ಮುಂಬಯಿ : ಜಾಗತಿಕ ಶೇರು ಪೇಟೆಗಳಲ್ಲಿ ಕಂಡು ಬಂದ ಭಾರೀ ತೇಜಿಯನ್ನು ಅನುಸರಿಸಿದ ಮುಂಬಯಿ ಶೇರು ಮಾರುಕಟ್ಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಗುರುವಾರದ ಆರಂಭಿಕ ವಹಿವಾಟಿನಲ್ಲಿ 350ಕ್ಕೂ ಅಧಿಕ ಅಂಕಗಳ ಜಿಗಿತವನ್ನು ದಾಖಲಿಸಿತು.
ಕಳೆದ ಮೂರು ದಿನಗಳ ನಿರಂತರ ಸೋಲಿನ ಹಾದಿಯಲ್ಲಿ ಸಾಗಿ ಬಂದಿದ್ದ ಮುಂಬಯಿ ಶೇರು ಪೇಟೆ 180 ಅಂಕಗಳ ನಷ್ಟವನ್ನು ಅನುಭವಿಸಿತ್ತು.
ಇಂದು ಬೆಳಗ್ಗೆ 10.40ರ ಹೊತ್ತಿಗೆ ಸೆನ್ಸೆಕ್ಸ್ 279.79 ಅಂಕಗಳ ಮುನ್ನಡೆಯನ್ನು ಕಾಯ್ದುಕೊಂಡು 35,929.73 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಶೇರು ಪೇಟೆಯ ನಿಫ್ಟಿ ಸೂಚ್ಯಂಕ 76.70 ಅಂಕಗಳ ಮುನ್ನಡೆಯೊಂದಿಗೆ 10,806.60 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ಇಂದಿನ ಆರಂಭಿಕ ವಹಿವಾಟಿನಲ್ಲಿ ಡಾಲರ್ ಎದುರು ರೂಪಾಯಿ 19 ಪೈಸೆಗಳ ಕುಸಿತಕ್ಕೆ ಗುರಿಯಾಗಿ 70.25 ರೂ. ಮಟ್ಟದಲ್ಲಿ ವ್ಯವಹಾರ ನಿರತವಾಗಿತ್ತು.
ಈ ವರ್ಷ ನಾಲ್ಕು ಬಾರಿ ಬಡ್ಡಿ ದರ ಏರಿಸುವ ಮೂಲಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಕೆಂಗಣ್ಣಿಗೆ ಗುರಿಯಾಗಿದ್ದ ಫೆಡರಲ್ ರಿಸರ್ವ್ ಬ್ಯಾಂಕಿನ ಅಧ್ಯಕ್ಷರನ್ನು ತಾನು ಹುದ್ದೆಯಿಂದ ಕಿತ್ತು ಹಾಕುವುದಿಲ್ಲವೆಂದು ಟ್ರಂಪ್ ಆಡಳಿತೆ ಭರವಸೆ ನೀಡಿದುದನ್ನು ಅನುಸರಿಸಿ ಅಮೆರಿಕ ಶೇರು ಮಾರುಕಟ್ಟೆಯಲ್ಲಿ ಭರಾಟೆಯ ಖರೀದಿ ಕಂಡು ಬಂದಿತು. ಅಂತೆಯೇ ಏಶ್ಯನ್ ಶೇರು ಪೇಟೆಗಳು ಇಂದು ಗರಿಗೆದರಿದವು.
ಇಂದಿನ ಬೆಳಗ್ಗಿನ ವಹಿವಾಟಿನಲ್ಲಿ ರಿಲಯನ್ಸ್, ಇನ್‌ಫೋಸಿಸ್, ಟಿಸಿಎಸ್, ಎಸ್ ಬ್ಯಾಂಕ್, ಮಾರುತಿ ಸುಜುಕಿ ಶೇರುಗಳು ಅತ್ಯಂತ ಕ್ರಿಯಾಶೀಲವಾಗಿದ್ದವು.
ಟಾಪ್ ಗೇನರ್‌ಗಳು : ಇನ್‌ಫೋಸಿಸ್, ಟೆಕ್ ಮಹೀಂದ್ರ, ಟಿಸಿಎಸ್, ಹಿಂಡಾಲ್ಗೊ, ರಿಲಯನ್ಸ್; ಟಾಪ್ ಲೂಸರ್‌ಗಳು : ಬಿಪಿಸಿಎಲ್, ಎಚ್‌ಪಿಸಿಎಲ್, ಪವರ್ ಗ್ರಿಡ್ ಕಾರ್ಪ್, ಐಓಸಿ, ಭಾರ್ತಿ ಏರ್‌ಟೆಲ್.