ಮುಂಬಯಿ : ಏಶ್ಯನ್ ಶೇರು ಪೇಟೆಗಳಲ್ಲಿ ಮಿಶ್ರ ಪ್ರತಿಕ್ರಿಯೆ ತೋರಿ ಬಂದಿರುವ ಹೊರತಾಗಿಯೂ ದೇಶೀಯ ಸಾಂಸ್ಥಿಕ ಸಂಸ್ಥೆಗಳು ಖರೀದಿಯಲ್ಲಿ ತೋರಿದ ಆಸಕ್ತಿಯ ಫಲವಾಗಿ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಶುಕ್ರವಾರದ ಆರಂಭಿಕ ವಹಿವಾಟಿನಲ್ಲಿ 101 ಅಂಕಗಳ ಜಿಗಿತವನ್ನು ದಾಖಲಿಸಿತು.
ನಿನ್ನೆ ಗುರುವಾರದ ವಹಿವಾಟನ್ನು ಸೆನ್ಸೆಕ್ಸ್ ಕೇವಲ 0.77 ಅಂಕಗಳ ಅತ್ಯಲ್ಪ ಮುನ್ನಡೆಯೊಂದಿಗೆ ಕೊನೆಗೊಳಿಸಿ ನಿರಾಶೆ ಉಂಟು ಮಾಡಿತ್ತು.
ಇಂದು ಬೆಳಗ್ಗಿನ 10.40ರ ಹೊತ್ತಿಗೆ ಸೆನ್ಸೆಕ್ಸ್ 75.15 ಅಂಕಗಳ ಮುನ್ನಡೆಯನ್ನು ಕಾಯ್ದುಕೊಂಡು 31,737.89 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 28.80 ಅಂಕಗಳ ಮುನ್ನಡೆಯೊಂದಿಗೆ 9,958.70 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ವೇದಾಂತ, ಲಾರ್ಸನ್, ಟಾಟಾ ಸ್ಟೀಲ್, ರಿಲಯನ್ಸ್, ಹಿಂಡಾಲ್ಕೊ ಶೇರುಗಳು ಅತ್ಯಂತ ಕ್ರಿಯಾಶೀಲವಾಗಿದ್ದವು.
ಟಾಪ್ ಗೇನರ್‌ಗಳಾಗಿ ಲಾರ್ಸನ್, ವೇದಾಂತ, ಹಿಂಡಾಲ್ಕೋ, ಟಾಟಾ ಸ್ಟೀಲ್ ಮತ್ತು ಗೇಲ್ ಶೇರುಗಳು ಕಾಣಿಸಿಕೊಂಡರೆ ಟಾಪ್ ಲೂಸರ್‌ಗಳಾಗಿ ಬಿಪಿಸಿಎಲ್, ಸನ್ ಫಾರ್ಮಾ, ಮಹೀಂದ್ರ, ಡಾ. ರೆಡ್ಡಿ ಮತ್ತು ಬಜಾಜ್ ಆಟೋ ಶೇರುಗಳು ಕಾಣಿಸಿಕೊಂಡವು.