ಮುಂಬಯಿ : ಕಳೆದ ಎರಡು ತಿಂಗಳಲ್ಲಿ ಎರಡನೇ ಬಾರಿಗೆ, ನಿನ್ನೆ ಬುಧವಾರ, ಆರ್‌ಬಿಐ ರಿಪೋ ಮತ್ತು ರಿವರ್ಸ್ ರಿಪೋ ದರಗಳನ್ನು ಏರಿಸಿರುವುದು, ವಿದೇಶಿ ಬಂಡವಾಳದ ಹೊರ ಹರಿವು ನಿರಂತರವಾಗಿ ಸಾಗಿರುವುದು ಮುಂತಾದ ಕಾರಣಗಳಿಂದಾಗಿ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಗುರುವಾರದ ಆರಂಭಿಕ ವಹಿವಾಟಿನಲ್ಲಿ 200 ಅಂಕಗಳ ನಷ್ಟಕ್ಕೆ ಗುರಿಯಾಯಿತು.
ಅಮೆರಿಕ – ಚೀನ ನಡುವಿನ ವಾಣಿಜ್ಯ ಸಮರ ಭೀತಿ ಇನ್ನೂ ಜಗತ್ತನ್ನು ಕಾಡುತ್ತಿರುವ ಹಿನ್ನೆಲೆಯಲ್ಲಿ ಏಶ್ಯನ್ ಶೇರು ಪೇಟೆಗಳು ಇಂದು ಮಂಕಾಗಿರುವುದು ಕೂಡ ಮುಂಬಯಿ ಶೇರು ಪೇಟೆಯ ಮೇಲೆ ಪರಿಣಾಮ ಬೀರಿತು.
ಇಂದು ಬೆಳಗ್ಗೆ 11 ಗಂಟೆಯ ಹೊತ್ತಿಗೆ ಸೆನ್ಸೆಕ್ಸ್ 210.04 ಅಂಕಗಳ ನಷ್ಟದೊಂದಿಗೆ 37,311.58 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 60.70 ಅಂಕಗಳ ನಷ್ಟದೊಂದಿಗೆ 11,285.50 ಅಂಕಗಳ ಮಟ್ಟದಲ್ಲೂ ವ್ಯವಹಾರ ನಿರತವಾಗಿದ್ದವು.
ಬೆಳಗ್ಗಿನ ವಹಿವಾಟನಲ್ಲಿಂದು ಮಾರುತಿ ಸುಜುಕಿ, ರಿಲಯನ್ಸ, ಎಚ್ ಡಿ ಎಫ್ ಸಿ, ಟಾಟಾ ಸ್ಟೀಲ್, ಸನ್ ಫಾರ್ಮಾ ಶೇರುಗಳು ಅತೀ ಹೆಚ್ಚು ಕ್ರಿಯಾಶೀಲವಾಗಿದ್ದವು.
ಇದೇ ವೇಳೆ ಡಾಲರ್ ಎದುರು ರೂಪಾಯಿ 17 ಪೈಸೆಯುಷ್ಟು ಏರಿ ತಿಂಗಳ ಗರಿಷ್ಠ ಮಟ್ಟವಾಗಿ 68.26 ರೂ. ಮಟ್ಟದಲ್ಲಿ ವ್ಯವಹಾರ ನಿರತವಾಗಿತ್ತು.