ಮುಂಬಯಿ : ವಿದೇಶಿ ಬಂಡವಾಳದ ಒಳ ಹರಿವು ಹೆಚ್ಚಿರುವ ಪರಿಣಾಮವಾಗಿ ಹೊಸ ಉತ್ತೇಜನ ಪಡೆದಿರುವ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಸೋಮವಾರದ ಆರಂಭಿಕ ವಹಿವಾಟಿನಲ್ಲಿ ಸಾರ್ವಕಾಲಿಕ ದಾಖಲೆಯ 33,431.85 ಅಂಕಗಳ ಮಟ್ಟವನ್ನು ತಲುಪಿದೆ.
ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ ಇದೇ ಮೊದಲ ಬಾರಿಗೆ 10,600 ಅಂಕಗಳ ಮಟ್ಟವನ್ನು ದಾಟಿದ ಅದ್ಭುತ ಸಾಧನೆಯನ್ನು ಮಾಡಿದೆ.
ಇಂದಿನ ಆರಂಭಿಕ ವಹಿವಾಟಿನಲ್ಲಿ ಫಾರ್ಮಾ, ಐಟಿ ಮತ್ತು ಬ್ಯಾಂಕಿಂಗ್ ಶೇರುಗಳು ಉತ್ತಮ ಖರೀದಿಯನ್ನು ಕಂಡವು.
ಅಮೆರಿಕದ ವಾಲ್‌ಸ್ಟ್ರೀಟ್ ಶೇರು ಮಾರುಕಟ್ಟೆಯಲ್ಲಿ ಉತ್ತಮ ತೇಜಿ ಕಂಡು ಬಂದಿರುವ ಕಾರಣ ಏಶ್ಯನ್ ಶೇರು ಪೇಟೆಗಳು ಇಂದು ಅದೇ ಟ್ರೆಂಡ್ ಪ್ರತಿಫಲಿಸಿದವು.
ಬೆಳಗ್ಗೆ 10.35ರ ಹೊತ್ತಿಗೆ ಸೆನ್ಸೆಕ್ಸ್ 204.78 ಅಂಕಗಳ ಮುನ್ನಡೆಯನ್ನು ಕಾಯ್ದುಕೊಂಡು 34,358.63 ಅಂಕಗಳ ಮಟ್ಟದಲ್ಲೂ ನಿಫ್ಟಿ ಸೂಚ್ಯಂಕ 56.30 ಅಂಕಗಳ ಮುನ್ನಡೆಯನ್ನು ಕಾಯ್ದುಕೊಂಡು 10,615.20 ಅಂಕಗಳ ಮಟ್ಟದಲ್ಲೂ ಬಿರುಸಿನಿಂದ ವ್ಯವಹಾರ ನಿರತವಾಗಿದ್ದವ.
ಸನ್ ಫಾರ್ಮಾ, ಭಾರ್ತಿ ಏರ್‌ಟೆಲ್, ಐಡಿಯಾ ಸೆಲ್ಯುಲರ್, ಎಸ್ ಬ್ಯಾಂಕ್, ಲೂಪಿನ್ ಶೇರುಗಳು ಇಂದು ಅತ್ಯಂತ ಹೆಚ್ಚು ಕ್ರಿಯಾಶೀಲವಾಗಿದ್ದವು
ಮುಂಬಯಿ ಶೇರು ಪೇಟೆಯಲ್ಲಿ ಇಂದಿನ ಆರಂಭಿಕ ವಹಿವಾಹಿಟಿನಲ್ಲಿ 2,629 ಶೇರುಗಳು ವ್ಯವಹಾರಕ್ಕೆ ಒಳಪಟ್ಟವು; 1,735 ಶೇರುಗಳು ಮುನ್ನಡೆ ಸಾಧಿಸಿದವು; 799 ಶೇರುಗಳು ಹಿನ್ನಡೆಗೆ ಗುರಿಯಾದವು; 95 ಶೇರುಗಳು ಯಾವುದೇ ಬದಲಾವಣೆ ಕಾಣಲಿಲ್ಲ.