ಮುಂಬಯಿ : ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ತನ್ನ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಇಂದು ಗುರುವಾರ 40,000 ಅಂಕಗಳ ಸಾರ್ವಕಾಲಿಕ ಎತ್ತರದ ಗಡಿಯನ್ನು ದಾಟಿ ಮಹೋನ್ನತ ಸಾಧನೆ ಮಾಡಿದೆ.
ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಕೂಡ 11,450 ಅಂಕಗಳ ಮಟ್ಟವನ್ನು ದಾಟುವ ಮೂಲಕ ಸಾರ್ವಕಾಲಿಕ ದಾಖಲೆಯ ಹೊಸ ಎತ್ತರದ ಮಟ್ಟವನ್ನು ತಲುಪಿದೆ.
ಇಂದು ಬೆಳಗ್ಗೆ 11 ಗಂಟೆಯ ಹೊತ್ತಿಗೆ ಸೆನ್ಸೆಕ್ಸ್ 138.35 ಅಂಕಗಳ ಮುನ್ನಡೆಯನ್ನು ಕಾಯ್ದುಕೊಂಡ 38,025.91 ಅಂಕಗಳ ಮಟ್ಟದಲ್ಲೂ, ನಿಫ್ಟಿ 30.80 ಅಂಕಗಳ ಮುನ್ನಡೆಯೊಂದಿಗೆ 11,480.80 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ಡಾಲರ್ ಎದುರು ರೂಪಾಯಿ ಇಂದಿನ ಆರಂಭಿಕ ವಹಿವಾಟಿನಲ್ಲಿ 18 ಪೈಸೆಯಷ್ಟು ಏರಿ 68.45 ರೂ. ಮಟ್ಟದಲ್ಲಿ ವ್ಯವಹಾರ ನಿರತವಾಗಿತ್ತು.
ಬ್ಯಾಂಕಿಂಗ್, ಆಯಿಲ್ ಆ್ಯಂಡ್ ಗ್ಯಾಸ್, ಪಿಎಸ್‌ಯು, ರಿಯಲ್ಟಿ, ಹೆಲ್ತ್ ಕೇರ್, ಐಟಿ, ಟೆಕ್, ಮೆಟಲ್, ಇನ್‌ಫ್ರಾಸ್ಟ್ರಕ್ಚರ್, ಕ್ಯಾಪಿಟಲ್ ಗೂಡ್ಸ್, ಎಫ್ಎಂಸಿಜಿ, ಪವರ್ ಮತ್ತು ಆಟೋ ಶೇರುಗಳು ಇಂದು ಭರಾಟೆಯ ಖರೀದಿಯನ್ನು ಕಂಡದ್ದೇ ಸೆನ್ಸೆಕ್ಸ್, ನಿಫ್ಟಿಯ ತೇಜಿಗೆ ಕಾರಣವಾಯಿತು.
ಮಾರುಕಟ್ಟೆಯಲ್ಲಿ ನಗದು ಲಭ್ಯತೆ ಪ್ರಬಲವಾಗಿರುವುದು ಕೂಡ ಶೇರು ಮಾರುಕಟ್ಟೆಯ ತೇಜಿಗೆ ಕಾರಣವೆಂದು ವಿಶ್ಲೇಷಕರು ಹೇಳಿದ್ದಾರೆ. ಹಾಗಿದ್ದರೂ ಏಶ್ಯನ್ ಶೇರು ಪೇಟೆಗಳಲ್ಲಿ ಇಂದು ಅಮೆರಿಕ – ಚೀನ ವಾಣಿಜ್ಯ ಸಮರ ಭೀತಿಯಲ್ಲಿ ಮಿಶ್ರ ಪ್ರತಿಕ್ರಿಯೆ ತೋರಿ ಬಂದಿತ್ತು.