ಮುಂಬಯಿ : ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಸೋಮವಾರದ ಆರಂಭಿಕ ವಹಿವಾಟಿನಲ್ಲಿ 150 ಅಂಕಗಳ ಏರಿಕೆಯನ್ನು ಸಾಧಿಸುವ ಮೂಲಕ ಈ ಹಿಂದಿನ ಎಲ್ಲ ಎತ್ತರಗಳ ದಾಖಲೆಯನ್ನು ಮುರಿದು 37,496.80 ಅಂಕಗಳ ಹೊಸ ಎತ್ತರದ ಮಟ್ಟವನ್ನು ತಲುಪುವ ಸಾಧನೆ ಮಾಡಿತು.
ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 11.300 ಅಂಕಗಳ ಹೊಸ ಎತ್ತರದ ದಾಖಲೆ ಮಟ್ಟವನ್ನು ತಲುಪಿದ ಸಾಧನೆ ಮಾಡಿತು.
ಕಳೆದ ಐದು ದಿನಗಳ ವಹಿವಾಟಿನಲ್ಲಿ ಸೆನ್ಸೆಕ್ಸ್ ಒಟ್ಟು 840.48 ಅಂಕಗಳನ್ನು ಸಂಪಾದಿಸಿರವುದು ಗಮನಾರ್ಹವಾಗಿದೆ. ಅಂತೆಯೇ ಕಳೆದ ಶುಕ್ರವಾರದ ವಹಿವಾಟಿನಲ್ಲಿ ಸೆನೆಕ್ಸ್ ಸಾರ್ವಕಾಲಿಕ ದಾಖಲೆಯ ಎತ್ತರವಾಗಿ 37,336.85 ಅಂಕಗಳ ಮಟ್ಟವನ್ನು ತಲುಪಿತ್ತು.
ಆರ್ ಬಿ ಐ ದ್ವೆ„ಮಾಸಿಕ ನೀತಿ ನಿರ್ಧಾರದ ಸಭೆಯ ಇಂದು ನಡೆಯವುದಕ್ಕೆ ಮುನ್ನವೇ ಸೆನ್ಸೆಕ್ಸ್ ಮತ್ತು ನಿಫ್ಟಿ ಈ ಹೊಸ ದಾಖಲೆಗಳನ್ನು ಮಾಡಿರುವುದು ಗಮನಾರ್ಹವಾಗಿದೆ.
ಹಾಗಿದ್ದರೂ ಬೆಳಗ್ಗೆ 11 ಗಂಟೆಯ ಸುಮಾರಿಗೆ ತನ್ನ ಬೆಳಗ್ಗಿನ ಏರಿಕೆಯನ್ನು ಬಿಟ್ಟುಕೊಟ್ಟು 30.85 ಅಂಕಗಳ ನಷ್ಟದೊಂದಿಗೆ 37,306.00 ಅಂಕಗಳ ಮಟ್ಟದಲ್ಲೂ, ನಿಫ್ಟಿ 11 ಅಂಕಗಳ ನಷ್ಟದೊಂದಿಗೆ 11,267.40 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ಐಸಿಐಸಿಐ ಬ್ಯಾಂಕ್, ರಿಲಯನ್ಸ್, ಎಸ್‌ಬಿಐ, ಎಕ್ಸಿಸ್ ಬ್ಯಾಂಕ್, ಮಾರುತಿ ಸುಜುಕಿ ಶೇರುಗಳು ಇಂದಿನ ಆರಂಭಿಕ ವಹಿವಾಟಿನಲಿ ಅತೀ ಹೆಚ್ಚು ಕ್ರಿಯಾಶೀಲವಾಗಿದ್ದವು.
ಬೆಳಗ್ಗಿನ ವಹಿವಾಟಿನ ಟಾಪ್ ಗೇನರ್‌ಗಳು : ಎಸ್‌ಬಿಐ, ಎಚ್‌ಪಿಸಿಎಲ್, ಐಡಿಯಾ ಸೆಲ್ಯುಲರ್, ವೇದಾಂತ, ಒಎನ್‌ಜಿಸಿ;
ಟಾಪ್ ಲೂಸರ್‌ಗಳು: ವಿಪ್ರೋ, ಅದಾನಿ ಪೋರ್ಟ್, ಬಜಾಜ್ ಫಿನಾನ್ಸ್, ಇನ್‌ಫೋಸಿಸ್, ಲಾರ್ಸನ್.
ಡಾಲರ್ ಎದುರು ರೂಪಾಯಿ ಇಂದು ಸೋಮವಾರದ ಆರಂಭಿಕ ವಹಿವಾಟಿನಲ್ಲಿ 15 ಪೈಸೆಯಷ್ಟು ಕುಗ್ಗಿ 68.80 ರೂ. ಮಟ್ಟದಲ್ಲಿ ವ್ಯವಹಾರ ನಿತರವಾಗಿತ್ತು.