ಮುಂಬಯಿ : ಏಶ್ಯನ್ ಶೇರು ಮಾರುಕಟ್ಟೆಗಳಲ್ಲಿ ಮಿಶ್ರ ಪ್ರತಿಕ್ರಿಯೆ ತೋರಿ ಬಂದಿರುವಂತೆಯೇ ದೇಶದ ಜಿಡಿಪಿ ಡಿಸೆಂಬರ್ ತ್ತೈಮಾಸಿಕದಲ್ಲಿ ಶೇ.7.2ರ ಅತ್ಯುತ್ತಮ ಸಾಧನೆಯನ್ನು ದಾಖಲಿಸಿರುವ ಹಿನ್ನೆಲೆಯಲ್ಲಿ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಗುರುವಾರದ ಆರಂಭಿಕ ವಹಿವಾಟಿನಲ್ಲಿ 63 ಅಂಕಗಳ ಜಿಗಿತವನ್ನು ಸಾಧಿಸಿತು.
ನಿನ್ನೆ ಬುಧವಾರದ ವಹಿವಾಟನ್ನು 261.71 ಅಂಕಗಳ ನಷ್ಟದಲ್ಲಿ ಮುಗಿಸಿದ್ದ ಸೆನ್ಸೆಕ್ಸ್ ಇಂದು ಬೆಳಗ್ಗೆ 10.45ರ ಹೊತ್ತಿಗೆ 47.61 ಅಂಕಗಳ ನಷ್ಟದಲ್ಲಿ 34,136.43 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 5.90 ಅಂಕಗಳ ನಷ್ಟದೊಂದಿಗೆ 10,487 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ಡಾಲರ್ ಎದರು ರೂಪಾಯಿ ಇಂದು ಬೆಳಗ್ಗಿನ ವಹಿವಾಟಿನಲ್ಲಿ 8 ಪೈಸೆಯಷ್ಟು ಕುಸಿದು 65.25 ರೂ.ಗಳ ವಿನಿಮಯ ದರವನ್ನು ದಾಖಲಿಸಿತ್ತು.
ಇಂದು ಬೆಳಗ್ಗಿನ ವಹಿವಾಟಿನಲ್ಲಿ ಐಸಿಐಸಿಐ ಬ್ಯಾಂಕ್, ಎಸ್‌ಬಿಐ, ಟಾಟಾ ಸ್ಟೀಲ್, ಮಾರುತಿ ಸುಜುಕಿ ಮತ್ತು ಎಚ್‌ಡಿಎಫ್ಸಿ ಶೇರುಗಳು ಅತ್ಯಂತ ಕ್ರಿಯಾಶೀಲವಾಗಿದ್ದವು.
ಏಶ್ಯನ್ ಶೇರು ಮಾರುಕಟ್ಟೆಗಳ ಪೈಕಿ ಹಾಂಕಾಂಗ್‌ನ ಹ್ಯಾಂಗ್ ಸೆಂಗ್ ಶೇ.0.02 ಮತ್ತು ಶಾಂಘೈ ಕಾಂಪೋಸಿಟ್ ಇಂಡೆಕ್ಸ್ ಶೇ.0.44ರಷ್ಟು ಏರಿಕೆ ಸಾಧಿಸಿತ್ತು.