಚ್ಚಾ ತೈಲ ಬೆಲೆ ಏರಿಕೆಯೊಂದಿಗೆ ವಿದೇಶಿ ಬಂಡವಾಳದ ನಿರಂತರ ಹೊರ ಹರಿವಿನಿಂದ ಕಳವಳಗೊಂಡಿರುವ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಬುಧವಾರದ ವಹಿವಾಟನ್ನು 306 ಅಂಕಗಳ ಭಾರಿ ನಷ್ಟದೊಂದಿಗೆ 34,344.91 ಅಂಕಗಳ ಮಟ್ಟಕ್ಕೆ ಕುಸಿದು ಒಂದು ತಿಂಗಳ ಕನಿಷ್ಠ ಮಟ್ಟವನ್ನು ದಾಖಲಿಸಿತು.
ಏರುತ್ತಿರುವ ಪೆಟ್ರೋಲ್ ಮತ್ತು ಡೀಸಿಲ್ ದರಗಳ ಹೊರೆಯನ್ನು ಹಂಚಿಕೊಳ್ಳುವಂತೆ ಸರಕಾರ ಕೇಳಿಕೊಂಡಿರುವ ಕಾರಣಕ್ಕೆ ಸರಕಾರಿ ಒಡೆತನದ ತೈಲ ಮಾರಾಟ ಕಂಪೆನಿಗಳಾಗಿರುವ ಎಚ್‌ಪಿಸಿಎಲ್, ಬಿಪಿಸಿಎಲ್,ಐಓಸಿ, ಒಎನ್‌ಜಿಸಿ ಮತ್ತು ಓಐಎಲ್ ಕಂಪೆನಿಗಳ ಶೇರುಗಳ ಧಾರಣೆ ಇಂದಿನ ವಹಿವಾಟಿನಲ್ಲಿ ಕುಸಿದವು.
ಎಪ್ರಿಲ್ 19ರಂದು ಸೆನ್ಸೆಕ್ಸ್ 34,427.29 ಅಂಕಗಳ ತಳ ಮಟ್ಟವನ್ನು ಕಂಡ ಬಳಿಕದಲ್ಲಿ ಸೆನ್ಸೆಕ್ಸ್ ಇಂದು ಕಂಡಿರುವ 34,302.89 ಅಂಕಗಳ ಮಟ್ಟವು ಕಳೆದ ಒಂದು ತಿಂಗಳಿಗೂ ಮೀರಿದ ಅವಧಿಯಲ್ಲಿ ದಾಖಲಿಸಿರುವ ಕನಿಷ್ಠ ಮಟ್ಟವಾಗಿದೆ.
ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ ಇಂದು 106.35 ಅಂಕಗಳ ಭಾರೀ ಕುಸಿತವನ್ನು ಕಂಡು ದಿನದ ವಹಿವಾಟನ್ನು 10,430.35 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ವಿದೇಶಿ ಹೂಡಿಕೆದಾರರು ನಿನ್ನೆ ಮಂಗಳವಾರ 1,651.63 ಕೋಟಿ ರೂ. ಶೇರುಗಳನ್ನು ಮಾರಿದ್ದರು. ವ್ಯತಿರಿಕ್ತವಾಗಿ ದೇಶೀಯ ಹೂಡಿಕೆದಾರರು 1,496.83 ಕೋಟಿ ರೂ. ಶೇರುಗಳನ್ನು ಖರೀದಿಸಿದ್ದರು.