ಮುಂಬಯಿ : ಸುಮಾರು 60 ಸೇವೆ ಮತ್ತು ಸರಕುಗಳ ಮೇಲಿನ ತೆರಿಗೆಯನ್ನು ತಗ್ಗಿಸಲು ಇಂದು ನಡೆಯುತ್ತಿರುವ ನಿರ್ಣಾಯಕ ಜಿಎಸ್‌ಟಿ ಮಂಡಳಿ ಸಭೆ ತೀರ್ಮಾನಿಸಲಿದೆ ಎಂಬ ಧನಾತ್ಮಕ ಸುಳಿವನ್ನು ಪಡೆದ ಮುಂಬಯಿ ಶೇರು ಮಾರುಕಟ್ಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಶುಕ್ರವಾರದ ವಹಿವಾಟನ್ನು, ಎರಡು ವಾರಗಳ ಗರಿಷ್ಠ ಮಟ್ಟವಾಗಿ, 222.19 ಅಂಕಗಳ ಮುನ್ನಡೆಯೊಂದಿಗೆ 31,814.22 ಅಂಕಗಳ ಮಟ್ಟದಲ್ಲಿ ಆಶಾದಾಯಕವಾಗಿ ಕೊನೆಗೊಳಿಸಿತು.
ಕಳೆದ ಎರಡು ದಿನಗಳ ವಹಿವಾಟಿನಲ್ಲಿ ಸೆನ್ಸೆಕ್ಸ್ 79.68 ಅಂಕಗಳ ನಷ್ಟವನ್ನು ಅನುಭವಿಸಿತ್ತು.
ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ ಕೂಡ ಇಂದು 91 ಅಂಕಗಳ ಜಿಗಿತವನ್ನು ದಾಖಲಿಸಿ ದಿನದ ವಹಿವಾಟನ್ನು 9,979.70 ಅಂಕಗಳ ಮಟ್ಟದಲ್ಲಿ ಕೊನೆಗೊಳಿಸಿತು.
ಸೆನ್ಸೆಕ್ಸ್ ಮಟ್ಟಿಗೆ ಇಂದಿನದು ಸೆ.22ರ ಬಳಿಕದ (31,922.44 ಅಂಕ) ಗರಿಷ್ಠ ಮಟ್ಟವಾಗಿರುವುದು ಗಮನಾರ್ಹವಾಗಿದೆ. ವಾರದ ನೆಲೆಯಲ್ಲಿ ಹೇಳುವುದಾದರೆ ಸೆನ್ಸೆಕ್ಸ್ 530.50 ಅಂಕಗಳನ್ನು ಸಂಪಾದಿಸಿದೆಯಾದರೆ ನಿಫ್ಟಿ 191.10 ಅಂಕಗಳನ್ನು ಸಂಪಾದಿಸಿದೆ.
ಇಂದಿನ ವಹಿವಾಟಿನ ಟಾಪ್ ಗೇನರ್‌ಗಳು : ಗೇಲ್, ಟಾಟಾ ಸ್ಟೀಲ್, ಹಿಂಡಾಲ್ಕೊ, ಸನ್ ಫಾರ್ಮಾ, ಬಜಾಜ್ ಫೈನಾನ್ಸ್. ಟಾಪ್ ಲೂಸರ್‌ಗಳು : ಹೀರೋ ಮೋಟೋ ಕಾರ್ಪ್, ಭಾರ್ತಿ ಇನ್‌ಫ್ರಾಟೆಲ್, ಎಚ್ ಡಿ ಎಫ್ ಸಿ, ಡಾ. ರೆಡ್ಡಿ, ಇಂಡಸ್ ಇಂಡ್ ಬ್ಯಾಂಕ್.