ಮುಂಬಯಿ : ಲೋಕಸಭಾ ಚುನಾವಣೆ ಪೂರ್ವ ರಾಲಿ ಮುಂಬಯಿ ಶೇರು ಮಾರುಕಟ್ಟೆಯಲ್ಲಿ ಮುಂದುವರಿದಿದೆ. ಇಂದು ಸೋಮವಾರದ ಆರಂಭಿಕ ವಹಿವಾಟಿನಲ್ಲಿ ಸೆನ್ಸೆಕ್ಸ್ ಸೂಚ್ಯಂಕ 300ಕ್ಕೂ ಅಧಿಕ ಅಂಕಗಳ ಭರ್ಜರಿ ಜಿಗಿತವನ್ನು ದಾಖಲಿಸಿದೆ; ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 11,500 ಅಂಕಗಳ ಮಟ್ಟವನ್ನು ದಾಟಿ ಮುನ್ನುಗ್ಗುತ್ತಿದೆ.
ಭಾರತೀಯ ಶೇರು ಮಾರುಕಟ್ಟೆಯತ್ತ ವಿದೇಶಿ ಬಂಡವಾಳ ನಿರಂತರವಾಗಿ ಹರಿದು ಬರುತ್ತಿರುವುದು ಮತ್ತು ಅದರಿಂದಾಗಿ ದೇಶದ ವಾಣಿಜ್ಯ ಕೊರತೆ ಕಡಿಮೆಯಾಗುತ್ತಿರುವುದೇ ಶೇರು ಮಾರುಕಟ್ಟೆಯಲ್ಲಿನ ರಾಲಿಗೆ ಕಾರಣವಾಗಿದೆ.
ಬೆಳಗ್ಗೆ 10.50ರ ಸುಮಾರಿಗೆ ಸೆನ್ಸೆಕ್ಸ್ ತನ್ನ ಆರಂಭಿಕ ಗಳಿಕೆಯ ಬಹುಪಾಲನ್ನು ಬಿಟ್ಟುಕೊಟ್ಟ 90.80 ಅಂಕಗಳ ಮುನ್ನಡೆಯನ್ನು ಕಾಯ್ದುಕೊಂಡು 38,115.12 ಅಂಕಗಳ ಮಟ್ಟದಲ್ಲಿ ವ್ಯವಹಾರ ನಿರತವಾಗಿತ್ತು.
ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 29.40 ಅಂಕಗಳ ಮುನ್ನಡೆಯನ್ನು ಕಾಯ್ದುಕೊಂಡು 11,456.30 ಅಂಕಗಳ ಮಟ್ಟದಲ್ಲಿ ವ್ಯವಹಾರ ನಿರತವಾಗಿತ್ತು.
ಡಾಲರ್ ಎದುರು ರೂಪಾಯಿ ಇಂದಿನ ಆರಂಭಿಕ ವಹಿವಾಟಿನಲ್ಲಿ 17 ಪೈಸೆಗಳ ಏರಿಕೆಯನ್ನು ದಾಖಲಿಸಿ 68.93 ರೂ. ಮಟ್ಟದಲ್ಲಿ ವ್ಯವಹಾರ ನಿರತವಾಗಿತ್ತು.